೧೭ ಕೆರೆಗೆಳಿಗೆ ನೀರು ತರುವುದು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಚಾಲನೆಗೆ ₹೫೦೦ ಕೋಟಿ ಅನುದಾನಕ್ಕಾಗಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ

ಹಗರಿಬೊಮ್ಮನಹಳ್ಳಿ: ತುಂಗಭದ್ರಾ ನದಿಯಿಂದ ಕೇವಲ ೩ ಟಿಎಂಸಿ ನೀರನ್ನು ಬಳಸಿಕೊಂಡು ಕ್ಷೇತ್ರ ವ್ಯಾಪ್ತಿಯ ೫೦ ಸಾವಿರ ಎಕರೆ ಜಮೀನನ್ನು ನೀರಾವರಿಗೊಳಪಡಿಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ೧೭ ಕೆರೆಗೆಳಿಗೆ ನೀರು ತರುವುದು ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಚಾಲನೆಗೆ ₹೫೦೦ ಕೋಟಿ ಅನುದಾನಕ್ಕಾಗಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ನೇಮರಾಜ್ ನಾಯ್ಕ ತಿಳಿಸಿದರು.

ತಾಲೂಕಿನ ಮಾಲವಿ ಗ್ರಾಮದ ಬಳಿ ಇರುವ ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ನೂತನ ೧೦ ಕ್ರಸ್ಟ್‌ಗೇಟ್‌ಗಳ ಅಳವಡಿಗೆ ಕಾಮಗಾರಿ ಪರಿಶೀಲಿಸಿ ಬಳಿಕ ಕನ್ನಡಪ್ರಭದೊಂದಿಗೆ ಮಂಗಳವಾರ ಸಂಜೆ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ಪ್ರಸ್ತಾವನೆಗೆ ಸ್ಪಂದಿಬೇಕಾಗಿದೆ. ಅನುದಾನದ ಶೇ.೫೦ ಒದಗಿಸಿದರೆ ಉಳಿದ ಮೊತ್ತವನ್ನು ಕೇಂದ್ರದ ಸಹಾಯ ಪಡೆದು ಯೋಜನೆಗಳನ್ನು ಜಾರಿಗೊಳಿಸುತ್ತೇನೆ. ಕೃಷಿ ಕ್ಷೇತ್ರವನ್ನು ಬಲಪಡಿಸಿ ರೈತರಿಗೆ ನೆರವಾಗುತ್ತೇನೆ ಎಂದರು.

ನನ್ನ ಶಾಸಕತ್ವದ ಮೊದಲ ಅವಧಿಯಲ್ಲಿ ಜಾರಿಯಾದ ಚಿಲವಾರು ಬಂಡಿ ಏತ ನೀರಾವರಿ ಯೋಜನೆಯ ಕಾಲುವೆಗಳನ್ನು ಹಗರಿಬೊಮ್ಮನಹಳ್ಳಿ ಜಲಾಶಯದ ಕಾಲುವೆಗಳಿಗೆ ಜೋಡಿಸಿದರೆ ಸಾಕಷ್ಟು ಜಮೀನನ್ನು ನೀರಾವರಿಗೊಳ ಪಡಿಸಬಹುದು. ಜಲಾಶಯದಲ್ಲಿ ಸದಾ ನೀರಿನ ಸಂಗ್ರಹವಾಗಿದ್ದೇ ಆದರೆ ಸುತ್ತಮುತ್ತಲಿನ ೫೦ ಕಿ.ಮೀ. ವ್ಯಾಪ್ತಿಯ ಸಾವಿರಾರು ಕೊಳವೆ ಬಾವಿಗಳಲ್ಲಿ ನೀರಿನ ಮರುಪೂರಣ ನಡೆಯುವ ವಿಶ್ವಾಸ ವ್ಯಕ್ತಪಡಿಸಿದರು.

ಹಗರಿಬೊಮ್ಮನಹಳ್ಳಿ ಜಲಾಶಯಕ್ಕೆ ನೂತನ ೧೦ ಕ್ರಸ್ಟಗೇಟ್‌ಗಳ ಅಳವಡಿಕೆ ಈಗ ಮುಕ್ತಾಯ ಹಂತದಲ್ಲಿದೆ. ಕಳೆದ ಮಳೆಗಾಲದ ಅವಧಿಯಲ್ಲಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹಗರಿಹಳ್ಳಕ್ಕೆ ಹರಿಸಲಾಗಿತ್ತು. ತುಂಬಾ ಹಳೆಯದಾದ ಗೇಟ್ ಗಳನ್ನು ಜೆಸಿಬಿ ನೆರವಿನೊಂದಿಗೆ ಇಳಿಸಲು ಯತ್ನಿಸಿದಾಗ ಗೇಟ್ ಗಳು ಜಖಂಗೊಡು ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ಈ ನಿಟ್ಟಿನಲ್ಲಿ ₹೪ ಕೋಟಿ ಅನುದಾನ ಒದಗಿಸಿ ಪ್ರಾರಂಭಿಸಲಾಗಿರುವ ೧೦ ಗೇಟ್‌ಗಳ ಅಳವಡಿಕೆ ಕಾಮಗಾರಿ ಈಗ ಮುಕ್ತಾಯದ ಹಂತದಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ಟರು, ವಿಎಸ್‌ಎಸ್‌ಎನ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ತಾ.ಪಂ. ಮಾಜಿ ಸದಸ್ಯ ಆಡೂರ್ ಶಿವಕುಮಾರ್ ಹಾಗೂ ಮುಖಂಡರಾದ ಹೋಟೆಲ ಸಿದ್ಧರಾಜು, ಚಿತವಾಡಗಿ ಪ್ರಕಾಶ್, ಬಸವರಾಜ್, ಸಣ್ಣ ನೀರಾವರಿ ಇಲಾಖೆಯ ಎಇಇ ಧರ್ಮರಾಜ್ ಇದ್ದರು.