ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಹೇಮಗಿರಿ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ರೈತರ ಪ್ರತಿ ಟನ್ ಕಬ್ಬಿನ 50 ರು. ಪ್ರೋತ್ಸಾಹ ಧನದ ಹಿಂಬಾಕಿ ತಕ್ಷಣವೇ ಪಾವತಿಸಲು ಕ್ರಮ ವಹಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಶಂಖ, ಜಾಗಟೆ, ತಿರುಪತಿ ನಾಮ, ಚೆಂಬು ಹಿಡಿದು ಪಟ್ಟಣದ ಪ್ರವಾಸಿ ಮಂದಿರದ ಆವರಣದಿಂದ ತಾಲೂಕು ಕಚೇರಿವರೆಗೆ ಬಾರುಕೋಲು ಹಿಡಿದು ತಮಟೆ ಬಡಿಯುತ್ತಾ ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರದ ಘೋಷಣೆ ಕೂಗಿದರು.
ಹೆಜ್ಜೆ ಹೆಜ್ಜೆಗೂ ಶಂಕ ಊದಿ, ಜಾಗಟೆ ಬಾರಿಸುತ್ತಾ ರೈತ ವಿರೋಧಿ ಸರ್ಕಾರಕ್ಕೆ ಗೋವಿಂದಾ, ಗೋವಿಂದಾ.. ಎನ್ನುತ್ತಾ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೈತರ ಕೃಷಿ ಚಟುವಟಿಕೆಗಳಿಗೆ ಮರಣ ಶಾಸನದಂತಿರುವ ರಾಜ್ಯ ಸರ್ಕಾರದ ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ನೀತಿ ಕೈ ಬಿಡಬೇಕು ಎಂದು ಆಗ್ರಹಿಸಿದರು.ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕಬ್ಬಿಗೆ ಹೆಚ್ಚಿನ ಬೆಲೆ ನೀಡುವಂತೆ ಆಗ್ರಹಿಸಿ ರೈತಸಂಘ 109 ದಿನ ಹಗಲು ರಾತ್ರಿ ಬೀದಿ ಹೋರಾಟ ನಡೆಸಿತ್ತು. ರೈತ ಹೋರಾಟದ ಫಲವಾಗಿ ರೈತರ ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ 50 ರು. ಮತ್ತು ಕಾರ್ಖಾನೆ ವತಿಯಿಂದ 50 ರು. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಯಿತು.
ರಾಜ್ಯ ಸರ್ಕಾರ ತಾನು ನೀಡಬೇಕಾದ 50 ರು. ಪ್ರೋತ್ಸಾಹ ಧನ ಬಿಡುಗಡೆ ಮಾಡಿದೆ. ಆದರೆ, ತಾಲೂಕಿನ ಹೇಮಗಿರಿ ಶುಗರ್ಸ್ ಕಂಪನಿ ನ್ಯಾಯಾಲಯದ ಆದೇಶದ ವಿರುದ್ಧ ತಡೆಯಾಜ್ಞೆ ತಂದಿದೆ. ಆದರೆ, ಸರ್ಕಾರ ಇದನ್ನು ತೆರವುಗೊಳಿಸಿ ರೈತರ ನೆರವಿಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಮಗಿರಿ ಸಕ್ಕರೆ ಕಾರ್ಖಾನೆ ತಾನು ತಂದಿರುವ ತಡೆಯಾಜ್ಞೆ ಹಿಂಪಡೆಯಬೇಕು. ರೈತರಿಗೆ ನೀಡಬೇಕಾದ 50 ರು. ಪ್ರೋತ್ಸಾಹ ಧನ ಪಾವತಿಸಿದ ಅನಂತರವೇ ಪ್ರಸಕ್ತ ಸಾಲಿನ ತನ್ನ ಕಬ್ಬು ಅರೆಯುವಿಕೆ ಆರಂಭಿಸಬೇಕು. ತಪ್ಪಿದಲ್ಲಿ ಕಬ್ಬು ಅರೆಯುವಿಕೆಗೆ ತಡೆಯೊಡ್ಡುವುದಾಗಿ ಎಚ್ಚರಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ವಿದ್ಯುತ್ ವಿತರಣಾ ವ್ಯವಸ್ತೆಯನ್ನು ಖಾಸಗಿ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.ರಾಜ್ಯದ ರೈತರ ಐ.ಪಿ.ಸೆಟ್ ಮತ್ತು ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮುಂತಾದ ಉಚಿತ ವಿದ್ಯುತ್ ಸೌಲಭ್ಯಗಳನ್ನು ರದ್ದು ಮಾಡುವ ಹುನ್ನಾರದ ಅಂಗವಾಗಿ ಸರ್ಕಾರ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ರೈತಸಂಘ ಮುಖಂಡರಾದ ಕೆ.ಆರ್.ಜಯರಾಂ, ಜಿಲ್ಲಾ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ಮುಖಂಡರಾದ ಬೂಕನಕೆರೆ ನಾಗರಾಜು, ಮುದ್ದುಕುಮಾರ್, ಕರೋಟಿ ತಮ್ಮಯ್ಯ, ಎಲ್.ಬಿ.ಜಗದೀಶ್, ನಗರೂರು ಕುಮಾರ್, ಹೊನ್ನೇಗೌಡ, ಕಾಗೇಪುರ ಮಹೇಶ್, ಚೌಡೇನಹಳ್ಳಿ ಕೃಷ್ಣೇಗೌಡ, ನಾರಾಯಣಸ್ವಾಮಿ, ಲಕ್ಷ್ಮೀಪುರ ನಾಗರಾಜು, ಮಡುವಿನಕೋಡಿ ಪ್ರಕಾಶ್, ಕೃಷ್ಣಾಪುರ ರಾಜಣ್ಣ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.