ಸಾರಾಂಶ
ರಾಮನಗರ: ನಗರದ ವಸತಿ ರಹಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ 50 ಎಕರೆ ಸರ್ಕಾರಿ ಗೋಮಾಳವನ್ನು ಗುರುತಿಸಿದ್ದು, ಜತೆಗೆ ಖಾಸಗಿಯವರಿಂದ 50 ಎಕರೆ ಭೂಮಿ ಖರೀದಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಒಟ್ಟಾರೆ 100 ಎಕರೆ ಪ್ರದೇಶದಲ್ಲಿ 5 ಸಾವಿರ ಜನರಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ತಾಲೂಕಿನ ಕೈಲಾಂಚ ಹೋಬಳಿ ವ್ಯಾಪ್ತಿಯ 5 ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2 ದಶಕಕ್ಕೂ ಹೆಚ್ಚಿನ ಕಾಲದಿಂದ ನಗರದ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡುವ ಕೆಲಸ ಮಾಡಲಾಗಿಲ್ಲ. ಇದರಿಂದ ನಗರದ ವಸತಿರಹಿತರು ಸಂಕಷ್ಟಕ್ಕೆ ಸಿಲುಕಿದ್ದು, ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದಾರೆ. ಇವರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದು, ಇನ್ನೆರಡು ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.ಜಮೀನು ಖರೀದಿಗೆ 47 ಕೋಟಿ:
ಸರ್ಕಾರಿ ಗೋಮಾಳದ ಜತೆಗೆ ಖಾಸಗಿಯವರಿಂದ 50 ಎಕರೆ ಭೂಮಿ ಖರೀದಿಗೆ 47 ಕೋಟಿ ರು. ನಿಗದಿಪಡಿಸಿದೆ. ಜಮೀನುಗಳನ್ನು ಗುರುತಿಸಿದ್ದು ಜಿಲ್ಲಾಧಿಕಾರಿಗಳ ಜೊತೆ ಸಭೆನಡೆಸಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಮೊದಲ ಹಂತದಲ್ಲಿ 3ರಿಂದ 5 ಸಾವಿರ ಮಂದಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗುವುದು. ಈ ಹಿಂದೆ ಸರ್ಕಾರದಿಂದ ಮಂಜೂರಾಗಿದ್ದ 888 ಮಂದಿಗೆ ಮನೆ ಕಟ್ಟಿಕೊಡಲು ಆದ್ಯತೆ ನೀಡಲಾಗುವುದು. 5 ಸಾವಿರ ನಿವೇಶನಗಳಿಗೆ ಮನೆಕಟ್ಟಿಕೊಳ್ಳುವ ಯೋಜನೆ ಬಳಿಕ ಪರಿಚಯಿಸಲಾಗುವುದು ಎಂದರು.ಮಧ್ಯವರ್ತಿಗಲಿಗೆ ಅವಕಾಶವಿಲ್ಲ:
ವಸತಿ ಯೋಜನೆಗೆ ಆಯ್ಕೆಯಾಗುವ ಫಲಾನುಭವಿಗಳಿಗೆ ಪ್ರತಿ ನಿವೇಶನಕ್ಕೆ 1 ಲಕ್ಷ ರು. ಬೆಲೆ ನಿಗದಿಪಡಿಸಲಾಗಿದೆ. ಮೊದಲು ಇದು 2.50 ಲಕ್ಷ ರು. ಇದ್ದು, ಸರ್ಕಾರ ಈ ಮೊತ್ತವನ್ನು ಕಡಿಮೆ ಮಾಡಿದೆ. ಈಗಾಗಲೇ ಫಲಾನುಭವಿಗಳ ಆಯ್ಕೆಗೆ ಅರ್ಜಿ ನಮೂನೆ ವಿತರಿಸಲಾಗಿದೆ. ವಾರ್ಡ್ ಸಮಿತಿಗಳನ್ನು ರಚಿಸಿ ಫಲಾನುಭವಿಗಳನ್ನು ಆಯ್ಕೆಮಾಡಲಾಗುವುದು ಎಂದರು.ಗ್ರಾಮೀಣ ಪ್ರದೇಶಕ್ಕೆ 3 ಸಾವಿರ ಮನೆ:
ರಾಮನಗರದ ಸಮಗ್ರ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಒತ್ತಾಸೆಯಾಗಿ ನಿಂತಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುತ್ತಿದ್ದಾರೆ. ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮಾಂತರ ಪ್ರದೇಶಕ್ಕೆ 3 ಸಾವಿರ ಮನೆಗಳನ್ನು ವಿವಿಧ ವಸತಿ ಯೋಜನೆಯಡಿ ಮಂಜೂರು ಮಾಡಲಾಗಿದೆ. ಪ್ರತಿ ಗ್ರಾಪಂಗೆ ತಲಾ 147 ಮನೆಗಳಂತೆ ಹಂಚಿಕೆ ಮಾಡಲಾಗಿದ್ದು, ಸದಸ್ಯರು ಹಾಗೂ ಪಿಡಿಒಗಳು ತಮ್ಮ ಗ್ರಾಪಂವಾರು ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದರು.ನಗರಸಭೆ ವ್ಯಾಪ್ತಿಯಲ್ಲಿ ಚರಂಡಿ, ರಸ್ತೆ ನಿರ್ಮಾಣಕ್ಕಾಗಿ 82 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು ಇದಕ್ಕೆ ಡಿಪಿಆರ್ ಸಿದ್ದಪಡಿಸಬೇಕಿದೆ. ಇದರೊಂದಿಗೆ ಅರ್ಕಾವತಿ ನದಿಯ ಎರಡೂ ಬದಿಯಲ್ಲಿ ವಾಕಿಂಗ್ ಪಾತ್ ನಿರ್ಮಾಣಕ್ಕೆ 134 ಕೋಟಿ, 15 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಸೂಚಿಸಲಾಗಿದೆ. ನಗರಕ್ಕೆ ಸಂಪೂರ್ಣ ಮೂಲಸೌಕರ್ಯ ಕಲ್ಪಿಸಲು 500 ಕೋಟಿ ಅಗತ್ಯವಿದ್ದು, ಇದನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.
ಕುಡಿವ ನೀರಿನ ಬವಣೆ ನೀಗಿಸಲು ಕ್ರಮ:ಕಾವೇರಿ ಹಾಗೂ ಶಿಂಷಾ ನದಿಯಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗಿದ್ದು, 25 ವರ್ಷಗಳಿಂದ ನೀರಿನ ಬವಣೆ ನಿವಾರಿಸಲು ಯಾವುದೇ ಯೋಜನೆ ಸಿದ್ದಪಡಿಸದ ಕಾರಣ ಈ ಸಮಸ್ಯೆ ಎದುರಾಗಿದೆ. ನಗರಕ್ಕೆ 18 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ತಾತ್ಕಾಲಿಕವಾಗಿ 10 ಟ್ಯಾಂಕರ್‌ಗಳನ್ನು ನೀರು ಪೂರೈಕೆಗೆ ಸಿದ್ದಪಡಿಸಲಾಗಿದೆ. ಇನ್ನು ನೆಟ್ಕಲ್ ಯೋಜನೆ ಶೇ.95ರಷ್ಟು ಪೂರ್ಣಗೊಂಡಿದ್ದು, ಕೆಲ ಅಡಚಣೆಗಳಿಂದಾಗಿ ಕಾಮಗಾರಿ ವಿಳಂಬವಾಗಿದ್ದು ಇದನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದರು.
ಮಾಜಿ ಶಾಸಕ ಕೆ.ರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ವಿಭೂತಿಕೆರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷ ಬಿ.ಸಿ.ಹೇಮಂತಕುಮಾರ್, ಮುಖಂಡರಾದ ಗುರುವಯ್ಯ, ಅರಳಪ್ಪ, ಉಮೇಶ್, ನಾಗೇಶ್, ರವಿಕುಮಾರ್, ವಿಷಕಂಠಯ್ಯ, ವರದರಾಜು, ಶಿವಣ್ಣ, ಕುಮಾರ್, ವೆಂಕಟೇಶ್, ಮಹದೇವಮ್ಮ ಇತರರಿದ್ದರು.ಬಾಕ್ಸ್..........
ರಾಮನಗರದಲ್ಲಿ ಭವ್ಯ ರಾಮಮಂದಿರ ನಿರ್ಮಾಣರಾಮನಗರ: ರಾಮದೇವರ ಬೆಟ್ಟದಲ್ಲಿ ದಕ್ಷಿಣ ಅಯೋಧ್ಯೆ ಮಾದರಿಯಲ್ಲಿ ಶ್ರೀರಾಮನ ದೇವಾಲಯ ಕಟ್ಟುತ್ತೇವೆ. ಈ ಕುರಿತು ಬಜೆಟ್‌ನಲ್ಲಿ ತೀರ್ಮಾನ ಮಾಡಲಾಗುವುದು. ದೇಶವೇ ತಿರುಗಿ ನೋಡುವ ರೀತಿಯಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ರಾಮನಗರಕ್ಕೆ ಅತಿದೊಡ್ಡ ಇತಿಹಾಸವಿದ್ದು, ಈ ನೆಲಕ್ಕೆ ಶ್ರೀರಾಮನ ಪಾದಸ್ಪರ್ಶವಾಗಿತ್ತು ಎಂದು ಹಿರಿಯರು, ಧಾರ್ಮಿಕ ಮುಖಂಡರು ಹೇಳುತ್ತಾರೆ. ಅವರ ಸಲಹೆ ಆಧರಿಸಿ ರಾಮನ ಪಾದವಿರುವ ಜಾಗದಲ್ಲೇ ದಕ್ಷಿಣದಲ್ಲಿ ದೊಡ್ಡ ರಾಮಮಂದಿರವನ್ನು ನಾವು ಕಟ್ಟುತ್ತೇವೆ ಎಂದರು.ಮತಕ್ಕಾಗಿ ರಾಮನ ಬಳಸುವುದಿಲ್ಲ:
ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನಾವು ರಾಮಮಂದರಿ ನಿರ್ಮಾಣ ಮಾಡುತ್ತಿಲ್ಲ. ಮಂದಿರವನ್ನು ತರಾತರಿಯಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ರಾಮಮಂದಿರ ಯೋಜನೆ ಅಂತಿಮ ರೂಪ ತಳೆಯಲು ಸುಮಾರು 6 ತಿಂಗಳು ಬೇಕಿದ್ದು, ನಾವು ಬೇರೆಯವರಂತೆ ಮತಕ್ಕಾಗಿ ರಾಮನನ್ನು ಬಳಸುವುದಿಲ್ಲ. ಎಲ್ಲಾ ಜನತೆ, ಎಲ್ಲಾ ಧರ್ಮ, ಎಲ್ಲಾ ಜಾತಿಯನ್ನು ಒಗ್ಗೂಡಿಸುವ ಗಾಂಧೀಜಿ ತತ್ವವನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತೇವೆ ಎಂದರು.ಪೊಟೋ೨೩ಸಿಪಿಟಿ೧: ರಾಮನಗರ ತಾಲೂಕಿನ ೫ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.