ಕುಕ್ಕೆ: ಸಂಭ್ರಮದ ಕಿರುಷಷ್ಠಿ ರಥೋತ್ಸವ

| Published : Jan 17 2024, 01:48 AM IST

ಸಾರಾಂಶ

ಪ್ರಮುಖ ನಾಗಾರಾಧನೆ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಕಿರುಷಷ್ಠಿ ಪ್ರಯುಕ್ತ ಸಂಭ್ರಮದ ರಥೋತ್ಸವ ನಡೆಯಿತು, ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಠಿಯ ದಿನವಾದ ಮಂಗಳವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಭಕ್ತಿ ಸಡಗರದಿಂದ ನೆರವೇರಿತು.

ಸಹಸ್ರಾರು ಸಂಖ್ಯೆಯ ಭಕ್ತರು, ಪರಾಕುಗಳೊಂದಿಗೆ ತಳಿರು, ತೋರಣ, ಸೀಯಾಳ, ಅಡಕೆ, ಬಾಳೆ, ಬಾಳೆಗೊನೆ ಮತ್ತು ವಿದ್ಯುತ್ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ರಥಾರೋಹಣದ ಬಳಿಕ ದೇವಳದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯ ದೇವರಿಗೆ ಪೂಜೆ ನೆರವೇರಿಸಿದರು. ಬಳಿಕ ವೈಭವದ ರಥೋತ್ಸವ ನೆರವೇರಿತು.

ನಂತರ ಸವಾರಿ ಮಂಟಪದ ಕಿರುಷಷ್ಠಿ ಕಟ್ಟೆಯಲ್ಲಿ ದೇವರಿಗೆ ಪೂಜೆ ನೆರವೇರಿತು. ಈ ಸಂದರ್ಭ ಆಕರ್ಷಕ ಸುಡುಮದ್ದುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು. ಬಳಿಕ ದೇವಳದ ಹೊರಾಂಗಣದಲ್ಲಿ ಪಾಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು.

ಮದ್ಯಾಹ್ನ ಮಹಾ ಪೂಜೆಯ ಬಳಿಕ ೫೦ ಮಂದಿ ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸಲ್ಲಿಸಿದರು. ದಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತ ಡಾ. ವಿಜಯ ಕುಮಾರ್ ಮಾರ್ಗದರ್ಶನದಲ್ಲಿ ಎಡೆಸ್ನಾನ ನೆರವೇರಿತು. ದೇವಳದ ಅರ್ಚಕ ಸರ್ವೇಶ್ವರ ಭಟ್, ಪ್ರಮೋದ್ ಕುಮಾರ್ ಮತ್ತಿತರರಿದ್ದರು.

ಧಾರ್ಮಿಕ ಸಭೆ: ದೇವಸ್ಥಾನಗಳು ಈ ಸಮಾಜದಲ್ಲಿ, ದೇಶದಲ್ಲಿ ಶ್ರದ್ಧೆಯ ಸಂಕೇತವಾಗಿದೆ. ಈ ಸಮಾಜವನ್ನು ರಕ್ಷಣೆ ಮಾಡುತ್ತಿರುವುದರಲ್ಲಿ ದೇವಸ್ಥಾನಗಳು ಅಗ್ರ ಹೆಸರಿನಲ್ಲಿವೆ ಎಂದು ಕರ್ನಾಟಕ ರಾಜ್ಯ ದೇವಾಲಯ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ್ ಮಠದ್ ಹೇಳಿದರು.

ಕಿರುಷಷ್ಠಿ ಮಹೋತ್ಸವ ಪ್ರಯುಕ್ತ ಶ್ರೀ ಕಾರ್ತಿಕ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ಕರ್ನಾಟಕದಲ್ಲಿ ಸುಮಾರು ೨.೮ ಲಕ್ಷಕ್ಕೂ ಅಧಿಕ ದೇವಸ್ಥಾನಗಳು ಶ್ರದ್ಧೆ, ಭಕ್ತಿಯನ್ನು ಬೆಳೆಸುವ ಕೆಲಸವನ್ನು ಮಾಡುತ್ತಿವೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿ ಹಾಗೂ ಸೇವಾ ಎಂಬ ಐದು ಅಂಶಗಳನ್ನು ನೆರವೇರಿಸುತ್ತಿವೆ ಎಂದರು. ಕರ್ನಾಟಕದ ಹಲವು ದೇವಸ್ಥಾನಗಳು ಪ್ರಸಾದದ ಮೂಲಕ ಅನ್ನದಾನ ಮಾಡುತ್ತಿರುವುದು ದೇಶದಲ್ಲೇ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಕರ್ನಾಟಕ ಆದರ್ಶವೆನಿಸಿಕೊಂಡಿದೆ ಎಂದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಊರಿನಲ್ಲಿ ದೇವಾಲಯ, ವಿದ್ಯಾಲಯ ಇದ್ದಲ್ಲಿ ಆ ಊರು ಸ್ವಚ್ಛ, ಸಮೃದ್ಧವಾಗಿರಲು ಸಾಧ್ಯವಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಭಕ್ತಿ ಇಲ್ಲದ ಕಡೆ ಯಾವುದೇ ಫಲಪ್ರದ ಸಿಗಲು ಸಾಧ್ಯವಿಲ್ಲ ಎಂದರು.

ಕುಕ್ಕೆ ಸುಬ್ರಹ್ಮಣ್ಯನು ಸಂಗೀತ ಪ್ರೀಯನಾಗಿರುವುದರಿಂದ ರಥೋತ್ಸವದ ಬಳಿಕ ನಡೆದ ಒಳಾಂಗಣ ಉತ್ಸವದಲ್ಲಿ ಅನೇಕ ಸಂಗೀತಮಯ ಉತ್ಸವದ ಸುತ್ತುಗಳು ನೆರವೇರಿತು. ತಮಿಳುನಾಡು, ಕೇರಳ, ಮೈಸೂರು, ಶ್ರೀ ರಂಗಪಟ್ಟಣ ಮೊದಲಾದ ಪ್ರದೇಶಗಳ ಕಲಾವಿದರಿಂದ ಸ್ಯಾಕ್ಸೋಪೋನ್, ನಾದಸ್ವರ, ತವಿಲ್, ಬ್ಯಾಂಡ್ ಮೊದಲಾದ ಸಂಗೀತ ವಾದ್ಯಗಳ ಉತ್ಸವಗಳ ಸುತ್ತುಗಳು ಭಕ್ತರನ್ನು ಭಾವಪರವಶವಾಗುವಂತೆ ಮಾಡಿತು. ಕೇರಳ ಶೈಲಿಯ ಚೆಂಡೆ ವಾದನದ ಕೂಡಾ ನಡೆಯಿತು.

ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಮ್ ಸುಳ್ಳಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್, ವನಜಾ.ವಿ.ಭಟ್, ಲೋಕೇಶ್ ಮುಂಡುಕಜೆ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸಾ ಬೆಂಗಳೂರು, ಲೋಕೇಶ್ ಮುಂಡೋಕಜೆ, ವನಜಾ ವಿ.ಭಟ್, ಶೋಭಾ ಗಿರಿಧರ್, ಮನೋಹರ ರೈ, ಪಿ.ಜಿ.ಎಸ್.ಎನ್.ಪ್ರಸಾದ್ ಮತ್ತಿತರರು ಇದ್ದರು. ಸದಸ್ಯ ಪಿ.ಜಿ.ಎಸ್.ಎನ್.ಪ್ರಸಾದ್ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಸನ್ನ ದರ್ಬೆ ವಂದಿಸಿದರು. ಉಪನ್ಯಾಸಕರಾದ ವಿನ್ಯಾಸ್ ಹೊಸೊಳಿಕೆ, ಕೃತಿಕಾ, ಅಶ್ವಿನಿ, ವಿದ್ಯಾರ್ಥಿನಿ ಕೀರ್ತಿ ನಿರೂಪಿಸಿದರು.