ಆನಂದಾಶ್ರಮ ಟ್ರಸ್ಟ್‌ಗೆ ಮದುವೆ ಆಯರ್‌ 5 ಲಕ್ಷ ರು. ದೇಣಿಗೆ

| Published : Feb 09 2024, 01:45 AM IST

ಸಾರಾಂಶ

ಸಿಂಗನಹಳ್ಳಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ನಿಂಗನಗೌಡ ಬಿ. ಹೊಸಮನಿ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಬಂದಿದ್ದ ಸಂಪೂರ್ಣ ಆಹೇರಿ 5 ಲಕ್ಷ ರು. ಗಳ ಹಣವನ್ನು ಗ್ರಾಮದ ರಾಮಲಿಂಗೇಶ್ವರ ಆನಂದಾಶ್ರಮ ಟ್ರಸ್ಟ್ ಗೆ ಭಕ್ತಿ ಪೂರ್ವಕವಾಗಿ ದೇಣಿಗೆ ಸಲ್ಲಿಸಿ ಸಮಾಜದಲ್ಲಿ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಹಾಪುರ

ತಾಲೂಕಿನ ಸಿಂಗನಹಳ್ಳಿ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ನಿಂಗನಗೌಡ ಬಿ. ಹೊಸಮನಿ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಬಂದಿದ್ದ ಸಂಪೂರ್ಣ ಆಯರ್‌ 5 ಲಕ್ಷ ರು. ಗಳ ಹಣವನ್ನು ಗ್ರಾಮದ ರಾಮಲಿಂಗೇಶ್ವರ ಆನಂದಾಶ್ರಮ ಟ್ರಸ್ಟ್ ಗೆ ಭಕ್ತಿ ಪೂರ್ವಕವಾಗಿ ದೇಣಿಗೆ ಸಲ್ಲಿಸಿ ಸಮಾಜದಲ್ಲಿ ಮಾದರಿಯಾಗಿದ್ದಾರೆ.

ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಜ.28ರಂದು ತಮ್ಮ ಇಬ್ಬರು ಹೆಣ್ಣು ಮಕ್ಕಳ ಮದುವೆ ಅದ್ಧೂರಿಯಾಗಿ ಏರ್ಪಡಿಸಿದ್ದರು. ಸಾವಿರಾರು ಆತ್ಮೀಯರು ಬಂಧು-ವರ್ಗ ಅಲ್ಲದೇ ನೂರಾರು ಜನ ನಾಡಿನ ವಿವಿಧ ಮಠಾಧೀಶರು, ಸ್ವಾಮೀಜಿಗಳು ಮದುವೆಯಲ್ಲಿ ಪಾಲ್ಗೊಂಡಿದ್ದರು.

ಆತ್ಮೀಯರು ಹೊಸಮನಿ ಪರಿವಾರದ ಮದುವೆಯಲ್ಲಿ ಆಹೇರಿ ಬರೆಯಿಸಿದ್ದರು. ಸಾಯಂಕಾಲ ಆ ಮೊತ್ತ 5,03,111 ಸಂಗ್ರಹವಾಗಿತ್ತು. ಲಕ್ಷಾಂತರ ವೆಚ್ಚ ಮಾಡಿ ಅದ್ಧೂರಿಯಾಗಿ ಮದುವೆ ಮಾಡಿದ ನಿಂಗನಗೌಡ ಅವರು ಮರುದಿನ ಬೆಳಿಗ್ಗೆ ಆ ಹಣವನ್ನು ಸಂಪೂರ್ಣವಾಗಿ ಗ್ರಾಮದ ತಮ್ಮ ಆರಾಧ್ಯ ದೈವ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ ಗೆ ದೇಣಿಗೆಯಾಗಿ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಕಳೆದ ವರ್ಷ ತಮ್ಮ ಮೊದಲ ಮಗಳ ಮದುವೆ ಮಾಡಿದ್ದ ಹೊಸಮನಿ ಪರಿವಾರ ಅಂದಿನ ಮದುವೆಯಲ್ಲಿ ಸಂಗ್ರಹವಾಗಿದ್ದ ಲಕ್ಷಾಂತರ ಆಹೇರಿ ಹಣವನ್ನು ಇದೇ ಟ್ರಸ್ಟ್ ಗೆ ಸಲ್ಲಿಸಿದ್ದರೆಂದು ಗ್ರಾಮದ ಹಲವರು ಸ್ಮರಿಸುತ್ತಾರೆ.