ಹಾನಗಲ್ಲ ತಾಲೂಕಿನಲ್ಲಿ 10 ದಿನದಲ್ಲಿ ₹50 ಲಕ್ಷ ಕರ ವಸೂಲಿ

| Published : Nov 26 2024, 12:49 AM IST

ಸಾರಾಂಶ

. ಗ್ರಾಮ ಪಂಚಾಯತ್‌ಗಳ ಕರ ವಸೂಲಿ ಮಾಸಾಚರಣೆ ಮಾಡುತ್ತಿರುವ ಹಾನಗಲ್ಲ ತಾಲೂಕು ಪಂಚಾಯತ್ ಆಡಳಿತ ಪೂರ್ಣ ಪ್ರಮಾಣದ ತೆರಿಗೆ ಪಾವತಿಸುವವರಿಗೆ ಹೂ ಗುಚ್ಛ, ಉಡುಗೊರೆ ನೀಡಿ, ಸನ್ಮಾನ ಗೌರವಕ್ಕೆ ಮುಂದಾಗಿದ್ದು ಹತ್ತು ದಿನಗಳಲ್ಲಿ ₹೫೦ ಲಕ್ಷ ಕರ ವಸೂಲಿ ಮಾಡಿದೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ, ಹಾನಗಲ್ಲ ಗ್ರಾಮ ಪಂಚಾಯತ್‌ಗಳ ಕರ ವಸೂಲಿ ಮಾಸಾಚರಣೆ ಮಾಡುತ್ತಿರುವ ಹಾನಗಲ್ಲ ತಾಲೂಕು ಪಂಚಾಯತ್ ಆಡಳಿತ ಪೂರ್ಣ ಪ್ರಮಾಣದ ತೆರಿಗೆ ಪಾವತಿಸುವವರಿಗೆ ಹೂ ಗುಚ್ಛ, ಉಡುಗೊರೆ ನೀಡಿ, ಸನ್ಮಾನ ಗೌರವಕ್ಕೆ ಮುಂದಾಗಿದ್ದು ಹತ್ತು ದಿನಗಳಲ್ಲಿ ₹೫೦ ಲಕ್ಷ ಕರ ವಸೂಲಿ ಮಾಡಿದೆ.

ತಾಲೂಕಿನ ೪೨ ಗ್ರಾಮ ಪಂಚಾಯಿತಿಗಳಲ್ಲಿ ₹೧೬ ಕೋಟಿ ಕರ ಬಾಕಿ ಇದೆ ಎಂದು ಕನ್ನಡಪ್ರಭ ವರದಿ ಮಾಡಿತ್ತು. ಅದರ ಫಲವಾಗಿ ಈಗ ತಾಲೂಕಿನಲ್ಲಿ ಕರ ವಸೂಲಿಗೆ ವಿಶೇಷ ಕ್ರಮ ಕೈಗೊಂಡಿರುವ ತಾಲೂಕು ಪಂಚಾಯತ್ ಆಡಳಿತ ಮಾರ್ಚ ಅಂತ್ಯದ ಹೊತ್ತಿಗೆ ಪೂರ್ಣ ಪ್ರಮಾಣದ ಕರ ವಸೂಲಿ ಮಾಡುವ ಗುರಿ ಹೊಂದಿದೆ. ಅಲ್ಲದೆ ಪಂಚಾಯಿತಿಗಳ ಎಲ್ಲ ನೌಕರರು ಪ್ರತಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಕಡ್ಡಾಯವಾಗಿ ಕರ ವಸೂಲಿಗೆ ಮುಂದಾಗಲೂ ಸೂಚಿಸಿದೆ. ಅಲ್ಲದೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕೂಡ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಕರ ವಸೂಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವು ಪಂಚಾಯಿತಿಗಳಲ್ಲಿ ದಿನಕ್ಕೆ ಹತ್ತು ಲಕ್ಷ ಕರ ವಸೂಲಿಯಾಗುತ್ತಿದೆ. ಹಾನಗಲ್ಲ ತಾಲೂಕಿನ ವೈಚವಳ್ಳಿ, ಉಪ್ಪಣಸಿ, ಆಡೂರು, ಕರಗುದರಿ, ಕೊಪ್ಪರಸಿಕೊಪ್ಪ, ಸುರಳೇಶ್ವರ, ಕೂಸನೂರು, ಮಲಗುಂದ, ಹೇರೂರು, ಶಿರಗೋಡ, ಸೋಮಸಾಗರ, ಗೆಜ್ಜಿಹಳ್ಳಿ ಗ್ರಾಪಂಗಳಲ್ಲಿ ಕರ ವಸೂಲಿ ನೌಕರರಿಲ್ಲ. ಆದರೂ ಈ ಗ್ರಾಪಂನ ಎಲ್ಲ ನೌಕರರು ಒಟ್ಟಾಗಿ ಕರ ವಸೂಲಿಗೆ ಮುಂದಾಗಿದ್ದಾರೆ. ಉಪ್ಪಣಿಸಿ ಹಾಗೂ ಬೈಚವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಸಗಿಯವರಿಗೆ ಕರ ಆಕರಣೆಯ ಜವಾಬ್ದಾರಿ ನೀಡಲಾಗಿದ್ದು ಅವರಿಗೆ ವಸೂಲಿಯಾದ ಕರದಲ್ಲಿ ಶೇ.೫ರಷ್ಟು ನೀಡಲಾಗುತ್ತಿದೆ. ಅಲ್ಲಿನ ಮಹಿಳಾ ಸಂಘಟನೆಗಳು ಈ ಕಾರ್ಯವನ್ನು ವಹಿಸಿಕೊಂಡಿವೆ.ಪೂರ್ಣ ಪ್ರಮಾಣದ ಕರ ಪಾವತಿ ಮಾಡಿದವರಿಗೆ ವಿವಿಧ ಪ್ರೋತ್ಸಾಹಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಡಂಗುರ ಸಾರಿಸಿ, ಮನೆ ಮನೆಗಳಿಗೆ ತೆರಳಿ ಪಂಚಾಯತ್ ನೌಕರರು ಕರ ನೀಡಲು ವಿನಂತಿಸುತ್ತಿರುವುದರ ಪರಿಣಾಮವಾಗಿ ಕರಾಕರಣೆಯಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಮಾರ್ಚ ತಿಂಗಳ ಹೊತ್ತಿಗೆ ಪೂರ್ಣ ಪ್ರಮಾಣದ ಕರ ವಸೂಲಿಗೆ ಕ್ರಮ ಜರುಗಿಸಲಾಗಿದೆ. ಫೋನ್ ಕರೆ ಮಾಡಿ ಅವರ ಕರ ಎಷ್ಟಿದೆ ಎಂದು ಮಾಹಿತಿ ನೀಡುವುದು, ಕರ ಪತ್ರ ಹಂಚುವುದು, ಚಕ್ಕಡಿಯನ್ನು ಅಲಂಕರಿಸಿ ಮೆರವಣಿಗೆ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಹೂ ಗುಚ್ಛ ಕೊಡುಗೆಗಳನ್ನು ಸಹ ನೀಡಲಾಗುತ್ತಿದೆ. ಹಾನಗಲ್ಲ ತಾಲೂಕಿನ ೪೨ ಗ್ರಾಮ ಪಂಚಾಯತಿಗಳು ಪೂರ್ಣ ಪ್ರಮಾಣದಲ್ಲಿ ಕರ ವಸೂಲಿಗೆ ಕ್ರಮ ಕೈಗೊಂಡಿದ್ದು ಅಲ್ಲದೆ, ಈ ಬಾರಿ ಪೂರ್ಣ ಪ್ರಮಾಣದ ಕರ ವಸೂಲಿ ಶಪಥ ಮಾಡಿದಂತಿದೆ. ಇದು ಇಡೀ ರಾಜ್ಯಕ್ಕೆ ಮಾದರಿ ಎನ್ನಲಾಗುತ್ತಿದೆ. ನಮ್ಮ ಪಾಲಿನ ಕರ ಕಟ್ಟಬೇಕು ಎಂಬ ಅರಿವು ಮೂಡಿಸಿದ್ದರಿಂದ ಇದು ಸಾಧ್ಯವಾಗಿದೆ. ಈ ಬಾರಿ ವರ್ಷಾಂತ್ಯಕ್ಕೆ ಪೂರ್ಣ ಪ್ರಮಾಣದ ₹೧೫ ಕೋಟಿ ಕರ ವಸೂಲಿ ಮಾಡುವ ನಂಬಿಕೆ ಇದೆ ತಾಪಂ ಇಒ ಪರಶುರಾಮ ಪೂಜಾರ ಹೇಳುತ್ತಾರೆ.

ಜನರಿಗೆ ತಿಳುವಳಿಕೆ ಹೇಳಿದ್ದರಿಂದ ಕರ ವಸೂಲಿ ಚನ್ನಾಗಿ ಆಗುತ್ತಿದೆ. ಕೆಲವರು ಸಮಯಾವಕಾಶ ಕೇಳುತ್ತಿದ್ದಾರೆ. ಕೆಲವರು ಒಂದೆರಡು ದಿನಗಳಲ್ಲಿ ಕಚೇರಿಗೆ ಬಂದು ತಲುಪಿಸುತ್ತಿದ್ದಾರೆ. ಎಲ್ಲ ನೌಕರರ ಸಹಕಾರದಿಂದ ಇದು ಸಾಧ್ಯವಾಗಿದೆ ಸಾಂವಸಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಫಕ್ಕೀರೇಶ ಸಾತೇನಹಳ್ಳಿ ಹೇಳಿದರು.