ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು, ಅಂದಾಜು 6 ಲಕ್ಷ ಜನಸಂಖ್ಯೆ ಹೊಂದಿದೆ. ಈ ಕ್ಷೇತ್ರದಲ್ಲಿರುವ ಸಮಸ್ಯೆಗಳು ಬೇರೆ ಕ್ಷೇತ್ರಗಳಲ್ಲಿ ಕಂಡು ಬರಲ್ಲ. ಒಂದು ಸಾವಿರಕ್ಕೂ ಹೆಚ್ಚು ಖಾಸಗಿ ಬಡಾವಣೆಗಳಿವೆ. ಬಡಾವಣೆಗಳನ್ನು ನಿರ್ಮಾಣ ಮಾಡುವಾಗ ಕುಡಿಯುವ ನೀರು, ರಸ್ತೆ, ಒಳಚರಂಡಿ ಮೊದಲಾದ ಸಮಸ್ಯೆ ಪರಿಹರಿಸದೆ ಹಾಗೆಯೇ ಬಿಟ್ಟು ಹೋಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರ ಪಾಲಿಕೆ ವಾರ್ಡ್‌ ಗಳು, ಖಾಸಗಿ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ ಸಮಸ್ಯೆ ಪರಿಹರಿಸಲು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಂದಾಜು 500 ಕೋಟಿ ರು. ಅಗತ್ಯವಿರುವ ಕಾರಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಸರ್ಕಾರದಿಂದ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

ರಾಮಕೃಷ್ಣನಗರ ಎಚ್. ಬ್ಲಾಕ್ ಸಾಲುಮರದ ತಿಮ್ಮಕ್ಕ ಉದ್ಯಾನವನದ ಆವರಣದಲ್ಲಿ ಗುರುವಾರ ನಡೆದ ನಗರ ಪಾಲಿಕೆಯ 58ನೇ ವಾರ್ಡಿನ ವ್ಯಾಪ್ತಿಯ ಜನಸಂಪರ್ಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಚಾಮುಂಡೇಶ್ವರಿ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದ್ದು, ಅಂದಾಜು 6 ಲಕ್ಷ ಜನಸಂಖ್ಯೆ ಹೊಂದಿದೆ. ಈ ಕ್ಷೇತ್ರದಲ್ಲಿರುವ ಸಮಸ್ಯೆಗಳು ಬೇರೆ ಕ್ಷೇತ್ರಗಳಲ್ಲಿ ಕಂಡು ಬರಲ್ಲ. ಒಂದು ಸಾವಿರಕ್ಕೂ ಹೆಚ್ಚು ಖಾಸಗಿ ಬಡಾವಣೆಗಳಿವೆ. ಬಡಾವಣೆಗಳನ್ನು ನಿರ್ಮಾಣ ಮಾಡುವಾಗ ಕುಡಿಯುವ ನೀರು, ರಸ್ತೆ, ಒಳಚರಂಡಿ ಮೊದಲಾದ ಸಮಸ್ಯೆ ಪರಿಹರಿಸದೆ ಹಾಗೆಯೇ ಬಿಟ್ಟು ಹೋಗಿದ್ದಾರೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಾದರೆ ಅಂದಾಜು 500 ಕೋಟಿ ರು. ಬೇಕಾಗುತ್ತದೆ ಎಂದರು.

ಯುಜಿಡಿ ಸಮಸ್ಯೆ ಪರಿಹರಿಸಲು ಶಾಶ್ವತವಾದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಅನುಮೋದನೆ ಪಡೆಯಲು ಶಕ್ತಿ ಮೀರಿ ಶ್ರಮಿಸುವೆ. ರಾಮಕೃಷ್ಣನಗರ ಸೇರಿದಂತೆ ನನ್ನ ವ್ಯಾಪ್ತಿಯ ಭಾಗದ ಐದು ವಾರ್ಡ್ ಗಳಿಗೆ 27 ಕೋಟಿ ರು. ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಅನುದಾನ ಬಿಡುಗಡೆ ಆಗಿಲ್ಲ. ಕುಡಿಯುವ ನೀರು, ರಸ್ತೆ, ಒಳಚರಂಡಿ ಮಾಡಿಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗಿದೆ. ಎಲ್ಲಾ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು 500 ಕೋಟಿ ರು. ಅಗತ್ಯವಿದ್ದು, ಸರ್ಕಾರದಿಂದ ಹಂತ ಹಂತವಾಗಿ ಒದಗಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

ಈಗಾಗಲೇ ಅಧಿಕಾರಿಗಳಿಗೂ ಅಗತ್ಯವಿರುವ ಪ್ರಸ್ತಾವನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲು ಹೇಳಲಾಗಿದೆ. ಹಳೆಯ ಉಂಡುವಾಡಿ ಯೋಜನೆಯ ವರ್ಷಾಂತ್ಯದಲ್ಲಿ ಮುಗಿಯಲಿದ್ದು, ದಿನದ 24 ಗಂಟೆಗಳ ಕಾಲ ನೀರು ಕೊಡಲಾಗುವುದು. 32 ಟ್ಯಾಂಕ್‌ ಗಳನ್ನು ನಿರ್ಮಿಸಿದ್ದು, ಈಗ 27 ಮುಗಿದಿದೆ. ಕಬಿನಿ ನದಿ ಮೂಲದ ಯೋಜನೆಯಿಂದ 60 ಎಂ.ಎಲ್‌.ಡಿ ನೀರು ಬರುತ್ತಿದ್ದು, ಮತ್ತೆ 60 ಎಂ.ಎಲ್‌.ಡಿ ನೀರುಹರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಅಧಿಕಾರಿಗಳಲ್ಲಿ ಸಮನ್ವಯತೆ:

ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಹಲವು ವರ್ಷಗಳಿಂದ ಇದ್ದ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕರೆಯಿಸಿ ಮನವರಿಕೆ ಮಾಡಿಸಿಕೊಡುವ ಕೆಲಸ ಮಾಡಲಾಗಿದೆ. ಜಿಲ್ಲಾಧಿಕಾರಿಗಳನ್ನೇ ಖುದ್ದು ಆಹ್ವಾನಿಸಿ ಜನರ ಸಮಸ್ಯೆ ಅರಿಯುವಂತೆ ಮಾಡಲಾಗಿದೆ ಎಂದರು.

ನಗರ ಪಾಲಿಕೆ, ಲೋಕೋಪಯೋಗಿ, ಸೆಸ್ಕ್, ಅರಣ್ಯ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದರೆ ಅನೇಕ ಸಮಸ್ಯೆ ಪರಿಹರಿಸಬಹುದು. ಜನರಿಂದ ನಿತ್ಯ ನೂರಾರು ಸಮಸ್ಯೆಗಳು ಕೇಳಿ ಬರುತ್ತಿವೆ. ರಾಮಕೃಷ್ಣನಗರ ಬಡಾವಣೆಯ ಜನರ ಕಷ್ಟಗಳನ್ನು ನಾನೇ ನೋಡಿದ್ದೇನೆ. ಲಿಂಗಾಬುದಿ ಕೆರೆಗೆ ಹರಿಯುವ ಯುಜಿಡಿ ನೀರು ಸೇರದಂತೆ ಶೀಘ್ರ ಕ್ರಮಕೈಗೊಳ್ಳಲು ನಗರ ಪಾಲಿಕೆ ಅಧಿಕಾರಿಗಳು ಗಮನಹರಿಸಲಿದ್ದಾರೆ ಎಂದರು.