ಅಜ್ಜನ ಜಾತ್ರೆ ಸೇವೆಗೆ ಸಜ್ಜಾದ 500 ಆಟೋ!

| Published : Feb 27 2025, 12:30 AM IST

ಸಾರಾಂಶ

ಅಜ್ಜನ ಜಾತ್ರೆಗೆ ಮೆರುಗು ತರಲು ನಗರದ ಆಟೋ ಚಾಲಕರೂ ಕೈಜೋಡಿಸಿದ್ದಾರೆ. ಕಳೆದ 14-15 ವರ್ಷಗಳಿಂದ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದಿಂದ ನಗರದ ವಿವಿಧ ಭಾಗಗಳಿಂದ ಉಚಿತ ಆಟೋ ಸೇವೆ ಕೈಗೊಳ್ಳುತ್ತಿದ್ದಾರೆ.

ಹುಬ್ಬಳ್ಳಿ: ಅಜ್ಜನ ಜಾತ್ರೆಗೆ ಮೆರುಗು ತರಲು ನಗರದ ಆಟೋ ಚಾಲಕರೂ ಕೈಜೋಡಿಸಿದ್ದಾರೆ. ಕಳೆದ 14-15 ವರ್ಷಗಳಿಂದ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದಿಂದ ನಗರದ ವಿವಿಧ ಭಾಗಗಳಿಂದ ಉಚಿತ ಆಟೋ ಸೇವೆ ಕೈಗೊಳ್ಳುತ್ತಿದ್ದಾರೆ.

ಮೊದಮೊದಲು 7-8 ಆಟೋಗಳಿಂದ ಆರಂಭವಾದ ಈ ಸೇವೆ ಇಂದು 500ಕ್ಕೂ ಅಧಿಕ ಆಟೋಗಳು ಶಿವರಾತ್ರಿಯ ದಿನವಾದ ಬುಧವಾರ ಹಾಗೂ ಸಿದ್ಧಾರೂಢರ ಜಾತ್ರಾ ಮಹೋತ್ಸವದ ದಿನವಾದ ಗುರುವಾರ ಎರಡು ದಿನಗಳ ಕಾಲ ಉಚಿತ ಆಟೋ ಸೇವೆ ಒದಗಿಸುತ್ತಿವೆ.

ನಗರದ ರೈಲು ನಿಲ್ದಾಣ, ಚೆನ್ನಮ್ಮ ವೃತ್ತದ ಬಳಿ ಇರುವ ಹಳೆ ಬಸ್‌ ನಿಲ್ದಾಣ, ಹೊಸೂರು, ಗೋಕುಲ ರಸ್ತೆಯಲ್ಲಿರುವ ಹೊಸ ಬಸ್‌ ನಿಲ್ದಾಣ, ಡಾ. ಅಂಬೇಡ್ಕರ್‌ ವೃತ್ತ, ಅಕ್ಷಯ ಪಾರ್ಕ್, ವಿಮಾನ ನಿಲ್ದಾಣ, ಸಿಬಿಟಿ, ದುರ್ಗದಬೈಲ್, ಹಳೆ ಹುಬ್ಬಳ್ಳಿಯ ಈಶ್ವರ ನಗರ, ನೇಕಾರ ನಗರ ಸೇರಿದಂತೆ 15ಕ್ಕೂ ಅಧಿಕ ಕಡೆಗಳಿಂದ ಉಚಿತ ಆಟೋ ಸೇವೆ ಒದಗಿಸುತ್ತಿದ್ದು, ಆಗಮಿಸುವ ಭಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ ತಿಳಿಸಿದರು.ಅಜ್ಜನ ಜಾತ್ರೆ: ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ

ಹುಬ್ಬಳ್ಳಿಶ್ರೀ ಸಿದ್ಧಾರೂಢ ಸ್ವಾಮೀಜಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಫೆ. 27ರಂದು ಬೆಳಗ್ಗೆ 11ಗಂಟೆಯಿಂದ ರಾತ್ರಿ 12ರ ವರೆಗೆ ನಗರದಲ್ಲಿ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರೇಟ್‌ ತಿಳಿಸಿದೆ.

- ಕಾರವಾರ ರೋಡ್ ಕಲಘಟಗಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುವ ವಾಹನಗಳು ಬೈಪಾಸ್ ಮಾರ್ಗವಾಗಿ ತಾರಿಹಾಳ ಅಂಡರ್ ಬ್ರಿಡ್ಜ್ ಮಾರ್ಗವಾಗಿ ಹುಬ್ಬಳ್ಳಿ ಶಹರ ಪ್ರವೇಶ ಮಾಡಬೇಕು.- ಎಂ.ಟಿ. ಮಿಲ್‌ ಕ್ರಾಸ್ ಕಡೆಯಿಂದ ಇಂಡಿಪಂಪ್‌ ಸರ್ಕಲ್ ಕಡೆಗೆ ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ. ಇದರ ಬದಲಾಗಿ ಚಾಟ್ನಿ ಮಠ ಕ್ರಾಸ್, ಕಮರಿಪೇಟ್ ಪಿ.ಎಸ್. ಕ್ರಾಸ್, ನ್ಯೂ ಇಂಗ್ಲೀಷ್ ಸ್ಕೂಲ್, ಬಂಕಾಪೂರ ಚೌಕ್, ಗಬ್ಬೂರ ಮಾರ್ಗವಾಗಿ ಹೋಗಬೇಕು. ಅಥವಾ ವಾಣಿ ವಿಲಾಸ ಸರ್ಕಲ್ ಮುಖಾಂತರ ಗೋಕುಲ ರೋಡ್ ಮುಖಾಂತರ ಬೈಪಾಸ್‌ಗೆ ತೆರಳಬೇಕು.

- ನ್ಯೂ ಇಂಗ್ಲೀಷ್‌ ಸ್ಕೂಲ್ ಕ್ರಾಸ್ ಕಡೆಯಿಂದ ಇಂಡಿಪಂಪ್‌ ಸರ್ಕಲ್ ಕಡೆಗೆ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

- ಅಕ್ಷಯ ಪಾರ್ಕ್‌ ಸರ್ಕಲ್ ಕಡೆಯಿಂದ ಮುರಡೇಶ್ವರ ಫ್ಯಾಕ್ಟರಿ ಕಡೆಗೆ ಬರುವ ಮುಖ್ಯ ರಸ್ತೆಯಲ್ಲಿ ಯಾವುದೇ ಭಾರೀ ವಾಹನಗಳು ಸಂಚರಿಸುವಂತಿಲ್ಲ.- ಸಿದ್ದಾರೂಢ ಮಠಕ್ಕೆ ಜಾತ್ರೆಗೆ ಬರುವ ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ ಇತರೇ ವಾಹನಗಳಿಗೆ ಮಠದ ಸುತ್ತ ಮುತ್ತಲು ಪ್ರತ್ಯೇಕವಾಗಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.