ಸಾರಾಂಶ
ನಗರದ ಮಂಟೂರ ರಸ್ತೆಯ ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲು ಶಾಸಕ ಪ್ರಸಾದ ಅಬ್ಬಯ್ಯ ಮುಂದಾಗಿದ್ದು, ಅಲ್ಲಿನ ನಿವಾಸಿಗಳು ವಿರೋಧಿಸಿದ್ದಾರೆ
ಹುಬ್ಬಳ್ಳಿ: ನಗರದ ಮಂಟೂರ ರಸ್ತೆಯ ಸ್ಮಶಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲು ಶಾಸಕ ಪ್ರಸಾದ ಅಬ್ಬಯ್ಯ ಮುಂದಾಗಿದ್ದು, ಅಲ್ಲಿನ ನಿವಾಸಿಗಳು ವಿರೋಧಿಸಿದ್ದಾರೆ. ಅಲ್ಲಿನ ಜನರ ಪರವಾಗಿ ಶ್ರೀರಾಮಸೇನೆ ನಿಲ್ಲಲಿದೆ. ಪಾಲಿಕೆ ಆಯುಕ್ತರು ಸೆ. 25ರೊಳಗೆ ಈ ಇಂದಿರಾ ಕ್ಯಾಂಟಿನ್ ತೆರವುಗೊಳಿಸಬೇಕು. ಇಲ್ಲದೇ ಹೋದಲ್ಲಿ ಸೆ. 26ರಂದು ನಾವೇ ತೆರವುಗೊಳಿಸುತ್ತೇವೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮಗೆ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ, ಸ್ಮಶಾನದ ಜಾಗೆಯಲ್ಲಿ ನಿರ್ಮಿಸಲು ವಿರೋಧವಿದೆ. ಈ ಜಾಗ ಹೊರತುಪಡಿಸಿ ಅವರು ಎಲ್ಲಿಯಾದರೂ ಕ್ಯಾಂಟೀನ್ ನಿರ್ಮಿಸಿಕೊಳ್ಳಲಿ ಎಂದರು.
ಸ್ಮಶಾನದಲ್ಲಿ ಯಾವುದೇ ಚಟುವಟಿಕೆ ಮಾಡಬಾರದೆಂದು ಕೋರ್ಟ್ ಆದೇಶ ನೀಡಿದೆ. ಈ ಹಿಂದೆ 8 ಎಕರೆ ಭೂಮಿ ನುಂಗಲು ಹೊರಟಾಗ ತಡೆದಿದ್ದೇವೆ ಎಂದ ಅವರು, ನಾವು ನೀಡಿದ ಗಡುವಿನೊಳಗೆ ಕಾಂಟೀನ್ ತೆರವುಗೊಳಿಸದೆ ಇದ್ದರೆ ಸೆ. 26ರಂದು ಬೆಳಗ್ಗೆ 10ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ಮೂಲಕ ಸ್ಮಶಾನಕ್ಕೆ ಸಲಿಕೆ, ಗುದ್ದಲಿ, ಪಿಕಾಸಿಯೊಂದಿಗೆ ತೆರಳಿ ಕ್ಯಾಂಟೀನ್ ತೆರವುಗೊಳಿಸುತ್ತೇವೆ ಎಂದು ತಿಳಿಸಿದರು.
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರ ಕುರಿತು ಶಾಸಕರು ಏಕವಚನದಲ್ಲಿ ಮಾತನಾಡಿದ್ದು ತರವಲ್ಲ. ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ತಕ್ಷಣ ಅಬ್ಬಯ್ಯ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನೀವು ಹೋಗುವ ಪ್ರತಿ ಸ್ಥಳಕ್ಕೆ ಬಂದು ಪ್ರತಿರೋಧ ವ್ಯಕ್ತಪಡಿಸುತ್ತೇವೆ ಎಂದು ಎಚ್ಚರಿಸಿದರು.
ಶಾಸಕರಿಗೆ ದಲಿತರ ಮೇಲೆ ನಿಜವಾದ ಕಾಳಜಿ ಇದಿದ್ದರೆ ವಾಲ್ಮೀಕಿ ಹಗರಣ, ಅಂಜಲಿ ಅಂಬಿಗೇರ, ನೇಹಾ ಹಿರೇಮಠ ಹತ್ಯೆಯಾದಾಗ ಏಕೆ ಸುಮ್ಮನಿದ್ದರು. ತಮ್ಮದೆ ಸರ್ಕಾರವಿದ್ದು ಈ ಬಗ್ಗೆ ಧ್ವನಿ ಎತ್ತಿ ನ್ಯಾಯಕೊಡಿಸಬಹುದಿತ್ತಲ್ಲ ಎಂದು ಗಂಗಾಧರ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆಯ ರಾಜ್ಯ ಶಾರೀರಿಕ ಪ್ರಮುಖ ಮಹೇಶ ರೋಖಡೆ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಿಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟಕರ, ಉಪಾಧ್ಯಕ್ಷ ಗುಣಧರ ಸೇರಿದಂತೆ ಹಲವರಿದ್ದರು.