ಸಾರಾಂಶ
ಹಾವೇರಿ:ಮಳೆಯಿಂದ ಬಿದ್ದಿರುವ ಮನೆಗಳಿಗೆ ೫ ಲಕ್ಷ ರು. ಪರಿಹಾರ ನೀಡಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿಯಿಂದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜನತೆ ತತ್ತರಿಸಿದ್ದಾರೆ. ಮಳೆಯಿಂದ ಮನೆಗಳು ಬೀಳುತ್ತಲೇ ಇವೆ. ಸವಣೂರು ತಾಲೂಕಿನ ಮಾದಾಪೂರ ಗ್ರಾಮದಲ್ಲಿ ಮನೆಯ ಚಾವಣಿ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ. ೧೨೦೦ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಹೀಗಾಗಿ ಬಿದ್ದಿರುವ ಮನೆಗಳಿಗೆ ೫ ಲಕ್ಷ ರು. ಪರಿಹಾರ ಘೋಷಣೆ ಮಾಡಬೇಕು. ತಾಲೂಕಾಡಳಿತ ಗ್ರಾಮೀಣ ಪ್ರದೇಶಕ್ಕೆ ತೆರಳಿ ಹಳೆಯ ಮನೆಗಳಲ್ಲಿ ಜನತೆ ವಾಸ ಮಾಡದಂತೆ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಹರಿದಿರುವ ವರದಾ, ಕುಮದ್ವತಿ, ಧರ್ಮಾ, ತುಂಗಭದ್ರಾ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಕೂಡಲೇ ಅಧಿಕಾರಿಗಳು ಸರಿಯಾದ ಸಮೀಕ್ಷೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಜಮೀನುಗಳಲ್ಲಿ ವಿದ್ಯುತ್ ತಂತಿಗಳಿಂದ ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಪ್ರಮುಖರಾದ ಕುಮಾರಸ್ವಾಮಿ ಯೋಗಿಮಠ, ಎಂ.ಎನ್. ನಾಯಕ್, ಎಂ.ಡಿ. ಕಾಲೇಬಾಗ, ರುದ್ರಗೌಡ ಪಾಟೀಲ, ಮಹಮ್ಮದ್‌ಶಫಿ ಮುಲ್ಲಾ, ಪರೀದ್ ನದಾಪ್, ಲಿಂಗನಗೌಡ ಪಾಟೀಲ, ಖಲಿಲಸಾಬ ದೊಡ್ಮನಿ ಇತರರು ಇದ್ದರು.