ಜಿಲ್ಲೆಯಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ.ಪಾಟೀಲ

| Published : Jan 27 2024, 01:18 AM IST

ಸಾರಾಂಶ

ಡಾ.ಅಂಬೇಡ್ಕರ್‌, ಬಾಬು ರಾಜೇಂದ್ರ ಪ್ರಸಾದ, ನೆಹರೂ ಕೊಡುಗೆ ಸ್ಮರಿಸಬೇಕು ಎಂದು ಹೇಳಿದ ಕೈಗಾರಿಗೆ ಸಚಿವ ಎಂ.ಬಿ.ಪಾಟೀಲ

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರಜಾತಂತ್ರ ವ್ಯವಸ್ಥೆಯ ಮೂಲಾಧಾರವಾಗಿರುವ ಭಾರತೀಯ ಸಂವಿಧಾನ ರಚನೆಗೆ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ, ಬಾಬು ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರೂ ಸೇರಿದಂತೆ ಎಲ್ಲ ಮಹನೀಯರ ಅನನ್ಯ ಕೊಡುಗೆಯನ್ನು ನಿತ್ಯ ಸ್ಮರಿಸಬೇಕು ಎಂದು ಬೃಹತ್ ಕೈಗಾರಿಕಾ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ನಗರದ ಜಿಲ್ಲಾ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ನಡೆದ ಗಣರಾಜೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಅಣ್ಣ ಬಸವಣ್ಣ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವ ಅಳವಡಿಸಿಕೊಂಡು ಸರ್ವೇಜನ ಸುಖಿನೋಭವಂತು ಎಂಬಂತೆ ಎಲ್ಲರೂ ನೆಮ್ಮದಿಯಿಂದ ಬಾಳುವ ಸಂಕಲ್ಪ ಮಾಡಬೇಕು ಎಂದರು.

ಜ್ಞಾನದ ಕಣಜ ಡಾ.ಬಿ.ಆರ್.ಅಂಬೇಡ್ಕರ ಅವರು ರಚಿಸಿದ ಶ್ರೇಷ್ಠ ಸಂವಿಧಾನ ನೀಡಿರುವ ಸಮಾನತೆ, ಮುಕ್ತತೆ-ಸುಸ್ಥಿರತೆಯನ್ನು ಸಮಗ್ರವಾಗಿ ಪೋಷಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದ್ದು, ಧಾರ್ಮಿಕ, ವೈಚಾರಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ಮಾಡಿ ಕಲ್ಯಾಣ ರಾಜ್ಯ ಸ್ಥಾಪನೆಯ ಗುರಿ ಬಹುತೇಕ ಸಾಧಿಸಿದೆ ಎಂದು ಅಭಿಮಾನದಿಂದ ಹೇಳುವೆ ಎಂದು ತಿಳಿಸಿದರು.

ಮಹಾತ್ಮ ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಯ ಅನುಸಾರ ಭಾರತವನ್ನು ವೈಜ್ಞಾನಿಕ ಕ್ರಾಂತಿಯ ಮೂಲಕ ಪ್ರಗತಿ ಪಥದತ್ತ ಮುನ್ನಡೆಸಿದ ಶ್ರೇಯಸ್ಸು ಪಂ.ಜವಾಹರಲಾಲ್ ನೆಹರೂ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ವಿಜಯಪುರದಲ್ಲಿ 5 ಸಾವಿರ ಉದ್ಯೋಗ ಸೃಷ್ಟಿ:

ಪ್ರಸಕ್ತ ವರ್ಷ ಬರಗಾಲ ಕಾಡುತ್ತಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಜಾನುವಾರುಗಳಿಗೆ ಮೇವು ಪೂರೈಕೆಗೆ ಆದ್ಯತೆ ನೀಡಲಾಗಿದೆ ಎಂದ ಅವರು, ವಿಜಯಪುರ ಜಿಲ್ಲೆಯಲ್ಲಿ ವಿದೇಶಿ ಸೇರಿದಂತೆ ವಿವಿಧ ಕಂಪನಿಗಳು ಬಂಡವಾಳ ಹೂಡಲು ಮುಂದಾಗಿದ್ದು, ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಐದು ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವರು ವಿವರಿಸಿದರು.

ವಿಜಯಪುರದಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಮುಂದೆ ಬಂದಿದ್ದು, ಈ ಪೈಕಿ ಲುಲು ಕಂಪನಿ ವಿಜಯಪುರದಲ್ಲಿ ₹೩೦೦ ಕೋಟಿ ವೆಚ್ಚದಲ್ಲಿ ಹಣ್ಣು ಮತ್ತು ತರಕಾರಿ ಸಂಸ್ಕರಣ ಘಟಕ ತೆರೆಯಲು ಒಪ್ಪಿಕೊಂಡಿದೆ ಎಂದು ಹೇಳಿದರು.

ಉತ್ತರಪ್ರದೇಶ ಮೂಲದ ಬಿ.ಎಲ್. ಆಗ್ರೋ ಕಂಪನಿ ಕೂಡ ನಮ್ಮ ಜಿಲ್ಲೆಯಲ್ಲೇ ತನ್ನ ಆಹಾರ ಸಂಸ್ಕರಣಾ ಘಟಕವನ್ನು ಆರಂಭಿಸಲು ಮುಂದೆ ಬಂದಿದೆ. ಇದರಿಂದ ಬಂಡವಾಳ ಹೂಡಿಕೆಯಾಗಿ ಉದ್ಯೋಗ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದಕ್ಕೆ ಪೂರಕವಾಗಿ ನಮ್ಮ ಜಿಲ್ಲೆಯು ಕೈಗಾರಿಕೆಗಳ ಬೆಳವಣಿಗೆಯನ್ನೂ ಸಾಧಿಸಬೇಕು ಎಂದರು.

ನನ್ನ ನೇತೃತ್ವದ ನಿಯೋಗವು ೨೦೨೩ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿ, ಜಾಗತಿಕ ಮಟ್ಟದ ಹಲವು ಕಂಪನಿಗಳೊಂದಿಗೆ ಮಹತ್ವದ ಮಾತುಕತೆಗಳನ್ನು ನಡೆಸಿದೆ. ಇದರಿಂದಾಗಿ ಕರ್ನಾಟಕಕ್ಕೆ ₹೨೪ ಸಾವಿರ ಕೋಟಿ ಆದಾಯ ಹರಿದು ಬರುವುದು ನಿಚ್ಚಳವಾಗಿದೆ. ಇದರಲ್ಲಿ ₹೮೫೦೦ ಕೋಟಿ ಬಂಡವಾಳ ಹೂಡಲು ಕಂಪನಿಗಳು ಈಗಾಗಲೆ ಕಾರ್ಯಾರಂಭ ಮಾಡಿವೆ ಎಂದರು.

ಜಿಲ್ಲೆಯ ಬರಗಾಲ ನಿವಾರಣೆಗಾಗಿ ಈ ಹಿಂದೆ ನಾನು ಜಲಸಂಪನ್ಮೂಲನಾಗಿದ್ದಾಗ ವಿಜಯಪುರ ಜಿಲ್ಲೆಗೆ, ಸದ್ಬಳಕೆಗೆ ೧೦೦ ಟಿಎಂಸಿ ನೀರು ನಿಗದಿಪಡಿಸಿ, ಕೃಷ್ಣಾ ನ್ಯಾಯಾಧಿಕರಣದ ಅಂತಿಮ ಅಧಿಸೂಚನೆ ಮುಂಚೆಯೇ ಅಗತ್ಯ ಕ್ರಮಗಳನ್ನು ಜರುಗಿಸಿ, ತಾತ್ಕಾಲಿಕವಾಗಿ ನೀರು ಅವಕಾಶ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿ:

ಜಿಲ್ಲೆಯ ಸಮತೋಲಿತ ಮತ್ತು ಸಮಗ್ರ ಅಭಿವೃದ್ಧಿಗಾಗಿ ಇಂಡಿ ತಾಲೂಕಿನ ಬೂದಿಹಾಳ ಮತ್ತು ಮುದ್ದೇಬಿಹಾಳ ತಾಲೂಕಿನಲ್ಲಿ ಕ್ರಮವಾಗಿ ೧೯ ಮತ್ತು ೬ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯು ಪ್ರಗತಿಯಲ್ಲಿದೆ. ಅಲ್ಲದೆ, ಜಿಲ್ಲೆಯ ಮುಳವಾಡ ಗ್ರಾಮದಲ್ಲಿ ಕೆಐಎಡಿಬಿ ಸ್ವಾಧೀನದಲ್ಲಿರುವ ೧,೩೦೦ ಎಕರೆ ಜಾಗದಲ್ಲಿ ‘ಉತ್ಪಾದನಾ ಕ್ಲಸ್ಟರ್’ ಅನ್ನು ಸ್ಥಾಪಿಸಲಾಗುತ್ತಿದೆ. ಕಳೆದ ತಿಂಗಳು ನಡೆಸಿದ ವೃಕ್ಷೋಥಾನ್ ಹೆರಿಟೇಜ್ ರನ್-೨೦೨೩ ಜಿಲ್ಲೆಯ ಹಾಗೂ ವಿವಿಧ ರಾಜ್ಯಗಳಿಂದ ೧೦ ಸಾವಿರಕ್ಕೂ ಹೆಚ್ಚು ಕ್ರೀಡಾಸಕ್ತರು ನೋಂದಣಿ ಮಾಡಿ, ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಜನಜಾಗೃತಿ ಸ್ಮರಣೀಯ ಕಾರ್ಯಕ್ರಮ ಜರುಗಿತು. ಅದರಂತೆಯೇ ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಯುವಕರ ಸಾಧನೆಗೆ ಅಭಿನಂದಿಸಿದ ಎಂಬಿಪಾ:

ಗಣರಾಜ್ಯೋತ್ಸವ ಸಂದೇಶದಲ್ಲಿ ಜಿಲ್ಲೆಯ ಯುವ ಸಾಧಕರ ಸಾಧನೆಯ ಪಥವನ್ನು ಸಚಿವ ಡಾ.ಎಂ.ಬಿ.ಪಾಟೀಲ ಅಭಿನಂದನೆ ಸಲ್ಲಿಸಿದರು. ಗಣರಾಜ್ಯೋತ್ಸವ ರಾಷ್ಟ್ರಮಟ್ಟದ ಪರೇಡ್‌ನಲ್ಲಿ ಭಾಗವಹಿಸಿರುವ ಬಸಲಿಂಗಯ್ಯ ಹಿರೇಮಠ, ಧೋರಿರಾಜ್ ರಾಠೋಡ, ಥಾಲ್ ಸೈನಿಕ ಶಿಬಿರದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ಬಸವರಾಜ ತೋಟದ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಮಿಂಚಿದ ಅಕ್ಷತಾ ಬಿರಾದಾರ, ರಾಹುಲ್ ರಾಠೋಡ, ಪಾಯಲ್ ಚವ್ಹಾಣ, ಛಾಯಾ ನಾಗಶೆಟ್ಟಿ, ಕೋಕಿಲಾ ಚವ್ಹಾಣ, ಜ್ಯೋತಿ ಲಮಾಣಿ, ದಿಪೀಕಾ ಪಡತಾರ, ಮಧ್ಯಪ್ರದೇಶದಲ್ಲಿ ಜರುಗಿದ ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ ಮೊಹ್ಮದ್‌ಜಹೀರ್ ಇನಾಮದಾರ ಅವರ ಸಾಧನೆಗೆ ಜಿಲ್ಲೆಯ ಪರವಾಗಿ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಸಂಸದ ರಮೇಶ ಜಿಗಜಿಣಗಿ, ಮಹಾಪೌರ ಮೆಹಜಬೀನ್ ಹೊರ್ತಿ, ಉಪಮಹಾಪೌರ ದಿನೇಶ ಹಳ್ಳಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ, ಎಸ್.ಪಿ. ಋಷಿಕೇಶ ಸೋನಾವಣೆ ಮುಂತಾದವರು ಇದ್ದರು.