ಬಿರುಮಲೆ ಬೆಟ್ಟದ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಸಂಜೆ ವೀಕ್ಷಿಸಿದ ಶಾಸಕ ಅಶೋಕ್ ರೈ, ಬೆಟ್ಟದ ಮೇಲೆ ಧ್ಯಾನ ಮಂದಿರ ನಿರ್ಮಾಣಕ್ಕೆ ೨ ಕೋಟಿ ರು. ಹಾಗೂ ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ ೩ ಕೋಟಿ ರು. ಸೇರಿದಂತೆ ಒಟ್ಟು ೫ ಕೋಟಿ ರು. ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿರಿಸಲಾಗುವುದು ಎಂದು ಭರವಸೆ ನೀಡಿದರು.

ಪುತ್ತೂರು: ಬಿರುಮಲೆ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಿನ ೨೫ ವರ್ಷಗಳ ದೂರದೃಷ್ಟಿ ಇರಿಸಿಕೊಂಡು ರೂಪುರೇಷೆ ತಯಾರಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಬಿರುಮಲೆ ಬೆಟ್ಟದ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಸಂಜೆ ವೀಕ್ಷಿಸಿ ಸಮಿತಿ ಸದಸ್ಯರ ಜತೆ ಚರ್ಚೆ ನಡೆಸಿದರು. ಬೆಟ್ಟದ ಮೇಲೆ ಧ್ಯಾನ ಮಂದಿರ ನಿರ್ಮಾಣಕ್ಕೆ ೨ ಕೋಟಿ ರು. ಹಾಗೂ ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ ೩ ಕೋಟಿ ರು. ಸೇರಿದಂತೆ ಒಟ್ಟು ೫ ಕೋಟಿ ರು. ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ಮೀಸಲಿರಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ ಬಿರುಮಲೆ ಬೆಟ್ಟದಲ್ಲಿ ೨ ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ದೀಪ ಅಳವಡಿಕೆ ಹಾಗೂ ೮೦ ಲಕ್ಷ ರು. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿದ್ಯುತ್ ದೀಪ ಅಳವಡಿಕೆ ಪ್ರಗತಿಯಲ್ಲಿದ್ದು, ಉದ್ಯಾನವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆಗಿದೆ ಎಂದರು.ಬೀರಮಲೆಯಲ್ಲಿ ಮಾದರಿ ಹೂವಿನ ತೋಟದ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು, ಹೂವಿನ ಗಿಡ ಮಾರಾಟದ ಜತೆಗೆ ವೀಕ್ಷಣೆಗೆ ಅವಕಾಶ ನೀಡುವ ಹಾಗೆ ಯೋಜನೆ ರೂಪಿಸಲಾಗುವುದು. ಈ ಎಲ್ಲ ಯೋಜನೆಗಳಿಗೆ ಸುಮಾರು ೫೦ ಕೋಟಿ ರು. ಅನುದಾನದ ಅಗತ್ಯವಿದೆ. ಮುಂದೆ ಹಂತ ಹಂತವಾಗಿ ಈ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಮುಂದಿನ ೨೫ ವರ್ಷದ ದೂರದೃಷ್ಟಿ ಇರಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲಾಗುವುದು. ಬೀರಮಲೆ ಬೆಟ್ಟದ ಸಂಪರ್ಕ ರಸ್ತೆ ವಿಸ್ತರಣೆ, ಬರಹಗಾರರ ಕೇಂದ್ರ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಜೊತೆ ಚರ್ಚಿಸಲಾಗಿದೆ. ಅರಣ್ಯ ಇಲಾಖೆಯ ಉದ್ಯಾನವನವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಬೆಟ್ಟದ ಸೌಂದರ್ಯ ಕಾಣಲಿ

ಬಿರುಮಲೆ ಬೆಟ್ಟದ ತುತ್ತ ತುದಿಗೆ ಏರಿದ ಶಾಸಕ ರೈ ಅಲ್ಲಿಯು ನಗರಕ್ಕೆ ಬಿರುಮಲೆ ಬೆಟ್ಟದ ಸೌಂದರ್ಯ ಕಾಣುವ ಹಾಗೆ ವಿದ್ಯುತ್ ದೀಪದ ವ್ಯವಸ್ಥೆ ಒದಗಿಸುವಂತೆ ಕಾಮಗಾರಿ ನಿರ್ವಹಣಾ ಸಂಸ್ಥೆಗೆ ಸೂಚಿಸಿದರು. ಇಡೀ ಬಿರುಮಲೆ ಬೆಟ್ಟ ನಗರದೆಲ್ಲೆಡೆ ಝಗಮಗಿಸುವ ಹಾಗೇ ಬೆಳಕಿನ ವ್ಯವಸ್ಥೆ ಇರಲಿ ಎಂದು ಸೂಚನೆ ನೀಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗಜೀವನ್ ದಾಸ್ ರೈ, ಉಪಾಧ್ಯಕ್ಷ ಕ್ಸೇವಿಯರ್ ಡಿಸೋಜ, ಸದಸ್ಯರಾದ ಹೆರಾಲ್ಡ್ ಮಾರ್ಥ, ಕೇಶವ ಎನ್, ಸಾಜ ರಾಧಾಕೃಷ್ಣ ಆಳ್ವ, ಡಾ. ಸತ್ಯವತಿ, ಕೆಆರ್ ಡಿಎಲ್ ಎಂಜಿನಿಯರ್ ದೀಕ್ಷಿತ್, ಜಯಪ್ರಕಾಶ್ ಬದಿನಾರು ಮತ್ತಿತರರು ಉಪಸ್ಥಿತರಿದ್ದರು.