ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಶತಮಾನದ ಅಂಚಿನ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಮಂಜೂರು ಮಾಡಿ ಬಿಡುಗಡೆಗೊಳಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಶತಮಾನದ ಅಂಚಿನ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಮಂಜೂರು ಮಾಡಿ ಬಿಡುಗಡೆಗೊಳಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು.ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚುಕ್ಕೆ ಗುರುತಿಲ್ಲದ ಪ್ರಶ್ನೆಯಡಿ, ಶತಮಾನದ ಅಂಚಿನ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿದರು.
ನಾಡಿನ ಅನೇಕ ಚಲನಚಿತ್ರ ನಟ, ನಟಿಯರು, ಹವ್ಯಾಸಿ ಕಲಾವಿದರಿಗೆ ಅತ್ಯುತ್ತಮ ವೇದಿಕೆ ಆಗಿದ್ದ ಕಿತ್ತೂರು ರಾಣಿ ಚನ್ನಮ್ಮ ನಾಟ್ಯ ಮಂದಿರ ನೆಲಸಮಗೊಂಡು, 8 ವರ್ಷಗಳು ಗತಿಸಿದರೂ ಈ ವರೆಗೆ ಪುನರ್ ನಿರ್ಮಾಣವಾಗಿಲ್ಲ. ಅನುದಾನ ಮಂಜೂರಾತಿಗಾಗಿ ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿದರೂ ಬಿಡುಗಡೆಗೊಳ್ಳದೆ, ಈ ನಾಟ್ಯ ಮಂದಿರ ಪುನರುಜ್ಜೀವನ ಕಾರ್ಯ ನೆನಗೂದಿಗೆ ಬಿದ್ದಿದ್ದರಿಂದ ನಾಟಕಗಳ ಪ್ರದರ್ಶನಕ್ಕೆ ಸಮಸ್ಯೆ ಆಗುತ್ತಿರುವ ಬಗ್ಗೆ ಹಿಂದಿನ ಬಜೆಟ್ ಅಧಿವೇಶನದಲ್ಲಿಯೂ ಶಾಸಕರು ಸರ್ಕಾರದ ಗಮನಸೆಳೆದಿದ್ದರು. ಆಗ ಪರಿಶೀಲಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅಲ್ಲದೇ, ಮುಖ್ಯಮಂತ್ರಿಗಳು, ಸಚಿವರಿಗೂ ಪತ್ರ ಬರೆದರೂ ಅನುದಾನ ಬಿಡುಗಡೆಗೊಂಡಿರಲಿಲ್ಲ.ಹೀಗಾಗಿ ಪ್ರಸಕ್ತ ಚಳಿಗಾಲ ಅಧಿವೇಶನದಲ್ಲಿ ಮತ್ತೆ ನಾಟಕ ಪ್ರೋತ್ಸಾಹಿಸಲು ಹಾಗೂ ಹಲವು ದಶಕಗಳ ಕಾಲ ಸಾವಿರಾರು ಕಲಾವಿದರ ಕಲೆ ಪ್ರದರ್ಶನಕ್ಕೆ ವೇದಿಕೆ ಆಗಿದ್ದ ಈ ನಾಟ್ಯ ಮಂದಿರ ಪುನರುಜ್ಜೀವನಗೊಳಿಸಲು ಅಗತ್ಯ ಅನುದಾನ ಮಂಜೂರಿಸಿ, ಅನುಷ್ಠಾನಗೊಳಿಸುವ ಬಗ್ಗೆ ಸರ್ಕಾರದ ಗಮನಸೆಳೆದಿದ್ದರಿಂದ, ಡಿ.10ರಂದು ಸರ್ಕಾರ ₹50 ಲಕ್ಷ ಮಂಜೂರಿಸಿ, ಬಿಡುಗಡೆಗೊಳಿಸಿರುವುದಾಗಿ ಸಚಿವರು ಲಿಖಿತ ಉತ್ತರ ನೀಡಿದ್ದಾರೆಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.