ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅವಕಾಶ ವಂಚಿತ ಲಿಂಗತ್ವ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು. ಶಾಸನ ಸಭೆಗಳಲ್ಲಿ ನಮ್ಮ ಪ್ರಾತಿನಿಧ್ಯ ಇರಬೇಕು. ನಮ್ಮ ಸಮುದಾಯಕ್ಕೆ ಶೇ.1 ರಾಜಕೀಯ ಮೀಸಲಾತಿ ನೀಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷೆ, ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರ ರಾಷ್ಟ್ರೀಯ ಹೋರಾಟಗಾರ್ತಿ ಡಾ. ಅಕ್ಕಯ್ಯ ಪದ್ಮಶಾಲಿ ತಿಳಿಸಿದರು.ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರಿಗೆ ಇನ್ಸೂರೆನ್ಸ್ ಬಾಂಡ್ ಅನ್ನು ವಿತರಿಸಿ ಮಾತನಾಡಿದ ಅವರು, ಸಂವಿಧಾನ ನಮಗೆ ಎಲ್ಲರಂತೆ ಜೀವಿಸಲು ಸಮಾನ ಹಕ್ಕು ನೀಡಿದೆ. ಹಾಗಾಗಿ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಟ್ಟು ನಮ್ಮನ್ನು ಗುರಿತಿಸಬೇಕು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಡೆಯಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಶಾಸಕಾಂಗದಲ್ಲಿ ಅವಕಾಶ ನೀಡಬೇಕು ಎಂದರು.
ಈ ಸಮಾಜ ನಮ್ಮನ್ನು ಮನುಷ್ಯರಂತೆ ಕಾಣುತ್ತಿಲ್ಲ. ಇಂತಹ ಮನೋಭಾವಗಳು ಸಮಾಜದಿಂದ ತೊಡೆದು ಹೋಗಬೇಕು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ನಮ್ಮ ಕಷ್ಟ ಅರಿತು ದೇಶಾದ್ಯಂತ ರೈಲಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅನುಮತಿ ನೀಡಿದ್ದರು. ದೇಶದಲ್ಲಿ ಶೇ.3 ರಷ್ಟು ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಅವರಿಗೆ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ದೊರಕಿಸಿ ಕೊಡುವುದು ಸರ್ಕಾರಗಳ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.ಮೊದಲ ಹಂತದಲ್ಲಿ ಸುಮಾರು 50 ಮಂದಿಗೆ ಇನ್ಸೂರೆನ್ಸ್ ಬಾಂಡ್ ವಿತರಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ರವಿ ಮಾವಿನಹಳ್ಳಿ, ನಗರಾಧ್ಯಕ್ಷ ರಘುರಾಜ್ ಅರಸ್, ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷೆ ಪ್ರಣತಿ ಪ್ರಕಾಶ್, ಮುಖಂಡರಾದ ಈಶ್ವರ್ ಚಕ್ಕಡಿ, ಶಿವಪ್ರಸಾದ್, ನಾಗೇಶ್, ಪ್ರವೀಣ್, ಗಿರೀಶ್, ನಾಗರಾಜ, ಮಹದೇವ, ಶಿವಕುಮಾರ್, ಪ್ರವೀಣ, ಮಹೇಂದ್ರ, ಭೈರೇಗೌಡ, ಹರೀಶ್ ರೆಡ್ಡಿ ಮೊದಲಾದವರು ಇದ್ದರು.
----ಕೋಟ್...
ಲಿಂಗತ್ವ ಅಲ್ಪಸಂಖ್ಯಾತರಿಗೆ ಜೀವ ವಿಮೆ ಮಾಡಿಸುತ್ತಿರುವುದು ಇತಿಹಾಸ ಮತ್ತು ಮೈಲಿಗಲ್ಲು. ಇದು ದೇಶದಲ್ಲಿಯೇ ಮೊದಲು. ಅಪ್ಪ, ಅಮ್ಮ, ಸಮಾಜ, ವೈದ್ಯರಿಗೆ ಬೇಡವಾದ ಮತ್ತು ಪ್ರಕೃತಿಗೆ ಸವಾಲಾಗಿ ಹುಟ್ಟಿರುವ ಮಕ್ಕಳಿಗೆ ನೆರವಾಗುವುದು ತಾಯ್ತನ ಇದ್ದವರಿಗೆ ಮಾತ್ರ ಸಾಧ್ಯ.- ಡಾ. ಅಕ್ಕಯ್ಯ ಪದ್ಮಶಾಲಿ, ಕೆಪಿಸಿಸಿ ಉಪಾಧ್ಯಕ್ಷೆ
----ಲಿಂಗತ್ವ ಅಲ್ಪಸಂಖ್ಯಾತರ 50 ಜನರಿಗೆ ಜೀವ ವಿಮೆ ಮಾಡಿಸಿದ್ದೇವೆ. ಅಪಘಾತವಾದರೆ 1 ಲಕ್ಷ ರೂ., ಸಾವಾದರೆ 2 ಲಕ್ಷ ರೂ. ಹಣವನ್ನು ವಿಮೆ ಕಂಪನಿ ನೀಡುತ್ತದೆ. ಮೊದಲ ವರ್ಷದ ಹಣವನ್ನು ಪಾವತಿಸಿದ್ದೇವೆ. ಮುಂದಿನ ವರ್ಷದ ಹಣವನ್ನು ಕಟ್ಟಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಜೀವ ವಿಮೆ ಮಾಡಿಸಿರುವುದು ಕಾಂಗ್ರೆಸ್ ಮಾನವೀಯತೆ ಕೆಲಸವಾಗಿದೆ.
- ಡಾ.ಬಿ.ಜೆ. ವಿಜಯ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ