ಸಾರಾಂಶ
ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯ ಪರಿಹಾರದ ಹಣ ನೀಡಲು ಅಧಿಕಾರಿಗಳು ಶೇ.5 ರಷ್ಟು ಕಮೀಷನ್ ಕೇಳುತ್ತಿರುವುದು ಮತ್ತು ಪರಿಹಾರ ನೀಡಿಕೆಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತರು ಶುಕ್ರವಾರ ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಧಾರವಾಡ: ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಯ ಪರಿಹಾರದ ಹಣ ನೀಡಲು ಅಧಿಕಾರಿಗಳು ಶೇ.5 ರಷ್ಟು ಕಮೀಷನ್ ಕೇಳುತ್ತಿರುವುದು ಮತ್ತು ಪರಿಹಾರ ನೀಡಿಕೆಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ರೈತರು ಶುಕ್ರವಾರ ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಎಂಐಸಿ ಯೋಜನೆಗಾಗಿ ತಾಲೂಕಿನ ಕಲ್ಲಾಪುರ, ಹೊಸವಾಳ, ವೆಂಕಟಾಪುರ, ಕುಮ್ಮನಾಯಕನಕೊಪ್ಪ, ಮದಿಕೊಪ್ಪ, ಶಿಂಗನಹಳ್ಳಿ, ಕೋಟೂರ ಗ್ರಾಮಗಳ ಒಟ್ಟು 2,170 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪಡಿಸಿಕೊಂಡಿದೆ.ಈ ಗ್ರಾಮಗಳ ರೈತರು ಭೂ ಪರಿಹಾರದ ಹಣ ಪಡೆದುಕೊಳ್ಳಲು ದಾಖಲಾತಿಗಳನ್ನು ಸಲ್ಲಿಸಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಈ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಪರಿಹಾರದ ಹಣವನ್ನು ಪಾವತಿಸಲು ಶೇ. 5ರಷ್ಟು ಕಮೀಶನ್ ಕೇಳುತ್ತಿದ್ದಾರೆ. ಜತೆಗೆ ನೋಂದಣಿ ರಿಯಾಯಿತಿ ಪ್ರಮಾಣ ಪತ್ರ ನೀಡಲು ₹30 ಸಾವಿರ ಕೊಡುವಂತೆ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಂಚ ನೀಡದ ರೈತರ ಕಡತಗಳಲ್ಲಿ ಅನವಶ್ಯಕ ನೆಪಗಳನ್ನು ಹೇಳಿ ಪರಿಹಾರದ ಹಣವನ್ನು ಪಾವತಿಸಲು ವಿಳಂಬ ಮಾಡುತ್ತಿದ್ದಾರೆ. ಈ ಅನ್ಯಾಯ ಸರಿಪಡಿಸಲು ಲಂಚ ಪಡೆಯುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಬಸವರಾಜ ಸಾವಳಗಿ, ಮಹ್ಮದಗೌಸ್ ಜಮಾದಾರ, ರಾಕೇಶ ರಾಮನಗೌಡರ, ಭೀಮಪ್ಪ ಮಾದರ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.