ಸಾರಾಂಶ
ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅನ್ನಭಾಗ್ಯ ಯೋಜನೆಯ 523 ಚೀಲ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಶೀರೆಕೊಳ ಗ್ರಾಮದ ಸಮೀಪ ನಡೆದಿದೆ.
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅನ್ನಭಾಗ್ಯ ಯೋಜನೆಯ 523 ಚೀಲ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಶೀರೆಕೊಳ ಗ್ರಾಮದ ಸಮೀಪ ನಡೆದಿದೆ.ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ರಾಂಪುರ ಪಿಎಸ್‌ಐ ಬಾಹುಬಲಿ, ಆಹಾರ ಇಲಾಖೆ ಶಿರಸ್ತೇದಾರ್ ಗೀತಾಂಜನೇಯ ಈ ವೇಳೆ ಹಾಜರಿದ್ದರು. ನಿರ್ಜನ ಪ್ರದೇಶದಲ್ಲಿ ಮುಳ್ಳಿನ ಪೊದೆಯ ನಡುವೆ, ಯಾರಿಗೂ ತಿಳಿಯದಂತೆ ತಾಡಪಾಲ್ ಹೊದಿಸಿ ಅಕ್ಕಿ ಸಂಗ್ರಹಿಸಿಡಲಾಗಿತ್ತು. ದಾಳಿ ವೇಳೆ 523 ಚೀಲ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಕೋನಾಪುರ ರಾಮು ಎಂಬುವರು ಈ ಅಕ್ಕಿಯನ್ನು ದಾಸ್ತಾನು ಮಾಡಿದ್ದರು ಎನ್ನಲಾಗಿದ್ದು, ಈ ಸಂಬಂಧ ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿ ಸುದ್ದಿ ತಿಳಿಯುತ್ತಿದ್ದಂತೆ ರಾಮು ಸಹಿತ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಇದು ಅನ್ನಭಾಗ್ಯಕ್ಕೆ ಸೇರಿದ ಅಕ್ಕಿಯಾಗಿದ್ದು, ಶೀಘ್ರವೇ ಈ ಅಕ್ಕಿಯನ್ನು ಬೇರೆ ಕಡೆ ಸಾಗಿಸಲು ಯತ್ನ ನಡೆದಿತ್ತು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಅ.16ರಂದು ಮೊಳಕಾಲ್ಮೂರಿನ ಚೌಡಿಪುರ ಗ್ರಾಮದ ಸರ್ಕಾರಿ ಸಮುದಾಯ ಭವನದಲ್ಲಿ ಅನ್ನಭಾಗ್ಯಕ್ಕೆ ಸೇರಿದ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ನೂರಾರು ಅಕ್ಕಿ ಚೀಲಗಳು ದಾಳಿ ವೇಳೆ ಪತ್ತೆಯಾಗಿದ್ದವು.;Resize=(128,128))
;Resize=(128,128))
;Resize=(128,128))
;Resize=(128,128))