ಸಾರಾಂಶ
ಕೊಪ್ಪಳ: ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸಲು ಪಕ್ಷಾತೀತವಾಗಿ ವಿರೋಧಿಸಿದ್ದೆವು. ಆದರೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ₹500 ಕೋಟಿ ಲಂಚ ಪಡೆದು, ಕಾರ್ಖಾನೆ ಸ್ಥಾಪಿಸಲು ಸಹಕಾರ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಆರಂಭದಲ್ಲಿ ₹500 ಕೋಟಿ ಎಂದು ಹೇಳಿದ ಅವರು, ಬಿಎಸ್‌ಪಿಎಲ್ ಕಾರ್ಖಾನೆ ₹54 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ ಇವರೆಲ್ಲ ಸೇರಿ ಶೇ. 5ರಷ್ಟು ಕಮಿಷನ್ ಪಡೆದಿದ್ದಾರೆ ಎಂದರು.ಬಿಎಸ್‌ಪಿಎಲ್ ಕಂಪನಿಯ ಮಾಲೀಕರು ಮೊದಲು ಅವರಿಗೆ ಕ್ಯಾರೆ ಎಂದಿರಲಿಲ್ಲ. ಹೀಗಾಗಿಯೇ ಅವರು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟದಲ್ಲಿ ಪಾಲ್ಗೊಂಡರು. ಶ್ರೀಗಳ ಬಳಿ ಸಹ ಕೊಪ್ಪಳಕ್ಕಾಗಿ ಕಣ್ಣೀರು ಹಾಕಿದರು. ಇದಾದ ಮೇಲೆ ಕಂಪನಿಯವರು ಶೇ. 2 ಕೊಡುವುದಾಗಿ ಹೇಳಿದರು. ಆಗ ತಂಗಡಗಿ ನಮ್ಮನ್ನೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕರೆದುಕೊಂಡು ಹೋಗಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸಲು ನಮ್ಮೆಲ್ಲರ ವಿರೋಧವಿದೆ ಎಂದು ಹೇಳಿದರು. ಇದರಿಂದ ಶೇ. 2 ಇದ್ದ ಕಮಿಷನ್ ಶೇ. 5ಕ್ಕೆ ಎರಿತು. ₹54 ಸಾವಿರ ಕೋಟಿಗೆ ಎಷ್ಟಾಗುತ್ತದೆ ನೀವೇ ಲೆಕ್ಕ ಹಾಕಿಕೊಳ್ಳಿ ಎಂದು ಎದುರಿಗೆ ಇದ್ದ ಟೇಬಲ್ ಗುದ್ದಿ ಪತ್ರಕರ್ತರಿಗೆ ಹೇಳಿದರು.
ಇದು ಗಂಭೀರ ಆರೋಪ, ಆನಂತರ ಮಾತು ಬದಲಾಯಿಸಿದರೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರು, ನಾನು ಈಗಲೂ ಹೇಳಿದ್ದೇನೆ, ಮುಂದೆಯೂ ಹೇಳುತ್ತೇನೆ. ಎಲ್ಲಿ ನಿಂತು ಬೇಕಾದರೂ ಹೇಳುತ್ತೇನೆ. ಇದು ನಡೆದಿದ್ದು ನಿಜ, ಇದರಲ್ಲಿ ಸಂಸದರು, ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರ ಪಾಲು ಇದೆ ಎಂದರು.ಸಿಂಗಲ್ ಪೇಮೆಂಟ್ ಆಗಿದೆ: ನಿಮ್ಮ ಬಳಿ ಕಂಪನಿಯವರು ಬಂದಿದ್ದರಾ? ಎಂದು ಕೇಳಿದರೆ, ಇಲ್ಲ, ಇಲ್ಲ ನಮ್ಮ ಬಳಿ ಯಾರೂ ಬಂದಿಲ್ಲ. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಆರೋಪಕ್ಕೆ ನಿಮ್ಮ ಬಳಿ ದಾಖಲೆ ಏನಾದರೂ ಇದೆಯಾ ಎಂದು ಕೇಳಿದಾಗ, ಲಂಚ ತೆಗೆದುಕೊಳ್ಳುವುದಕ್ಕೆ ಯಾವುದಾದರೂ ದಾಖಲೆ ಇರಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು. ಆದರೆ, ಇದು ನಡೆದಿರುವುದು ಸತ್ಯ. ನನಗೆ ಎಲ್ಲವೂ ಗೊತ್ತಿದೆ. ಇದನ್ನು ನಾನು ಎಲ್ಲಿ ಬೇಕಾದರೂ ಹೇಳಲು ಸಿದ್ಧನಿದ್ದೇನೆ ಎಂದರು. ಸಿಂಗಲ್ ಪೇಮೆಂಟ್ ಆಗಿದ್ದು, ಬೆಂಗಳೂರನಲ್ಲಿಯೇ ಡೀಲ್ ನಡೆದಿದೆ ಎಂದು ಸಹ ಆರೋಪಿಸಿದರು.
ಎದ್ದು ಹೋದ ನಾಯಕರು: ಬಿಎಸ್‌ಪಿಎಲ್ ಕಾರ್ಖಾನೆಯ ಕುರಿತು ಈ ರೀತಿಯ ಆರೋಪ ಮಾಡುತ್ತಿದ್ದಂತೆ ಮಾಜಿ ಸಚಿವ ಹಾಲಪ್ಪ ಆಚಾರ್, ಮುಖಂಡರಾದ ಜಿ. ವೀರಪ್ಪ ಕೆಸರಟ್ಟಿ, ಶರಣು ತಳ್ಳಿಕೇರಿ ಪತ್ರಿಕಾಗೋಷ್ಠಿಯಿಂದ ಹೊರನಡೆದರು. ಆದರೆ, ಕೆಲಹೊತ್ತು ಕುಳಿತಿದ್ದ ವಿಪ ಸದಸ್ಯೆ ಹೇಮಲತಾ ನಾಯಕ ಹಾಗೂ ಮುಖಂಡ ಡಾ. ಬಸವರಾಜ ಕ್ಯಾವಟರ್ ಅವರು ಸಹ ಆನಂತರ ಸುದ್ದಿಗೋಷ್ಠಿಯಿಂದ ಹೊರ ನಡೆದರು. ಕೊನೆಯಲ್ಲಿ ಬಸವರಾಜ ದಢೇಸೂಗೂರು ಅವರೊಬ್ಬರೇ ಸುದ್ದಿಗೋಷ್ಠಿಯುದ್ದಕ್ಕೂ ಕುಳಿತು, ಗಂಭೀರ ಆರೋಪ ಮಾಡಿದರು.ರಸ್ತೆಯಲ್ಲಿ ಶೇ.40 ಕಮಿಷನ್: ನಕಗಿರಿ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿದ್ದು, ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಿದ ರಸ್ತೆಗಳು ಎರಡೇ ತಿಂಗಳಲ್ಲಿ ಕಿತ್ತು ಹೋಗಿವೆ ಎಂದು ಆರೋಪಿಸಿದರು. ಇದರಲ್ಲಿಯೂ ಸಚಿವರು ಶೇ. 40ರಷ್ಟು ಕಮಿಷನ್ ಹೊಡೆಯುತ್ತಿದ್ದಾರೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕಾಮಗಾರಿಗಳನ್ನು ಈಗ ಮುಖ್ಯಮಂತ್ರಿ ಉದ್ಘಾಟಿಸುತ್ತಿದ್ದಾರೆ. ಅವುಗಳನ್ನು ಈಗ ಆಗಿವೆ ಎಂದು ಬಿಂಬಿಸುತ್ತಿದ್ದಾರೆ ಎಂದು ಬಸವರಾಜ ದಢೇಸೂಗೂರು ಆರೋಪಿಸಿದರು.