ರಾಜ್ಯದಲ್ಲಿ ಹಿಂದುಳಿದ ವರ್ಗಗಳ 2- ಎ ಗುಂಪಿನ ಸಮುದಾಯಗಳ ಜನಸಂಖ್ಯೆಯಲ್ಲಿ ವಿಶ್ವಕರ್ಮ ಸಮುದಾಯ ಎರಡನೇ ಸ್ಥಾನದಲ್ಲಿದೆ. ಸರ್ಕಾರ ಈ ವರ್ಷ ವಿಶ್ವಕರ್ಮ ನಿಗಮಕ್ಕೆ ₹50 ಕೋಟಿ ಅನುದಾನ ನೀಡಿದೆ. ಆದ್ದರಿಂದ ನಿಗಮದ ಯೋಜನಾ ಗುರಿಯನ್ನು ಈ ವರ್ಷ ದ್ವಿಗುಣಗೊಳಿಸಲಾಗಿದೆ.
ಧಾರವಾಡ:
ಇಲ್ಲಿಯ ಪಂಚಾಕ್ಷರಿ ನಗರದಲ್ಲಿರುವ ಕಾಳಿಕಾ ದೇವಸ್ಥಾನದ ಎರಡನೇ ವರ್ಷದ ವರ್ಧಂತಿ ಉತ್ಸವ ವಿಜೃಂಭಣೆಯಿಂದ ಜರುಗಿತು.ಧಾರ್ಮಿಕ ಸಭೆಯಲ್ಲಿ ಕಾಳಿಕಾ ದೇವಸ್ಥಾನದ ಜಾಲತಾಣ ಅನಾವರಣಗೊಳಿಸಿದ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನ ಮೂರ್ತಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ 2- ಎ ಗುಂಪಿನ ಸಮುದಾಯಗಳ ಜನಸಂಖ್ಯೆಯಲ್ಲಿ ವಿಶ್ವಕರ್ಮ ಸಮುದಾಯ ಎರಡನೇ ಸ್ಥಾನದಲ್ಲಿದೆ. ಸರ್ಕಾರ ಈ ವರ್ಷ ವಿಶ್ವಕರ್ಮ ನಿಗಮಕ್ಕೆ ₹50 ಕೋಟಿ ಅನುದಾನ ನೀಡಿದೆ. ಆದ್ದರಿಂದ ನಿಗಮದ ಯೋಜನಾ ಗುರಿಯನ್ನು ಈ ವರ್ಷ ದ್ವಿಗುಣಗೊಳಿಸಲಾಗಿದೆ. ವಿಶ್ವಕರ್ಮ ಸಮಾಜದ ಯುವಜನರು ಮತ್ತು ಸ್ವಯಂ ಉದ್ಯೋಗ ಸಾಲದ ಆಕಾಂಕ್ಷಿಗಳು ನಿಗಮದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ವರ್ಧಂತಿ ಉತ್ಸವಕ್ಕೆ ಚಾಲನೆ ನೀಡಿದ ಮಾಜಿ ಮೇಯರ್ ರಾಮಣ್ಣ ಬಡಿಗೇರ, ಅವಳಿ ನಗರಗಳಲ್ಲಿ ಸಮುದಾಯದ ನಿವೇಶನ ಹಾಗೂ ಕಟ್ಟಡ ಕಾಮಗಾರಿಗಳಿಗೆ ಶಾಸಕರ ನಿಧಿ ಹಾಗೂ ಸರ್ಕಾರದಿಂದ ಈ ವರ್ಷ ತಕ್ಕಮಟ್ಟಿನ ಅನುದಾನ ಲಭ್ಯವಾಗಿದೆ. ಸಮಾಜಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ಅನುದಾನ ಅಗತ್ಯವಿದ್ದು ಅನುದಾನ ದೊರಕಿಸುವಲ್ಲಿ ನಿಗಮದ ಅಧ್ಯಕ್ಷರು ನೆರವಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವಸಂತ ಅರ್ಕಾಚಾರ ಮಾತನಾಡಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ನವನಗರದ ಕಾಳಿಕಾ ದೇವಸ್ಥಾನದ ಸಮುದಾಯ ಭವನಕ್ಕೆ ₹ 3.5 ಲಕ್ಷ ಅನುದಾನ ನೀಡಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಶಿರೋಳದ ಯಚ್ಚರ ಸ್ವಾಮಿಗಳ ಸಂಸ್ಥಾನ ಗವಿಮಠದ ಯಚ್ಚರ ಸ್ವಾಮೀಜಿ ಆಶೀರ್ವಚನ ನೀಡಿದರು. ಇಂದಿನ ಪಾಲಕರು ತಮ್ಮ ಮಕ್ಕಳನ್ನು ಬೆಳೆಸುವಾಗ ಅವರಿಗೆ ಧಾರ್ಮಿಕ ಸಂಸ್ಕಾರ ನೀಡಿ, ವೈಶ್ವಕರ್ಮಣ ಪರಂಪರೆ ಬಗ್ಗೆ ಅರಿವು ಮೂಡಿಸಬೇಕು. ಇಲ್ಲವಾದಲ್ಲಿ ನಮ್ಮ ಜನಾಂಗ ಮುಂದಿನ ದಿನಗಳಲ್ಲಿ ನಮ್ಮ ಧಾರ್ಮಿಕ ಆತ್ಮೀಯತೆ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.ಪಾಲಿಕೆ ಸದಸ್ಯರಾದ ಚಂದ್ರಶೇಖರ ಮನಗುಂಡಿ, ಸುನಿತಾ ಮಾಳವದಕರ ಹಾಗೂ ನಿವೃತ್ತ ವೈದ್ಯಾಧಿಕಾರಿ ಡಾ. ಪದ್ಮಾವತಿ ಪತ್ತಾರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ವಿಕಾಸ ಸಮಿತಿ ಟ್ರಸ್ಟ್ ಅಧ್ಯಕ್ಷ ಸಿ.ಪಿ. ಮಾಯಾಚಾರಿ, ದೇವಸ್ಥಾನ ಉದ್ಘಾಟನೆಯಾದ 2 ವರ್ಷದಲ್ಲಿ ಪ್ರತಿ ಅಮಾವಾಸ್ಯೆ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಸೇವೆ, ಪ್ರತಿ ಶುಕ್ರವಾರ ಸಂಜೆ ಭಜನೆ ಹಾಗೂ ಭಕ್ತಿ ಗೀತೆಗಳ ಕಾರ್ಯಕ್ರಮ ಮತ್ತು ಕಾಳಿಕಾ ದೇವಿಗೆ ಪಲ್ಲಕ್ಕಿ ಸೇವೆ ಜರುಗುತ್ತಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಮೀನಾಕ್ಷಿ ಬಡಿಗೇರ, ಮೌನೇಶ ರಟ್ಟಿಹಳ್ಳಿ, ಜಕಣಾಚಾರ್ಯ ಕರವೀರಕರ, ವಿರೂಪಾಕ್ಷ ಬಡಿಗೇರ ಮತ್ತಿತರರು ಇದ್ದರು.