ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಅಣೆಚನ್ನಾಪುರ ಗ್ರಾಮದ ಬಳಿ ಕಳೆದ ಅ.23ರಂದು ರಸ್ತೆಯಲ್ಲಿ ಹರಿಯುತ್ತಿದ್ದ ಭಾರೀ ಪ್ರಮಾಣದ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದ ಕಂಬದಹಳ್ಳಿ ಕೆ.ಎಂ.ರಾಮಚಂದ್ರೇಗೌಡ ಕುಟುಂಬಕ್ಕೆ ಸರ್ಕಾರದಿಂದ ಬಿಡುಗಡೆಯಾದ 5 ಲಕ್ಷ ರು. ಗಳ ಪರಿಹಾರ ಮಂಜೂರಾತಿ ಪತ್ರವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಶುಕ್ರವಾರ ವಿತರಿಸಿದರು.ಮೃತ ಕೆ.ಎಂ.ರಾಮಚಂದ್ರೇಗೌಡರ ಪತ್ನಿ ಭಾಗ್ಯಮ್ಮರಿಗೆ ಸಾಂತ್ವನ ಹೇಳಿ ಪರಿಹಾರ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ ಎಂದರು.
ರೈತರ ಕೃಷಿ ಚಟುವಟಿಕೆಗೆ ಬಹಳಷ್ಟು ಅನುಕೂಲವಾಗಿದೆ. ಕೆರೆಗಳು ಕೋಡಿಯಾಗಿ ಹೆಚ್ಚುವರಿ ನೀರು ಹರಿಯುವ ಸಂದರ್ಭದಲ್ಲಿ ಆ ಮಾರ್ಗದಲ್ಲಿ ಸಂಚರಿಸುವ ರೈತರು ಜಾಗೃತರಾಗಿರಬೇಕು ಎಂದು ಮನವಿ ಮಾಡಿದರು.ತಾಲೂಕಿನ ಕಂಬದಹಳ್ಳಿಯಿಂದ ಕಾರ್ಯನಿಮಿತ್ತ ಅಣೆಚನ್ನಾಪುರ ಮಾರ್ಗವಾಗಿ ಬೆಳ್ಳೂರು ಕಡೆಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ಕೆ.ಎಂ.ರಾಮಚಂದ್ರೇಗೌಡ ರಸ್ತೆಯಲ್ಲಿ ಹರಿಯುತ್ತಿದ್ದ ಭಾರೀ ಪ್ರಮಾಣದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವುದು ನೋವಿನ ಸಂಗತಿ. ಮನೆಗೆ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆರ್ಥಿಕವಾಗಿ ಶಕ್ತಿ ನೀಡುವ ಉದ್ದೇಶದಿಂದ ಸರ್ಕಾರದಿಂದ 5 ಲಕ್ಷ ರು.ಪರಿಹಾರ ಕೊಡಿಸಲಾಗಿದೆ ಎಂದರು.
ಈ ವೇಳೆ ತಹಸೀಲ್ದಾರ್ ಜಿ.ಆದರ್ಶ್, ಕಂದಾಯ ಇಲಾಖೆ ಅಧಿಕಾರಿ ಮಧುಸೂಧನ್ ಸೇರಿದಂತೆ ಹಲವರು ಇದ್ದರು.ಎತ್ತರ ಜಿಗಿತ ರಾಜ್ಯ ಮಟ್ಟಕ್ಕೆ ಕೆ.ಆರ್.ಹರ್ಷ ಆಯ್ಕೆನಾಗಮಂಗಲ:ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತಾಲೂಕಿನ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ಕೆ.ಆರ್.ಹರ್ಷ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಗ್ರಾಮೀಣ ಸರ್ಕಾರಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ ಹರ್ಷ ಓದಿನ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದನು. ನ.4ರಂದು ಮಂಡ್ಯದ ಸರ್ ಎಂ.ವಿ.ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿ ಕೆ.ಆರ್.ಹರ್ಷ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ, ಮುಖ್ಯ ಶಿಕ್ಷಕರೂ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ಪೋಷಕರು ಅಭಿನಂದಿಸಿದ್ದಾರೆ.