ಜಿಲ್ಲೆಯಲ್ಲಿ 5021 ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಬದಲಾವಣೆ!

| Published : Sep 28 2025, 02:00 AM IST

ಜಿಲ್ಲೆಯಲ್ಲಿ 5021 ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಬದಲಾವಣೆ!
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಸೂಚನೆಯಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯಾದ್ಯಂತ ಬಿಪಿಎಲ್‌ ಕಾರ್ಡ್‌ಗಳ ಸಮೀಕ್ಷೆ ಮತ್ತು ಪರಿಶೀಲನೆ ಕೈಗೊಂಡಿತ್ತು. ಈ ಪರಿಶೀಲನೆಯಲ್ಲಿ ಒಟ್ಟಾರೆಯಾಗಿ 9573 ಅನುಮಾನಾಸ್ಪದ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ಗಳನ್ನು ಗುರಿಯಾಗಿಸಲಾಗಿತ್ತು. ಇವುಗಳಲ್ಲಿ ಈಗಾಗಲೇ 5021 ಬಿಪಿಎಲ್‌ ಕಾರ್ಡ್‌ಗಳು ಅನರ್ಹವೆಂದು ದೃಢಪಟ್ಟಿದ್ದು, ಅವುಗಳನ್ನು ಎಪಿಎಲ್‌ ಪಡಿತರ ಚೀಟಿಗಳಾಗಿ ಬದಲಾವಣೆ ಮಾಡಲಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ನಡೆಯುತ್ತಿರುವ ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರ ಪತ್ತೆ ಕಾರ್ಯ ಅಂತಿಮಗೊಂಡಿದ್ದು, ಗದಗ ಜಿಲ್ಲೆಯಲ್ಲಿಯೂ ಅಪಾರ ಪ್ರಮಾಣದ ಬಿಪಿಎಲ್ ಕಾರ್ಡ್‌ಗಳು ಬದಲಾವಣೆಯಾಗಿದ್ದು, ಇದರಿಂದಾಗಿ ಹಲವಾರು ಜನ ನೈಜ ಫಲಾನುಭವಿಗಳಿಗೂ ತೊಂದರೆಯಾಗಿದೆ.

5021 ಕಾರ್ಡ್ ಬದಲಾವಣೆ: ಜಿಲ್ಲೆಯಲ್ಲಿ 5021 ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಸರ್ಕಾರದ ಸೂಚನೆಯಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜಿಲ್ಲೆಯಾದ್ಯಂತ ಬಿಪಿಎಲ್‌ ಕಾರ್ಡ್‌ಗಳ ಸಮೀಕ್ಷೆ ಮತ್ತು ಪರಿಶೀಲನೆ ಕೈಗೊಂಡಿತ್ತು. ಈ ಪರಿಶೀಲನೆಯಲ್ಲಿ ಒಟ್ಟಾರೆಯಾಗಿ 9573 ಅನುಮಾನಾಸ್ಪದ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡ್‌ಗಳನ್ನು ಗುರಿಯಾಗಿಸಲಾಗಿತ್ತು.

ಇವುಗಳಲ್ಲಿ ಈಗಾಗಲೇ 5021 ಬಿಪಿಎಲ್‌ ಕಾರ್ಡ್‌ಗಳು ಅನರ್ಹವೆಂದು ದೃಢಪಟ್ಟಿದ್ದು, ಅವುಗಳನ್ನು ಎಪಿಎಲ್‌ ಪಡಿತರ ಚೀಟಿಗಳಾಗಿ ಬದಲಾವಣೆ ಮಾಡಲಾಗಿದೆ. ಆ ಮೂಲಕ ಅರ್ಹ ಫಲಾನುಭವಿಗಳಿಗೆ ನ್ಯಾಯಯುತವಾಗಿ ಪಡಿತರ ಹಾಗೂ ಸರ್ಕಾರದ ಇನ್ನಿತರ ಸೌಲಭ್ಯ ತಲುಪುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಪರಿಶೀಲನೆ ಹೇಗೆ?: ವಾರ್ಷಿಕ ₹1.20 ಲಕ್ಷಕ್ಕಿಂತ ಹೆಚ್ಚಿನ ಆದಾಯ ಇರುವವರು, ಜಿಎಸ್‌ಟಿ ಪಾವತಿದಾರರು, ಹೊರ ರಾಜ್ಯಗಳಲ್ಲೂ ಪಡಿತರ ಚೀಟಿ ಹೊಂದಿರುವವರು, ಕರ್ನಾಟಕದಲ್ಲಿಯೇ ಎರಡೆರಡು ಪಡಿತರ ಚೀಟಿ ಇದ್ದವರು, 6 ರಿಂದ 12 ತಿಂಗಳ ಅವಧಿಯಲ್ಲಿ ಒಮ್ಮೆಯೂ ಪಡಿತರ ಪಡೆಯದವರು, 7.5 ಎಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವವರನ್ನು ಗುರಿಯಾಗಿಸಿ ಸಮೀಕ್ಷೆ ನಡೆಸಲಾಗಿತ್ತು. ಈ ಪೈಕಿ ಪ್ರಾಥಮಿಕ ಹಂತದಲ್ಲಿ ಅನರ್ಹರು ಎಂದು ಕಂಡುಬಂದ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತಿಸಲಾಗಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ತಪ್ಪು ಗ್ರಹಿಕೆ: ಅಧಿಕಾರಿಗಳು ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ಮೀರಿದ ಕಾರ್ಡ್ ಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ. ಆದರೆ, ಆರ್ಥಿಕ ವರ್ಷವೊಂದರಲ್ಲಿ ₹1.20 ಲಕ್ಷ ಹಣ ವರ್ಗಾವಣೆ ಆದವರ ಪಡಿತರ ಚೀಟಿಯನ್ನು ರದ್ದು ಮಾಡಿದ್ದಾರೆ ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಕೆಲವು ಮಕ್ಕಳು ತಮ್ಮ ತಂದೆಯ ಆಸ್ತಿಯನ್ನು ಭಾಗಮಾಡಿಕೊಳ್ಳುವ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಅಂತವರಿಗೂ ತೀವ್ರ ತೊಂದರೆಯಾಗುತ್ತಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಮಹತ್ವದ ಮಾನದಂಡವೆಂದರೆ ಅದು ಬಿಪಿಎಲ್ ಕಾರ್ಡ್. ಈ ಕಾರ್ಡ್‌ಗಳು ಬಿಪಿಎಲ್ ನಿಂದ ಎಪಿಎಲ್ ಆಗಿ ಬದಲಾಗುತ್ತಿವೆ. ಬದಲಾದ ಇಂತಹ ಕಾರ್ಡ್‌ಗಳನ್ನು ಸರ್ಕಾರ ತಡೆಹಿಡಿದಿದೆ. ಇದರಿಂದಾಗಿ ಮಹಿಳೆಯರಿಗೆ ಸಿಗುತ್ತಿದ್ದ ಗೃಹಲಕ್ಷ್ಮಿ ಯೋಜನೆಗೆ ತೀವ್ರ ತೊಂದರೆಯಾಗಲಿದೆ. ಇದನ್ನು ಜಿಲ್ಲಾ ಮತ್ತು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರು ಯಾವ ರೀತಿಯಲ್ಲಿ ಸರಿಪಡಿಸುತ್ತಾರೆ ಕಾಯ್ದು ನೋಡಬೇಕು.

ಅವಕಾಶವಿದೆ: ಈಗಾಗಲೇ ರದ್ದಾಗಿರುವ ಕಾರ್ಡದಾರರಿಗೆ ಇಲಾಖೆ ಅಧಿಕಾರಿಗಳು ಅವಕಾಶ ಕಲ್ಪಿಸಿದ್ದು, ವಾರ್ಷಿಕ ಆದಾಯದ ಗೊಂದಲ, ಆಸ್ತಿ ದಾಖಲೆಗಳ ವಾಡಾಯಿಸುವಿಕೆ ಸೇರಿದಂತೆ ಏನಾದರೂ ಸಮಸ್ಯೆಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಆಹಾರ ಇಲಾಖೆ ಕಚೇರಿಗೆ ಮಾಹಿತಿ ಸಲ್ಲಿಸಿದರೆ, ಪರಿಶೀಲನೆ ನಡೆಸಲಾಗುವುದು, ದಾಖಲೆಗಳ ಪರಿಶೀಲನೆಯ ನಂತರ ಅ‍ವರು ಮತ್ತೆ ಬಿಪಿಎಲ್‌ ಕಾರ್ಡ್‌ ಹೊಂದುವ ಅರ್ಹತೆ ಹೊಂದಿದ್ದಲ್ಲಿ ಅವರಿಗೆ ಮತ್ತೆ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಮಾನದಂಡಗಳನ್ನು ಆಧರಿಸಿ ಸಮೀಕ್ಷೆ ಕೈಗೊಳ್ಳಲಾಗಿದೆ. ಆ ಪೈಕಿ 5 ಸಾವಿರ ಅನರ್ಹರನ್ನು ಗುರುತಿಸಿ, ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾಯಿಸಲಾಗಿದೆ ಎಂದು ಗದಗನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ಹೇಳಿದರು.