ಗೋಳೂರು ಹಾಡಿಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಸಾವು

| Published : Aug 28 2024, 12:49 AM IST

ಸಾರಾಂಶ

ಮಂಗಳವಾರ ಬೆಳಗಿನ ಜಾವ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾಳ ತೀವ್ರ ಗಾಯಗೊಂಡರು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ. ಕುಪ್ಪೆ ವಲಯದ ಆನೆಮಾಳ ಗಸ್ತಿನ ಗೋಳೂರು ಹಾಡಿಯಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಜರುಗಿದೆ.ಗೋಳೂರು ಹಾಡಿಯ ಕಾಳ (75) ಮೃತಪಟ್ಟವರು. ಅವರು ಸೋಮವಾರ ರಾತ್ರಿ ತನ್ನ ಮನೆಯ ಮುಂದೆ ಮಲಗಿದ್ದು, ಮಂಗಳವಾರ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಯ ಸಮಯದಲ್ಲಿ ಹಾಡಿಗೆ ನುಗ್ಗಿದ ಕಾಡಾನೆ ದಾಳಿ ನಡೆಸಿದ ಪರಿಣಾಮ ಕಾಳ ತೀವ್ರ ಗಾಯಗೊಂಡರು. ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಕಾಳ ಅವರನ್ನು ಎಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಡಿಸಿಎಫ್, ವಲಯ ಅರಣ್ಯ ಅಧಿಕಾರಿ ಮಧು ಭೇಟಿ ನೀಡಿದ್ದರು.ಅಂತರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಫ್ ಸೀಮಾ ಮಾತನಾಡಿ, ಮೃತ ಕುಟುಂಬದವರಿಗೆ ಸರ್ಕಾರದ ವತಿಯಿಂದ 15 ಲಕ್ಷ ರು. ಗಳನ್ನು ನೀಡಲಾಗುತ್ತಿದ್ದು, ಮುಂದಿನ ಐದು ವರ್ಷಗಳವರೆಗೆ ಮೃತ ಕುಟುಂಬದವರಿಗೆ ಜೀವನ ನಿರ್ವಹಣೆಗಾಗಿ ಪ್ರತಿ ಮಾಹೆ ನಾಲ್ಕು ಸಾವಿರ ರು. ಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.