ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಎಲ್ಲ ಸಮುದಾಯಗಳಿಗೂ ಅನುಕೂಲ ಆಗುತ್ತಿರುವುದು ಸಂತಸದ ಸಂಗತಿ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕನ್ನಡಪ್ರಭಾ ವಾರ್ತೆ ಜಮಖಂಡಿ

ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಎಲ್ಲ ಸಮುದಾಯಗಳಿಗೂ ಅನುಕೂಲ ಆಗುತ್ತಿರುವುದು ಸಂತಸದ ಸಂಗತಿ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.ಜಮಖಂಡಿಯ ವೇಮ ವಿಕಾಸ ವೇದಿಕೆ ಆಶ್ರಯದಲ್ಲಿ ನಿರ್ಮಾಣಗೊಳ್ಳಲಿರುವ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಅಡಿಗಲ್ಲು ಸಮಾರಂಭ ಹಾಗೂ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು. ದೇವಸ್ಥಾನ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯಿಂದ ₹50 ಲಕ್ಷ ಹಾಗೂ ವೈಯಕ್ತಿಕವಾಗಿ ₹10 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು, ದೇವಸ್ಥಾನ ವಿನ್ಯಾಸ ಚೆನ್ನಾಗಿದೆ ಸಂತಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ವಿವಾಹಗಳ ಆಗುವ ನೂತನ ದಂಪತಿಗೆ ನಮಸ್ಕರಿಸಲು ದೇವಾಲಯ ಬೇಕಾಗಿತ್ತು. ಈಗ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ನಿರ್ಮಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದು ಹೇಳಿದರು. ಶಾಸಕರ ನಿಧಿಯಿಂದ ₹5 ಲಕ್ಷ ಹಾಗೂ ವೈಯಕ್ತಿಕವಾಗಿ ₹2 ಲಕ್ಷ ಅನುದಾನ ನೀಡುವುದಾಗಿ ವಾಗ್ದಾನ ಮಾಡಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಒಬ್ಬ ಆದರ್ಶ ಸತಿ, ಆದರ್ಶ ತಾಯಿ ಹಾಗೂ ಆದರ್ಶ ಕುಟುಂಬ ನಿರ್ವಾಹಕಿ ಎಂದು ಬಣ್ಣಿಸಿದರಲ್ಲದೆ, ಅವರ ಆದರ್ಶಗಳು ಇಂದಿನ ಮಹಿಳೆಯರಿಗೆ ದಾರಿದೀಪವಾಗಬೇಕು ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಹನೆ ಮತ್ತು ತಾಳ್ಮೆಗೆ ಹೇಮರಡ್ಡಿ ಮಲ್ಲಮ್ಮ ಸ್ಫೂರ್ತಿಯಾಗಿದ್ದಾರೆ. ಜೀವನದಲ್ಲಿ ಬರುವ ಕಷ್ಟಗಳನ್ನು ದೈವಭಕ್ತಿಯಿಂದ ನಿವಾರಿಸಿಕೊಳ್ಳಬಹುದು ಎಂಬುವುದನ್ನು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.

ಹೇಮರಡ್ಡಿ ಮಲ್ಲಮ್ಮನವರ ಸುಪ್ರಭಾತದ ಲೋಕಾರ್ಪಣೆ ಹಾಗೂ ಜಮಖಂಡಿ ತಾಲೂಕಿನ ರಡ್ಡಿ ಸಮಾಜದವರ ಮನೆ ಮನೆಯ ಸಮೀಕ್ಷಾ ವರದಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಹರಿಹರ ತಾಲೂಕಿನ ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಿನಗುಂಡಿ ಶ್ರೀಮಠದ ಲಕ್ಕಮ್ಮತಾಯಿ, ರಾಜೇಶ್ವರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಂ.ಶೇಖರಡ್ಡಿ ಮಾತನಾಡಿದರು. ವಿಧಾನ ಪರಿಷತ್ ಶಾಸಕ ಹನುಮಂತ ನಿರಾಣಿ, ಬೀಳಗಿಯ ರಾಮನಗೌಡ ಚಿಕ್ಕನಗೌಡರ, ಶಿವನಗೌಡ ಪಾಟೀಲ, ಡಾ.ಜಿ.ವಿ. ಉದಪುಡಿ, ಎಲ್.ಆರ್. ಉದಪುಡಿ, ಕೃಷ್ಣಾರೆಡ್ಡಿ ಇತರರು ಇದ್ದರು.

ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಸರಸ್ವತಿ ಸಬರದ ಪ್ರಾರ್ಥನೆ ಗೀತೆ ಹಾಡಿದರು. ವೇಮ ವಿಕಾಸ ವೇದಿಕೆಯ ಅಧ್ಯಕ್ಷ ಡಾ.ಆರ್.ಎನ್. ಸೋನವಾಲ್ಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಕಲ್ಲೂರ, ಅನಿತಾ ಪಾಟೀಲ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ ಕೆ. ಬಿರಾದಾರಪಾಟೀಲ ವಂದಿಸಿದರು.

ರಡ್ಡಿ ಸಮಾಜದವರು ಬೇಡುವವರಲ್ಲ, ನೀಡುವವರು ಎಂಬುವುದನ್ನು ರಡ್ಡಿ ಸಮಾಜದವರ ಕೈ ಆಕಾಶದ ಕಡೆಗೆ ಇರಬಾರದು. ಬದಲಾಗಿ ಭೂಮಿಯ ಕಡೆಗೆ ಇರಬೇಕು.

ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ವಿಶ್ವದ ಆದರ್ಶ ಮಹಿಳೆ, ಅವರ ಸಾತ್ವಿಕ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಈ ಸಮುದಾಯ ಭವನ ರಡ್ಡಿ ಸಮುದಾಯದ ಜೊತೆಗೆ ಇತರ ಸಮುದಾಯಗಳಿಗೂ ಮಾದರಿಯಾಗಿದೆ.

- ಎಸ್.ಆರ್. ಪಾಟೀಲ ಮಾಜಿ ಸಚಿವರು