ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಮಹಾಶಿವರಾತ್ರಿ ಹಿನ್ನೆಲೆ ಸಿದ್ಧಾರೂಢರ ಮಠದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಾಜ್ಯ. ಹೊರ ರಾಜ್ಯದಿಂದ ಭಕ್ತಗಣ ಪಾದಯಾತ್ರೆ ಮೂಲಕ ಹರಿದು ಬರುತ್ತಿದೆ. ಫೆ. 16ರಂದು ಸಂಜೆ ನಡೆಯುವ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದು, ಈಗಾಗಲೇ ಪಾದಯಾತ್ರೆ ಮೂಲಕ 50 ಸಾವಿರಕ್ಕೂ ಹೆಚ್ಚು ಭಕ್ತರು ಅಜ್ಜನ ಸನ್ನಿಧಿಯತ್ತ ಧಾವಿಸಿದ್ದಾರೆ.

ಕೊರಳಲ್ಲಿ ಶಾಲು, ತಲೆಯ ಮೇಲೊಂದು ಟೋಪಿ, ಕೈಯಲ್ಲಿ ತಾಳ ಹಿಡಿದು ಸಿದ್ಧಾರೂಢರ, ಶಿವನಾಮಸ್ಮರಣೆ ಮಾಡುತ್ತ ರಸ್ತೆಯ ಪಕ್ಕದಲ್ಲಿ ತಂಡೋಪತಂಡವಾಗಿ ಪಾದಯಾತ್ರೆ ಮಾಡುತ್ತ ಸಾಗರೋಪಾದಿಯಲ್ಲಿ ಸಿದ್ಧಾರೂಢರ ಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಈ ಪದ್ಧತಿ ಕಳೆದ 25-30 ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಪ್ರತಿವರ್ಷವೂ ಭಕ್ತರ ಸಂಖ್ಯೆ ಹೆಚ್ಚುತ್ತಾ ಸಾಗಿದೆ.


ಎಲ್ಲಿಂದ ಬರುತ್ತಾರೆ?

ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಕಲಬುರಗಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ 50ಕ್ಕೂ ಅಧಿಕ ಊರುಗಳಿಂದ ಪಾದಯಾತ್ರೆ ಮೂಲಕ ಅಜ್ಜನ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಬಾಗಲಕೋಟೆ ಜಿಲ್ಲೆ ರಬಕವಿ, ಬನಹಟ್ಟಿ ತಾಲೂಕಿನ ಮಹಲಿಂಗಪುರ ಭಾಗದಿಂದಲೇ 5 ಸಾವಿರಕ್ಕೂ ಅಧಿಕ ಹಾಗೂ ಆಳಂದದಿಂದ 3 ಸಾವಿರಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುತ್ತಾರೆ.

28ನೇ ವರ್ಷದ ಯಾತ್ರೆ:

ಕಲಬುರಗಿ ಜಿಲ್ಲೆಯ ಆಳಂದದ ಸದ್ಗುರು ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ ಭಕ್ತ ಮಂಡಳಿಯಿಂದ 28 ವರ್ಷಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಫೆ. 1ರಂದು ಆಳಂದ ಪಟ್ಟಣದ ಶಿವಶರಣ ಮಂಟಪದಿಂದ ಆರಂಭಿಸಿರುವ ಪಾದಯಾತ್ರೆಯು ಭಾನುವಾರ ಬೆಳಗ್ಗೆ ಸಿದ್ಧಾರೂಢರ ಮಠಕ್ಕೆ ಆಗಮಿಸಲಿದೆ.

25ನೇ ವರ್ಷದ ಯಾತ್ರೆ:

2002ರಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಶ್ರೀಗಳ ನೇತೃತ್ವದಲ್ಲಿ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಆರಂಭವಾಗಿದ್ದ ಈ ಪಾದಯಾತ್ರೆಯಲ್ಲಿ ಇಂದು ನಾಲ್ಕೈದು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುತ್ತಿರುವುದು ವಿಶೇಷ. 85 ವರ್ಷದ ಸಹಜಾನಂದ ಶ್ರೀಗಳು ಇಂದಿಗೂ ಪಾದಯಾತ್ರೆಯ ನೇತೃತ್ವ ವಹಿಸಿರುವುದು ವಿಶೇಷ. ಫೆ. 11ರಂದು ಮಹಾಲಿಂಗಪುರದಿಂದ ಆರಂಭವಾಗಿರುವ ಈ ಪಾದಯಾತ್ರೆ ಭಾನುವಾರ ಹುಬ್ಬಳ್ಳಿ ತಲುಪಲಿದೆ. ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತರು ಫೆ. 16ರಂದು ನಡೆಯುವ ರಥೋತ್ಸವದಲ್ಲಿ ಪಾಲ್ಗೊಂಡು ಕೆಲವರು ಮರುದಿನ ಮರಳಿದರೆ ಇನ್ನು ಕೆಲವರು ಫೆ. 18ರಂದು ನಡೆಯುವ ಸಿದ್ಧಾರೂಢರ ಕೌದಿಪೂಜೆ ಮುಗಿಸಿಕೊಂಡು ಫೆ. 19ರಂದು ತಮ್ಮ ಊರುಗಳಿಗೆ ಮರಳುತ್ತಾರೆ.

30 ಸಾವಿರ ರೊಟ್ಟಿ:

ಬರೀ ಪಾದಯಾತ್ರೆ ಕೈಗೊಳ್ಳದೆ ಮಠಕ್ಕೆ ಆಗಮಿಸುವ ಭಕ್ತರಿಗೆ 30 ಸಾವಿರಕ್ಕೂ ಅಧಿಕ ರೊಟ್ಟಿ ತಯಾರಿಸಿಕೊಂಡು ತಂದು ಶ್ರೀಮಠದ ಪಾಠಶಾಲೆಯಲ್ಲಿ ಬಡಿಸುವರು. ಇದರೊಂದಿಗೆ ಫೆ. 15ರಂದು ರಾತ್ರಿ ಏಕಾದಶಿ(ಜಾಗರಣೆ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಶೇಂಗಾ ಹಾಗೂ ಬೆಲ್ಲದ ಪ್ಯಾಕೆಟ್ ವಿತರಿಸುತ್ತಾರೆ. 18 ವರ್ಷಗಳಿಂದ ಪಾದಯಾತ್ರೆ ಮೂಲಕ ಅಜ್ಜನ ಜಾತ್ರೆಗೆ ಬರುತ್ತಿದ್ದೇನೆ. ಪಾದಯಾತ್ರೆ ಆರಂಭಿಸಿದಾಗಿನಿಂದ ಅಂದುಕೊಂಡ ಕಾರ್ಯಗಳು ಯಶಸ್ವಿಯಾಗಿವೆ. ಪ್ರತಿ ವರ್ಷವೂ ಏನೇ ಕೆಲಸಗಳಿದ್ದರೂ ಬಿಟ್ಟು ಪಾದಯಾತ್ರೆ ಮೂಲಕ ಅಜ್ಜನ ದರ್ಶನ ಪಡೆಯುತ್ತೇನೆ.

ಮಂಜುನಾಥ ಮೇಗೂರ

10-12 ವರ್ಷಗಳಿಂದ 10ಕ್ಕೂ ಅಧಿಕ ಸ್ನೇಹಿತರೆಲ್ಲರೂ ಸೇರಿ ಪಾದಯಾತ್ರೆ ಮೂಲಕ ಸಿದ್ಧಾರೂಢರ ಗದ್ದುಗೆ ದರ್ಶನ ಪಡೆಯುತ್ತಿದ್ದೇನೆ. ಇಲ್ಲಿಗೆ ಬಂದರೆ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಈ ಬಾರಿ ನನ್ನೊಂದಿಗೆ ನನ್ನ ಪುತ್ರನನ್ನು ಕರೆದುಕೊಂಡು ಬಂದಿರುವೆ.

ಕೃಷ್ಣಾನಂದ, ಗೋವಾದಿಂದ ಪಾದಯಾತ್ರೆ ಕೈಗೊಂಡಿರುವ ಸಿದ್ಧಾರೂಢರ ಭಕ್ತ