ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಕಷ್ಟದ ಕೆಲಸ.
ಊರಕೇರಿ ರಾಮನಾಥ ಪ್ರೌಢಶಾಲೆ ರಜತ ಮಹೋತ್ಸವ ಸಂಪನ್ನ
ಕನ್ನಡಪ್ರಭ ವಾರ್ತೆ ಕುಮಟಾಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಕಷ್ಟದ ಕೆಲಸ. ಊರಕೇರಿ ರಾಮನಾಥ ಪ್ರೌಢಶಾಲೆ ಸಂಘಟಿತ ಪ್ರಯತ್ನದ ಫಲ. ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ರಾಮನಾಥ ಪ್ರೌಢಶಾಲೆಯ ಸಭಾಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ₹೫ ಲಕ್ಷ ಅನುದಾನ ನೀಡುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ಘೋಷಿಸಿದರು.
ತಾಲೂಕಿನ ಊರಕೇರಿಯಲ್ಲಿ ಎನ್.ಎಸ್.ಎಸ್. ಸೊಟೈಟಿಯ ರಾಮನಾಥ ಪ್ರೌಢಶಾಲೆಯ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯ್ಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಇಲ್ಲಿನ ಪ್ರತಿಯೊಬ್ಬ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಯಿಂದ ಶ್ರೇಷ್ಠ ಸಾಧನೆಯಾಗಬೇಕು ಎಂದು ಆಶಿಸಿದರು.
ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ರಜತ ಸಂಭ್ರಮದಲ್ಲಿ ಶಾಲೆಗಾಗಿ ದುಡಿದ ಎಲ್ಲರನ್ನು ಸ್ಮರಿಸಿ ಗೌರವಿಸಿದ್ದು ಅರ್ಥಪೂರ್ಣ. ಜಿಲ್ಲೆಯ ಎಲ್ಲ ತಾಲೂಕಿಗೆ ಪಿಯು, ಡಿಗ್ರಿ ಕಾಲೇಜು ಹಾಗು ಜಿಪಂ ಮಟ್ಟದಲ್ಲಿ ಪ್ರೌಢ ಶಾಲೆಗಳನ್ನು ನಾನು ಸಚಿವನಾಗಿದ್ದಾಗ ತಂದಿದ್ದೇನೆ. ಶಿಕ್ಷಣದ ಮಹತ್ವದಿಂದಲೇ ನಮ್ಮ ಜಿಲ್ಲೆ ಸುಶಿಕ್ಷಿತವಾಗಿದೆ ಎಂದರು.ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟಿತವಾಗಿದ್ದು, ಶಾಲೆ ಮತ್ತು ಶಿಕ್ಷಣದ ಮಹತ್ವವನ್ನು ಊರಕೇರಿ ಸಾರಿದೆ. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಲ್ಲಿ ಸಾಧನೆ ಮಾಡಿ ಉಜ್ವಲ ಭವಿಷ್ಯವನ್ನು ವಿದ್ಯಾರ್ಥಿಗಳು ಕಟ್ಟಿಕೊಳ್ಳಲಿ ಎಂದರು.
ಶಾಲಾಡಳಿತ ಅಧ್ಯಕ್ಷ ಸುರೇಶ ಎಸ್. ನಾಯ್ಕ ಸ್ವಾಗತಿಸಿದರು. ರಜತ ಸಮಿತಿ ಅಧ್ಯಕ್ಷ ಆರ್.ಎನ್. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಬಿಇಒ ಉದಯ ನಾಯ್ಕ, ಯಲ್ಲಾಪುರ ಪ್ರಭಾರೆ ಬಿಇಒ ರೇಖಾ ಸಿ. ನಾಯ್ಕ ಮಾತನಾಡಿದರು.ವಾಲಗಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಿ ಆರ್. ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾರಂಭದಿಂದ ಎಲ್ಲ ವರ್ಷಗಳ ಎಸ್‌ಎಸ್‌ಎಲ್‌ಸಿ ಸಾಧಕರು, ಶಿಕ್ಷಕರು, ಆಡಳಿತ ಮಂಡಳಿಯವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಗ್ರಾಪಂ ಸದಸ್ಯ ಮಂಜುನಾಥ ನಾಯ್ಕ, ಗಂಗೆ ಪಟಗಾರ, ಯಲ್ಲಾಪುರ ಪ್ರಭಾರ ಬಿಇಒ ರೇಖಾ ನಾಯ್ಕ, ಯಶೋದಾ ನಾಯ್ಕ, ಹನುಮಂತ ಪಟಗಾರ, ಗಣಪತಿ ಭಟ್, ವಿಜಯಲಕ್ಷ್ಮೀ ಭಟ್, ಶಾಲೆ ಅಭಿವೃದ್ಧಿ ಸಮಿತಿಯ ಶಂಕರ ನಾಯ್ಕ, ಪೂರ್ವ ವಿದ್ಯಾರ್ಥಿ ಸಂಘದ ಮನೋಜ ನಾಯ್ಕ, ಮುಖ್ಯಶಿಕ್ಷಕ ಎಸ್.ಜಿ.ಭಟ್, ಲಂಬೋದರ ನಾಯ್ಕ, ಶಂಕರ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿ ಕಾವ್ಯ ನಾಯ್ಕ ಇತರರು ಇದ್ದರು. ಶಿಕ್ಷಕ ಮಂಜುನಾಥ ನಾಯ್ಕ, ಸುಜಾತ ನಾಯ್ಕ ನಿರೂಪಿಸಿದರು. ಲಂಬೋದರ ನಾಯ್ಕ ವಂದಿಸಿದರು.