ಧರ್ಮಸ್ಥಳದ ಬಂಗ್ಲೆಗುಡ್ಡೆಯ 5 ಕಡೆ 5 ತಲೆಬುರುಡೆ, 100 ಮೂಳೆ ಪತ್ತೆ

| Published : Sep 18 2025, 02:00 AM IST

ಧರ್ಮಸ್ಥಳದ ಬಂಗ್ಲೆಗುಡ್ಡೆಯ 5 ಕಡೆ 5 ತಲೆಬುರುಡೆ, 100 ಮೂಳೆ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ ಈಗ ಮತ್ತೊಂದು ಮಜಲು ಪಡೆದುಕೊಳ್ಳುತ್ತಿದೆ. ಸೌಜನ್ಯಾ ಮಾವ ವಿಠಲಗೌಡ ಹೇಳಿದಂತೆ ಬಂಗ್ಲೆಗುಡ್ಡೆಯಲ್ಲಿ ಬುಧವಾರ ಎಸ್‌ಐಟಿ ಶೋಧ ನಡೆಸಿದಾಗ ಭೂಮಿಯ ಮೇಲೆಯೇ ಮಾನವನ 5 ತಲೆ ಬುರುಡೆ, 100 ಮೂಳೆಗಳು ಪತ್ತೆ ಆಗಿವೆ.

- ಎಸ್‌ಐಟಿ ನಡೆಸಿದ ಶೋಧದಿಂದ ಪ್ರಕರಣಕ್ಕೆ ಮತ್ತೊಂದು ತಿರುವು

----

ರಹಸ್ಯ ಶೋಧ

- ಬಂಗ್ಲೆಗುಡ್ಡೆ ರಹಸ್ಯ ಶೋಧಕ್ಕೆ ಸಂಬಂಧಿಸಿ ಹೈಕೋರ್ಟಲ್ಲಿ ಪ್ರಕರಣ

- ಹೀಗಾಗಿ ಇಡೀ ಬಂಗ್ಲೆಗುಡ್ಡೆ ಕಾಡು ಶೋಧಕ್ಕೆ ಇಳಿದ ಎಸ್‌ಐಟಿ

- ಮೂಳೆ, ತಲೆಬುರುಡೆ ಜತೆ ಅಂಗಿ, ಪ್ಯಾಂಟ್‌, ಸೀರೆಗಳೂ ಪತ್ತೆ

- ಇವುಗಳ ವಿಧಿವಿಜ್ಞಾನ ಪರೀಕ್ಷೆ ನಡೆಸಿ ರಹಸ್ಯ ಬಯಲಿಗೆ ಸಿದ್ಧತೆ

- ಈ ಬಗ್ಗೆ ಸೆ.19ರ ಹೈಕೋರ್ಟ್‌ ವಿಚಾರಣೆಯಲ್ಲಿ ವರದಿ ಸಲ್ಲಿಕೆ

---ಕನ್ನಡಪ್ರಭ ವಾರ್ತೆ ಮಂಗಳೂರು/ ಬೆಳ್ತಂಗಡಿ

ಧರ್ಮಸ್ಥಳ ಗ್ರಾಮದ ಬುರುಡೆ ಕೇಸ್‌ ಈಗ ಮತ್ತೊಂದು ಮಜಲು ಪಡೆದುಕೊಳ್ಳುತ್ತಿದೆ. ಸೌಜನ್ಯಾ ಮಾವ ವಿಠಲಗೌಡ ಹೇಳಿದಂತೆ ಬಂಗ್ಲೆಗುಡ್ಡೆಯಲ್ಲಿ ಬುಧವಾರ ಎಸ್‌ಐಟಿ ಶೋಧ ನಡೆಸಿದಾಗ ಭೂಮಿಯ ಮೇಲೆಯೇ ಮಾನವನ 5 ತಲೆ ಬುರುಡೆ, 100 ಮೂಳೆಗಳು ಪತ್ತೆ ಆಗಿವೆ.

ವಿಠಲಗೌಡನ ಸಹೋದರ ಪುರಂದರಗೌಡ ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಭೇದಿಸುವ ಸಂಬಂಧ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸೆ.19ಕ್ಕೆ ವಿಚಾರಣೆಗೆ ಬರಲಿದೆ. ಹಾಗಾಗಿ ಎಸ್‌ಐಟಿ ಶೋಧ ಕೈಗೊಂಡಿದ್ದು, ಶೋಧದ ಫಲಿತಾಂಶ ಕುರಿತಂತೆ ಹೈಕೋರ್ಟ್‌ಗೆ ವರದಿ ನೀಡುವ ಸಾಧ್ಯತೆ ಇದೆ.

5 ಸ್ಥಳದಲ್ಲಿ ಅಸ್ಥಿ ಪಂಚರ ಪತ್ತೆ:

ಬಂಗ್ಲೆಗುಡ್ಡೆಯ ಐದು ಜಾಗಗಳಲ್ಲಿ ಬುಧವಾರ ಮಾನವ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿದೆ. 5 ಮಾನವನ ತಲೆಬುರುಡೆ ಮತ್ತು 100 ಮೂಳೆಗಳ ಪತ್ತೆ ಆಗಿದ್ದು, ಅವುಗಳನ್ನು ಸುಕೊ ತಂಡದ ಸಹಾಯದಿಂದ ಎಸ್‌ಐಟಿ ಸಂಗ್ರಹಿಸಿದೆ. ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರತ್ಯೇಕ ಮೂರು ತಂಡಗಳಾಗಿ ಶೋಧ ಕಾರ್ಯ ನಡೆಸಿತು. ದಿನಪೂರ್ತಿ ಶೋಧ ಕಾರ್ಯಾಚರಣೆ ನಡೆಸಿದ್ದು, ಇದು ಮರುದಿನ ಗುರುವಾರವೂ ಮುಂದುವರಿಯಲಿದೆ.

ಈ ಎಲ್ಲ ಅಸ್ಥಿಪಂಜರಗಳ ಅವಶೇಷಗಳು ಭೂಮಿಯ ಮೇಲ್ಭಾಗದಲ್ಲಿ ಪತ್ತೆಯಾಗಿದೆ. ದೊರೆತ ಮೂಳೆಗಳನ್ನು ಸೋಕೋ ತಂಡ ಸಂಗ್ರಹಿಸಿದೆ. ಅಲ್ಲಿ ಮಾನವ ದೇಹದ ಕೆಲವು ಭಾಗಗಳ ಅವಶೇಷಗಳು, ಬಟ್ಟೆಗಳ ತುಂಡು ಪತ್ತೆಯಾಗಿದೆ. ಸಂಜೆ ವೇಳೆ ಅಂಗಿ, ಪ್ಯಾಂಟ್‌, ಸೀರೆ, ಊರುಗೋಲು ಹಾಗೂ ಲೈಸೆನ್ಸ್‌ ಪತ್ತೆಯಾಗಿದ್ದು, ಅವುಗಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ.

ಸೌಜನ್ಯಾ ಮಾವ ವಿಠಲಗೌಡ ಎಸ್‌ಐಟಿ ತಂಡಕ್ಕೆ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ದಿನಪೂರ್ತಿ ಈ ಮಹಜರು ಕಾರ್ಯ ನಡೆಸಲಾಗಿದೆ.

ಬಂಗ್ಲೆಗುಡ್ಡೆಯೊಳಗೆ ಪ್ಲಾಸ್ಟಿಕ್ ಪೈಪ್, ಉಪ್ಪು, ಪ್ಲಾಸ್ಟಿಕ್ ಬಾಕ್ಸ್‌ಗಳು, ಸೀಲ್ ಮಾಡುವ ಬಟ್ಟೆಗಳು, ಸೀಲ್ ಹಾಕುವ ಮೇಣದ ಜೊತೆ ಸೋಕೋ ಸಿಬ್ಬಂದಿ ತೆರಳಿದ್ದು, ಮಹಜರು ಕಾರ್ಯಕ್ಕೆ ಬಳಸುತ್ತಿದ್ದಾರೆ. ಎಸ್‌ಐಟಿ ತನಿಖಾಧಿಕಾರಿ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸೋಕೋ ತಂಡ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಮೆಟಲ್ ಡಿಟೆಕ್ಟರ್ ತಂಡ ಸಾಥ್ ನೀಡುತ್ತಿದೆ.

ಅರಣ್ಯ ಇಲಾಖೆ ಅನುಮತಿ ಪಡೆದು ಎಸ್‌ಐಟಿ ತಂಡ ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭಿಸಿದೆ. ಸುಮಾರು 12 ಎಕರೆ ವಿಸ್ತೀರ್ಣದಲ್ಲಿರುವ ಬಂಗ್ಲೆಗುಡ್ಡೆ ಅರಣ್ಯವನ್ನು ಎಸ್ಐಟಿ ಪೂರ್ತಿ ಶೋಧಿಸಲಿದೆ.

ಶೋಧ ಪೂರ್ಣ ಬಳಿಕ ಹೈಕೋರ್ಟ್‌ಗೆ ವರದಿ?

ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯದ ಬಗ್ಗೆ ಹೈಕೋರ್ಟ್ ರಿಟ್ ಅರ್ಜಿಯಲ್ಲಿ ಸೌಜನ್ಯ ಮಾವ ವಿಠಲಗೌಡನ ಸಹೋದರ ಪುರಂದರಗೌಡ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತರಾತುರಿಯಲ್ಲಿ ಒಂದೇ ದಿನದಲ್ಲಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರ ಅವಶೇಷಗಳ ಮಹಜರು ಪ್ರಕ್ರಿಯೆ ನಡೆಸಲು ಉದ್ದೇಶಿಸಿತ್ತು. ಆದರೆ ಇಡೀ ಕಾಡಿನಲ್ಲಿ ಶೋಧ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2ನೇ ದಿನವೂ ಮುಂದುವರಿಸುವುದು ಅನಿವಾರ್ಯವಾಗಿದೆ.

ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯ ಪತ್ತೆಗೆ ಇನ್ನೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಈ ಹಿಂದೆ ಪುರಂದರಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿತ್ತು. ಹೈಕೋರ್ಟ್ ನೋಟಿಸ್ ಬೆನ್ನಲ್ಲೇ ಎಸ್‌ಐಟಿ ಬಂಗ್ಲೆಗುಡ್ಡೆ ಅಸ್ಥಿಪಂಜರ ಶೋಧಕ್ಕಿಳಿದಿದೆ. ಸೆ.18ರಂದು ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡೆ ಅಸ್ಥಿಪಂಜರ ಶೋಧ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿತ್ತು. ಶೋಧ ಕಾರ್ಯ ಪೂರ್ಣಗೊಂಡ ಬಳಿಕವೇ ಹೈಕೋರ್ಟ್‌ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಹೈಕೋರ್ಟ್‌ಗೆ ಪುರಂದರಗೌಡ ಸಲ್ಲಿಸಿದ ರಿಟ್‌ ಅರ್ಜಿಯಲ್ಲಿ ಬಂಗ್ಲೆಗುಡ್ಡೆ ರಹಸ್ಯದ ಬಗ್ಗೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿತ್ತು.

===

ತಿಮರೋಡಿ ಮೇಲೆ ಶಸ್ತ್ರಾಸ್ತ್ರ ಕೇಸ್‌

- ಎಸ್‌ಐಟಿ ದಾಳಿ ವೇಳೆ ಬಂದೂಕು ಸೇರಿ 44 ಮಾರಕಾಸ್ತ್ರ ಪತ್ತೆ- ಹೀಗಾಗಿ ಸೌಜನ್ಯ ಪರ ಹೋರಾಟಗಾರನಿಗೆ ಹೊಸ ಸಂಕಷ್ಟ

ಕನ್ನಡಪ್ರಭ ವಾರ್ತೆ ಬೆಂಗಳೂರು/ ಬೆಳ್ತಂಗಡಿ

ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾಗಿದ್ದಳು ಎನ್ನಲಾದ ಧರ್ಮಸ್ಥಳದ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.ಎಸ್ಐಟಿ ಎಸ್‌ಪಿ ಸೈಮನ್ ನೀಡಿದ ದೂರಿನಡಿ ಬುಧವಾರ ಪ್ರಕರಣ ದಾಖಲಿಸಲಾಗಿದೆ.ಆ.26ರಂದು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ಶೋಧ ಕಾರ್ಯ ನಡೆಸುವ ಸಂದರ್ಭ ಬಂದೂಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿದ್ದವು. ಎರಡು ತಲವಾರು, ಒಂದು ಬಂದೂಕು ಸೇರಿದಂತೆ 44 ಸ್ವತ್ತುಗಳನ್ನು ಎಸ್ಐಟಿ ಅಧಿಕಾರಿಗಳು ವಶಪಡಿಸಿದ್ದರು.

ಶಸ್ತ್ರಾಸ್ತ್ರ ಕಾಯ್ದೆ 1959 ಸೆಕ್ಷನ್ 25(1),25 (1-A),24(1-ಬಿ)(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.