ಎಲೆಬೇತೂರು ಕೆರೆಗೆ ವಿಷ: 5 ಟನ್‌ ಮೀನುಗಳ ಮಾರಣಹೋಮ

| Published : May 16 2024, 12:48 AM IST / Updated: May 16 2024, 10:32 AM IST

ಸಾರಾಂಶ

ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಕೆರೆಯಲ್ಲಿ ಒಂದಲ್ಲ, ಎರಡಲ್ಲ 8-10 ಕೆ.ಜಿ.ವರೆಗೆ ತೂಗುವ ಮೀನುಗಳಿದ್ದು, ಕೆರೆಗೆ ಯಾರೋ ದುಷ್ಕರ್ಮಿಗಳು ವಿಷವಿಕ್ಕಿದ ಪರಿಣಾಮ ಸುಮಾರು 5 ಟನ್‌ನಷ್ಟು ಮೀನುಗಳು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದೆ.

 ದಾವಣಗೆರೆ :  ತಾಲೂಕಿನ ಎಲೆಬೇತೂರು ಗ್ರಾಮದ ಕೆರೆಯಲ್ಲಿ ಒಂದಲ್ಲ, ಎರಡಲ್ಲ 8-10 ಕೆ.ಜಿ.ವರೆಗೆ ತೂಗುವ ಮೀನುಗಳಿದ್ದು, ಕೆರೆಗೆ ಯಾರೋ ದುಷ್ಕರ್ಮಿಗಳು ವಿಷವಿಕ್ಕಿದ ಪರಿಣಾಮ ಸುಮಾರು 5 ಟನ್‌ನಷ್ಟು ಮೀನುಗಳು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ಬೆಳಗ್ಗೆ ವರದಿಯಾಗಿದೆ.

ನಗರದ ಹೊರವಲಯದ ಎಲೆಬೇತೂರು ಗ್ರಾಮಕ್ಕೆ ಹೊಂದಿಕೊಂಡಿರುವ ಭದ್ರಾ ಕಾಲುವೆ ಆಶ್ರಿತವಾಗಿರುವ, ಸುಮಾರು 126 ಎಕರೆ ವಿಸ್ತೀರ್ಣದ ಬೇತೂರು ಕೆರೆಯಲ್ಲಿ ಈ ಬರದಲ್ಲಿಯೂ ಸುಮಾರು 60 ಎಕರೆಯಷ್ಟು ನೀರು ಸಂಗ್ರಹವಿದೆ. ಕೆರೆ ಅಂಗಳದಲ್ಲಿ ಸುಮಾರು 20 ಅಡಿಗಳಷ್ಟು ಆಳದ ಗುಂಡಿಗಳಲ್ಲಿ 8-10 ಕೆಜಿ ತೂಕದ ಭಾರೀ ಮೀನುಗಳಿವೆ. ಆದರೆ, ಕೆರೆಯಲ್ಲಿ ದುಷ್ಕರ್ಮಿಗಳು ಮೀನುಗಳ ಮಾರಣಹೋಮ ನಡೆಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

5 ವರ್ಷಗಳಿಂದ ಸಾಕಣೆ:

ಎಲೆಬೇತೂರು ಗ್ರಾಮದ ಮಂಜಪ್ಪ ಬಾರಿಕೇರ, ಸಿದ್ದಪ್ಪ ಬಾರಿಕರ, ಹನುಮಂತಪ್ಪ ಜಕ್ಕಾವರು ಸೇರಿಕೊಂಡು ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಪಡೆದು, ಸುಮಾರು 8 ಲಕ್ಷ ಮೀನು ಮರಿಗಳನ್ನು ಕೆರೆಯಲ್ಲಿ ಬಿಟ್ಟಿದ್ದರು. 5 ವರ್ಷಗಳ ಹಿಂದೆ ಬಿಟ್ಟಿದ್ದ ಮೀನುಗಳ ಸಂತತಿ ಹೆಚ್ಚಾಗಿತ್ತು. ರವೂ, ಕಾಟ್ಲಾ, ಗೌರಿ, ಮಿರಗಲ್‌, ಬ್ಲಾಕ್ ಶಾರ್ಪ್‌ (ಹುಲ್ಲು ತಿನ್ನುವ ಮೀನು) ಹೀಗೆ ನಾನಾ ಜಾತಿಯ ಮೀನುಗಳ ಮರಿಗಳನ್ನು ಸಾಕಲಾಗಿತ್ತು. ಮೂವರೂ ಮೀನು ಸಾಕಾಣಿಕೆದಾರರು ಶ್ರಮವಹಿಸಿದ್ದು, ಒಂದಿಷ್ಟು ದುಡಿಮೆ ಮಾಡಿಕೊಳ್ಳುವ ಕನಸು ಕಂಡಿದ್ದರು.

ಬರದ ಹಿನ್ನೆಲೆಯಲ್ಲಿ ಇಡೀ ಗ್ರಾಮಸ್ಥರು ಕೆರೆ ನೀರನ್ನು ಕಾಯ್ದಿಟ್ಟುಕೊಂಡು, ಅಂತರ್ಜಲ ವೃದ್ಧಿಗೆ ಹಾಗೂ ಜಾನುವಾರುಗಳ ಮೇವಿಗೆ ಅನುಕೂಲ ಆಗಲೆಂಬ ನಿರ್ಧಾರ ಮಾಡಿದ್ದರು. ಹಾಗಾಗಿ, ಎಲ್ಲ ಕೆರೆಗಳು ಬತ್ತಿದ್ದರೂ ಎಲೆಬೇತೂರು ಕೆರೆಯಲ್ಲಿ ಮಾತ್ರ 126 ಎಕರೆ ಪೈಕಿ ಅರ್ಧದಷ್ಟು ನೀರು ಸಂಗ್ರಹ ಇತ್ತು. ಇದರಿಂದಾಗಿ ಸಹಜವಾಗಿಯೇ ಮೀನುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿತ್ತು. ಆದರೆ, ತೆಪ್ಪದ ಮೂಲಕ ಮೀನಿಗೆ ಬಲೆ ಹಾಕಿದರೆ ಜಲ, ಸಸ್ಯಗಳ ಕೆಳಗೆ ಮೀನುಗಳು ತಪ್ಪಿಸಿಕೊಂಡು ಹೋಗುವಷ್ಟು ಜಾಣ್ಮೆ ಮೆರೆಯುತ್ತಿದ್ದವು.

ಬಲೆ ಬೀಸಿದರೂ ಮೀನು ಸಿಕ್ಕಿರಲಿಲ್ಲ. ಕೆರೆಯ ಆರೇಳು ಎಕರೆ ಪ್ರದೇಶದಲ್ಲಿ ಅಸಂಖ್ಯ ಮೀನುಗಳಿದ್ದವು. ಸೊಪ್ಪು ಇಲ್ಲದ್ದಕ್ಕೆ ಆಹಾರ ಇಲ್ಲದಂತಾದ ಮೀನುಗಳು ಸುಲಭವಾಗಿ ಗುಂಡಿಯಿಂದ ಮೇಲೆ ಬರುವುದು, ಬಲೆಗೆ ಸಿಗುವುದು ಸಾಮಾನ್ಯವಾಗಿತ್ತು. ಹಾಗಾಗಿ, ಬುಧವಾರ ಬೆಳಗ್ಗೆಯಿಂದಲೇ ಗ್ರಾಮಸ್ಥರು, ಸುತ್ತಮುತ್ತಲಿನ ಊರಿನವರು ಮೀನುಗಳನ್ನು ಹಿಡಿದುಕೊಂಡು ಹೋಗಿದ್ದರು. ಈ ಸುದ್ದಿ ಗೊತ್ತಾಗಿ ಮಂಜಪ್ಪ, ಹನುಮಂತಪ್ಪ, ಸಿದ್ದಪ್ಪ ಅವರು ಕೆರೆಯ ಬಳಿ ಬಂದಿದ್ದರು. ಸುಮಾರು 3 ಕ್ವಿಂಟಲ್ ಮೀನುಗಳನ್ನು ಹಿಡಿದು, ಕೆ.ಜಿ.ಗೆ ₹100 ದರದಂತೆ ಮಾರಿದ್ದರೂ ಮೀನುಗಳ ಮಾರಣಹೋಮ ಮಾತ್ರ ತಡೆಯಲಾಗಿಲ್ಲ.

ಬೇತೂರು ಕೆರೆಯಲ್ಲಿ ಮೀನುಗಳು ಸತ್ತು ತೇಲುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಎಲೆಬೇತೂರು, ನಾಗರಕಟ್ಟೆ, ಬಿ.ಚಿತ್ತಾನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆ ಅಂಗಳಕ್ಕೆ ದೌಡಾಯಿಸಿದರು. ಕೆಲವರಂತೂ ಕೈಗೆ ಸಿಕ್ಕಷ್ಟು ಮೀನು ಒಯ್ದರೆ, ಮತ್ತೆ ಕೆಲವರು ಟೆಂಡರ್‌ದಾರರಿಗೆ ಮೀನು ಹಿಡಿದುಕೊಡಲು ಕೈ ಜೋಡಿಸಿದರು. 5 ವರ್ಷಗಳಿಂದ ಸಾಕಿದ್ದ ವಿವಿಧ ಜಾತಿಗಳ ಸುಮಾರು 5 ಟನ್ ಮೀನುಗಳು ಸಾಮೂಹಿಕವಾಗಿ ಸಾವನ್ನಪ್ಪಿವೆ. 6ರಿಂದ 10 ಕೆ.ಜಿ.ವರೆಗೆ ತೂಗುತ್ತಿದ್ದ ಮೀನುಗಳು ಸಾವನ್ನಪ್ಪಿವೆ. ಸಾಲ ಮಾಡಿ, ಟೆಂಡರ್‌ ಪಡೆದ ಮೀನುಗಾರರು ಮೀನುಗಳ ಸಾವು ಕಂಡು ಅನುಭವಿಸುತ್ತಿದ್ದ ಸಂಕಟ, ನೋವು ಕಣ್ಣಂಚಿನಿಂದ ಕಣ್ಣೀರಾಗಿ ಇಳಿಯುತ್ತಿತ್ತು.

ಬಲೆ ಹಾಕಿದರೆ ಸೊಪ್ಪಿನ ಮೇಲೆ ಕೂಡುತ್ತಿದ್ದ, ಕೆರೆ ಅಂಗಳದ 20 ಅಡಿ ಗುಂಡಿಗಳ ಸೇರುತ್ತಿದ್ದ ಮೀನುಗಳು ಈಗ ವಿಷಪ್ರಾಶಣದಿಂದ ಸತ್ತು ಶವವಾಗಿ ತೇಲುತ್ತಿವೆ. ಮೀನುಗಾರಿಕೆಗೆ ಟೆಂಡರ್ ಪಡೆಯಲು ಅರ್ಜಿ ಹಾಕಿದ್ದ ರೈತರು ಇದೀಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಮೀನು ಸಾಕಾಣಿಕೆಗೆ ಟೆಂಡರ್ ಪಡೆದಿದ್ದ ಸಿದ್ದಪ್ಪ ಜಕ್ಕಾವರ, ಮಂಜುನಾಥ ಬಾರಿಕರ, ಹನುಮಂತಪ್ಪ ಬಾರಿಕರ, ಗ್ರಾಪಂ ಮಾಜಿ ಅಧ್ಯಕ್ಷ ಬೇತೂರು ಮಂಜಪ್ಪ, ಗ್ರಾಮದ ಮುಖಂಡರಾದ ಬಿ.ಚಿತ್ತಾನಹಳ್ಳಿ ಬಸವರಾಜ, ಬಿ.ಚಿತ್ತಾನಹಳ್ಳಿ ನಾಗರಾಜ, ಹರೇಶ, ನಾಗರಕಟ್ಟೆ ನಾಗರಾಜ, ಕುಮಾರ, ಪರಶುರಾಮ ಸೇರಿದಂತೆ ನೂರಾರು ಜನರು ಕೆರೆಯ ಬಳಿ ಧಾವಿಸಿದ್ದರು.

 ತುತ್ತು ಅನ್ನಕ್ಕೆ ವಿಷವಿಕ್ಕಿದ್ದಾರೆ ಸಾಲ ಮಾಡಿ, ಮೀನುಗಾರಿಕೆಗೆ ಟೆಂಡರ್ ಹಾಕಿದ್ದೆವು. ಈಗ ಇನ್ನೇನು ನಮ್ಮ ಬಾಯಿಗೆ ತುತ್ತು ಬರುತ್ತಿದೆಯೆಂಬ ಕಾಲಕ್ಕೆ ಕಾಣದ ಕೈಗಳು ನಮ್ಮ ತುತ್ತಿಗೆ ವಿಷ ಇಕ್ಕಿವೆ. ನಮ್ಮ ಅನ್ನಕ್ಕೆ ಯಾರು ಕಲ್ಲು ಹಾಕಿದ್ದಾರೋ ಗೊತ್ತಾಗುತ್ತಿಲ್ಲ. ಕಿಡಿಗೇಡಿಗಳು ಕೆರೆಗೆ ವಿಷ ಹಾಕಿರುವ ಸಾಧ್ಯತೆ ಇದೆ. ಕೆರೆ ಬಳಿ ವಿಷದ ಬಾಟಲು ಪತ್ತೆಯಾಗಿದೆ. ಸುಮಾರು 5 ಟನ್‌ನಷ್ಟು ಮೀನುಗಳು ಸಾವನ್ನಪ್ಪಿವೆ. 2ರಿಂದ 10 ಕೆ.ಜಿ.ವರೆಗಿನ ಮೀನು ಸತ್ತಿರುವುದನ್ನು ಕಂಡರೆ ನಮ್ಮ ಕಣ್ಣಲ್ಲಿ ನೀರಲ್ಲ, ರಕ್ತ ಬರುತ್ತಿದೆ

- ಸಿದ್ದಪ್ಪ ಜಕ್ಕಾವರ, ಮಂಜುನಾಥ ಬಾರಿಕರ, ಹನುಮಂತಪ್ಪ ಬಾರಿಕರ,

ಕೆರೆಯಲ್ಲಿ ಮೀನು ಸಾಕಾಣಿಕೆಗೆ ಟೆಂಡರ್ ಪಡೆದಿದ್ದ ರೈತರು.

ಸಂತ್ರಸ್ತ ಮೀನುಗಾರರಿಗೆ ಪರಿಹಾರ ಕೊಡಿ ಯಾರೋ ಕಿಡಿಗೇಡಿಗಳು ಕೆರೆಗೆ ವಿಷ ಹಾಕಿರುವ ಸಾಧ್ಯತೆ ಇದೆ. ಅಮಾಯಕ ಮೀನುಗಳ ಸಾವಿಗೆ ದುಷ್ಕರ್ಮಿಗಳು ಕಾರಣರಾಗಿದ್ದಾರೆ. ಕೆರೆಯ ಬಳಿ ವಿಷದ ಬಾಟಲು ಪತ್ತೆಯಾಗಿದೆ. 4-5 ಟನ್‌ನಷ್ಟು ಮೀನುಗಳ ಮಾರಣಹೋಮವಾಗಿದೆ. ಸಾಲ ಮಾಡಿ, ಮೀನುಗಳ ಬಿತ್ತನೆ ಮಾಡಿದ ಬಡವರು ಈಗ ಎಲ್ಲಿಗೆ ಹೋಗಬೇಕು? ಕೆರೆಗೆ ವಿಷ ಇಟ್ಟ ಅಪರಿಚಿತರನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥ ಮೀನುಗಾರರಿಗೆ ಸೂಕ್ತ ಪರಿಹಾರ ನೀಡಬೇಕು

- ಬೇತೂರು ಮಂಜಪ್ಪ, ಮಾಜಿ ಅಧ್ಯಕ್ಷ, ಎಲೆಬೇತೂರು ಗ್ರಾಪಂ