ಆಕಸ್ಮಿಕ ಬೆಂಕಿಯಿಂದ 5 ಕುರಿಮರಿ ಹಾಗೂ 10 ಲಕ್ಷ ರೂ. ಹಣ ಭಸ್ಮ

| Published : Apr 23 2024, 12:46 AM IST

ಸಾರಾಂಶ

ಕುರಿದೊಡ್ಡಿಯಲ್ಲಿದ್ದ 5 ಕುರಿಮರಿಗಳು ಸೇರಿದಂತೆ ಎಲ್ಲ ಸಾಮಗ್ರಿಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಆಕಸ್ಮಿಕವಾಗಿ ಗುಡಿಸಲು ಹಾಗೂ ಕುರಿದೊಡ್ಡಿಗೆ ಬೆಂಕಿ ತಗುಲಿದ ಪರಿಣಾಮ ಗುಡಿಸಲಿನಲ್ಲಿದ್ದ ₹10 ಲಕ್ಷ ನಗದು, 12 ತೊಲೆ ಬಂಗಾರ, 25 ತೊಲೆ ಬೆಳ್ಳಿ, ಕುರಿದೊಡ್ಡಿಯಲ್ಲಿದ್ದ 5 ಕುರಿಮರಿಗಳು ಸೇರಿದಂತೆ ಎಲ್ಲ ಸಾಮಗ್ರಿಗಳು ಸುಟ್ಟು ಭಸ್ಮವಾದ ಘಟನೆ ಸೋಮವಾರ ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಬೆಂಕಿಗೆ ತುತ್ತಾದ ಗುಡಿಸಲು ಕಿಲ್ಲಾರಹಟ್ಟಿ ಗ್ರಾಮದ ಶಂಕ್ರಮ್ಮ ದುರಗಪ್ಪ ಕ್ಯಾರೇಳಗೆ ಸೇರಿದ್ದು ಎನ್ನಲಾಗಿದೆ. ಗುಡಿಸಲು ಹಾಗೂ ಕುರಿದೊಡ್ಡಿ ಅಕ್ಕಪಕ್ಕದಲ್ಲಿದ್ದವು. ಮನೆ ನಿರ್ಮಾಣ ಹಾಗೂ ಮೊಮ್ಮಗಳ ಮದುವೆ ಕಾರ್ಯಕ್ರಮಕ್ಕೆ ಕೂಡಿಟ್ಟ ಹಣ ಹಾಗೂ ಬೆಳ್ಳಿ ಬಂಗಾರವು ಸುಟ್ಟು ಕರಕಲಾಗಿವೆ.

ಮುಗಿಲು ಮುಟ್ಟಿದ್ದ ಆಕ್ರಂದನ:

ಶಂಕ್ರಮ್ಮ ಮತ್ತು ಅವರ ಕುಟುಂಬದವರು ಕಷ್ಟಪಟ್ಟು ದುಡಿದು ಸಂಗ್ರಹಿಸಿಟ್ಟಿದ್ದ ನಗದು ಹಣ, ಬೆಳ್ಳಿ, ಬಂಗಾರ ಹಾಗೂ ಕುರಿ ಮರಿಗಳು ಕಣ್ಣು ಎದುರಿಗೆ ಸುಟ್ಟು ಹೋಗಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಂಕಿ ನಂದಿಸುವಲ್ಲಿ ವಿಫಲ:

ಏಕಾಏಕಿಯಾಗಿ ಬೆಂಕಿಯು ಗುಡಿಸಲಿಗೆ ತಾಗಿದ ಪರಿಣಾಮವಾಗಿ ಗ್ರಾಮಸ್ಥರು ಎಷ್ಟೆ ಪ್ರಯತ್ನಪಟ್ಟರೂ ಗುಡಿಸಲನ್ನು ಕಾಪಾಡಿಕೊಳ್ಳಲು ಆಗಲಿಲ್ಲ ಎನ್ನುತ್ತಾರೆ ಸ್ಥಳೀಯರು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಸಿಬ್ಬಂದಿ, ಪೊಲೀಸರು ಮತ್ತು ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಕಿಲ್ಲಾರಹಟ್ಟಿಯಲ್ಲಿ ಶಂಕ್ರಮ್ಮ ಕ್ಯಾರೇಳ ಎಂಬುವರಿಗೆ ಸೇರಿದ ಗುಡಿಸಲು ಆಕಸ್ಮಿಕ ಬೆಂಕಿಗೆ ತುತ್ತಾಗಿರುವುದನ್ನು ಪರಿಶೀಲಿಸಲಾಗಿದ್ದು, ಅಂದಾಜು ₹10 ಲಕ್ಷ, ಬಂಗಾರ, ಬೆಳ್ಳಿ ಹಾಗೂ ಕುರಿಮರಿಗಳು ಮೃತಪಟ್ಟಿವೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಅಗ್ನಿಶಾಮಕ ಠಾಣಾಧಿಕಾರಿ ಪಿ. ರಾಜು ತಿಳಿಸಿದ್ದಾರೆ.ಸಿಡಿಲು ಬಡಿದು ಬಾಲಕ, ಏಳು ಕುರಿ, ಒಂದು ಎತ್ತು ಸಾವು:

ಕೊಪ್ಪಳ ಜಿಲ್ಲಾದ್ಯಂತ ಸೋಮವಾರ ಮಧ್ಯಾಹ್ನದ ನಂತರ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಸಿಡಿಲು, ಗುಡುಗು ಅಬ್ಬರವೇ ಅಧಿಕವಾಗಿತ್ತು. ಸಿಡಿಲು ಬಡಿದ ಬಾಲಕನೋರ್ವ ಮೃತಪಟ್ಟಿದ್ದಾನೆ. ಜತೆಗೆ ಏಳು ಕುರಿಗಳು ಹಾಗೂ ಒಂದು ಎತ್ತು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ನಡೆದಿವೆ.ಯಲಬುರ್ಗಾ ತಾಲೂಕಿನ ಕೋನಸಾಗರ ಬಳಿ ಕುರಿ ಮೇಯಿಸುತ್ತಿದ್ದ ಶ್ರೀನಿವಾಸ ಗೊಲ್ಲರ (16) ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.ಇರಕಲ್ ಗಡ ಗ್ರಾಮದ ಬಳಿ ಹೊಲದಲ್ಲಿ ಕಟ್ಟಿಹಾಕಲಾಗಿದ್ದ ರಾಮಣ್ಣ ಬನ್ನಿ ಎಂಬವರಿಗೆ ಸೇರಿದ ಎತ್ತು ಸ್ಥಳದಲ್ಲಿಯೇ ಮೃತಪಟ್ಟಿದೆ. ಹಾಗೆಯೇ ಮುಕ್ಕುಂಪಿ ಗ್ರಾಮದ ಬಳಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದು ಏಳು ಕುರಿಗಳು ಅಸು ನೀಗಿವೆ.

ಅಲ್ಲಲ್ಲಿ ಮಳೆ:ಕೊಪ್ಪಳ ನಗರದಲ್ಲಿ ಸ್ವಲ್ಪ ಮಳೆಯಾಗಿದ್ದು, ಇರಕಲ್ ಗಡ, ಹಟ್ಟಿ ಸೇರಿದಂತೆ ಮೊದಲಾದ ಗ್ರಾಮಗಳ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಯಲಬುರ್ಗಾ ತಾಲೂಕಿನ ಕೊನಸಾಗರ ಬಳಿಯೂ ಸ್ವಲ್ಪ ಮಳೆಯಾಗಿದ್ದು, ಬರಿ ಸಿಡಿಲು, ಗುಡುಗಳ ಆರ್ಭಟವೇ ಅಧಿಕವಾಗಿತ್ತು.