ಮಾಸೂರಿನ ಸ್ವಾತಿ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರ ವಿತರಣೆ

| Published : Mar 22 2025, 02:03 AM IST

ಸಾರಾಂಶ

ಸ್ವಾತಿ ಹತ್ಯ ಪ್ರಕರಣವನ್ನು ಲವ್ ಜಿಹಾದ್ ಎಂಬ ಬಣ್ಣ ಬಳಿಯುವುದು ಸರಿಯಲ್ಲ. ಯಾರೇ ಹತ್ಯೆ ಮಾಡಿದರೂ ತಪ್ಪು ತಪ್ಪೇ. ಪ್ರಕರಣದಲ್ಲಿ ಯಾವೊಬ್ಬ ಆರೋಪಿಯನ್ನೂ ರಕ್ಷಣೆ ಮಾಡುವ ಮಾತೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.

ರಟ್ಟೀಹಳ್ಳಿ: ಇತ್ತೀಚೆಗೆ ಹತ್ಯೆಯಾದ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಅವರ ಮನೆಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ನೀಡಲಾದ ₹5 ಲಕ್ಷ ಪರಿಹಾರದ ಆದೇಶ ಪ್ರತಿ ಹಾಗೂ ವೈಯಕ್ತಿಕ ಸಹಾಯಧನ ವಿತರಿಸಿದರು.ನಂತರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರು, ಆಕಸ್ಮಿಕ ಘಟನೆ ನಡೆದಿದ್ದು, ಮೃತ ಸ್ವಾತಿ ಹತ್ಯೆ ಮಾಡಿದ ಆರೋಪಿಗಳಿಗೆ ಸರ್ಕಾರದಿಂದ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು. ಭವಿಷ್ಯದಲ್ಲಿ ಮೃತ ಸ್ವಾತಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ಹೆಚ್ಚಿನ ಸಹಾಯ ಸಹಕಾರ ನೀಡಲಾಗುವುದು ಎಂದರು.

ಸ್ವಾತಿ ಹತ್ಯ ಪ್ರಕರಣವನ್ನು ಲವ್ ಜಿಹಾದ್ ಎಂಬ ಬಣ್ಣ ಬಳಿಯುವುದು ಸರಿಯಲ್ಲ. ಯಾರೇ ಹತ್ಯೆ ಮಾಡಿದರೂ ತಪ್ಪು ತಪ್ಪೇ. ಪ್ರಕರಣದಲ್ಲಿ ಯಾವೊಬ್ಬ ಆರೋಪಿಯನ್ನೂ ರಕ್ಷಣೆ ಮಾಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಶಾಸಕ ಯು.ಬಿ. ಬಣಕಾರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮುಂತಾದವರು ಇದ್ದರು.ಸೆಲ್‌ನಲ್ಲಿರುವಾಗಲೇ ಆರೋಪಿಗೆ ಮೊಬೈಲ್?ಹಾವೇರಿ: ರಟ್ಟೀಹಳ್ಳಿ ತಾಲೂಕಿನ ಮಾಸೂರಿನ ಯುವತಿ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಆರೋಪಿ ನಯಾಜ್‌ಗೆ ಹಲಗೇರಿ ಪೊಲೀಸರು ಸೆಲ್‌ನಲ್ಲಿ ಇರುವಾಗಲೇ ಮೊಬೈಲ್‌ನಲ್ಲಿ ಮಾತನಾಡಲು ಅವಕಾಶ ನೀಡುತ್ತಿದ್ದಾರೆ ಎಂದು ಸ್ವಾತಿ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಹತ್ಯೆಗೀಡಾದ ಯುವತಿ ಸ್ವಾತಿ ದೊಡ್ಡಪ್ಪ ರಾಜಪ್ಪ ಬ್ಯಾಡಗಿ ಅವರು ಇತ್ತೀಚೆಗೆ ಹಲಗೇರಿ ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹತ್ಯೆಯ ಆರೋಪಿ ನಯಾಜ್ ಪೊಲೀಸ್ ಠಾಣೆಯ ಸೆಲ್‌ನಲ್ಲಿಯೇ ಮೊಬೈಲ್‌ನಲ್ಲಿ ಮಾತನಾಡುತ್ತಿರುವುನ್ನು ಗಮನಿಸಿದ್ದರು. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದ್ದರು. ಆದರೆ ಪೊಲೀಸರು ಇವರಿಗೆ ಸೂಕ್ತ ಸ್ಪಂದನೆ ನೀಡಿರಲಿಲ್ಲ. ಹೀಗಾಗಿ ಪ್ರಕರಣದ ತನಿಖೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಸ್ವಾತಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಸರಿಯಾಗಿ ಮಾಡುತ್ತಿಲ್ಲ. ಅವರ ತನಿಖೆ ಮೇಲೆ ಅನುಮಾನ ಮೂಡುತ್ತಿದೆ. ಮಗಳ ಸಾವಿಗೆ ನ್ಯಾಯ ಸಿಗಬೇಕು. ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಾಜಪ್ಪ ಆಗ್ರಹಿಸಿದ್ದಾರೆ. ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ

ಹಾವೇರಿ: ಸಾಲಬಾಧೆ ತಾಳಲಾರದೇ ರೈತರೊಬ್ಬರು ಹುಣಸೆಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಶಿವರಾಜ ಮಲ್ಲಪ್ಪ ಬಣಕಾರ (30) ಮೃತ ರೈತ. ಅವರು ತಮ್ಮ ತಾಯಿಯ ಹೆಸರಿನಲ್ಲಿರುವ 2.20 ಎಕರೆ ಜಮೀನಿನ ಕೆಲಸಕ್ಕೆಂದು ಕಬ್ಬೂರಿನ ಕೆವಿಜಿ ಬ್ಯಾಂಕಿನಲ್ಲಿ ₹2 ಲಕ್ಷ ಸಾಲ ಮಾಡಿದ್ದರು. ಅಲ್ಲದೇ ಹೊಸ ಮನೆ ಕಟ್ಟುವ ಸಲುವಾಗಿ ಊರಿನ ಅವರಿವರ ಬಳಿ ಸುಮಾರು ₹6 ಲಕ್ಷ ಸಾಲ ಪಡೆದಿದ್ದರು. ಆದರೆ ಮನೆ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆ ಹಾಗೂ ಈಗಾಗಲೇ ಮಾಡಿಕೊಂಡ ಸಾಲವನ್ನು ತೀರಿಸುವುದು ಹೇಗೆ ಎಂದು ಅಂಜಿ ಗುರುವಾರ ತಮ್ಮ ಜಮೀನಿನ ಹತ್ತಿರದ ಹುಣಸೆಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ನೇತ್ರಾ ಬಣಕಾರ ಎಫ್‌ಐಆರ್ ದಾಖಲಿಸಿದ್ದಾರೆ.ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.