ಬ್ರ್ಯಾಂಡ್‌ ಬೆಂಗಳೂರಿಗಾಗಿಯೇ ಶೇ.54 ಹಣ ಮೀಸಲು

| Published : Mar 01 2024, 02:21 AM IST

ಸಾರಾಂಶ

ಬ್ರ್ಯಾಂಡ್‌ ಬೆಂಗಳೂರು ಯೋಜನೆಗೆ ಬಿಬಿಎಂಪಿ ಹೆಚ್ಚು ಅನುದಾನ ಮೀಡಲು ಇರಿಸಿದೆ. ತನ್ನ ಬಜೆಟ್‌ನಲ್ಲಿ ಶೇ.54ರಷ್ಟು ಅನುದಾನ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಬಿಬಿಎಂಪಿ ಬಜೆಟ್‌ ಮಂಡಿಸಲಾಗಿದ್ದರೂ, ಸಾರ್ವಜನಿಕ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಲ್ಲೂ ಬ್ರ್ಯಾಂಡ್‌ ಬೆಂಗಳೂರು ಯೋಜನೆ ಅಡಿಯ ಕಾಮಗಾರಿಗಳು ಸೇರಿದಂತೆ ಸಾರ್ವಜನಿಕ ಕಾಮಗಾರಿಗಳಿಗೆ ₹6,661 ಕೋಟಿ ಮೀಸಲಿಡುವುದಾಗಿ ತಿಳಿಸಲಾಗಿದ್ದು, ಬಜೆಟ್‌ ವೆಚ್ಚದಲ್ಲಿ ಶೇ.54ರಷ್ಟನ್ನು ಈ ವಿಭಾಗಕ್ಕೆ ನಿಗದಿ ಮಾಡಲಾಗಿದೆ.

ಬಿಬಿಎಂಪಿ ಬಜೆಟ್‌ನಲ್ಲಿ ಸಂಪೂರ್ಣ ಬ್ರ್ಯಾಂಡ್‌ ಬೆಂಗಳೂರು ಮಯವಾಗಿದ್ದು, ಆ ಯೋಜನೆಗಳಲ್ಲಿ ಬಹುಪಾಲನ್ನು ಸಾರ್ವಜನಿಕ ಕಾಮಗಾರಿ ವಿಭಾಗದ ಅಡಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಅದಕ್ಕಾಗಿಯೇ ಸಾರ್ವಜನಿಕ ಕಾಮಗಾರಿ ವಿಭಾಗಕ್ಕೆ ₹7280 ಕೋಟಿ ನಿಗದಿ ಮಾಡಲಾಗಿದ್ದು, ಅದರಲ್ಲಿ 6,661 ಕೋಟಿಗಳನ್ನು ಬೃಹತ್‌ ಕಾಮಗಾರಿಗಳು ಹಾಗೂ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ನಿಗದಿ ಮಾಡಲಾಗಿದೆ. ಆ ಮೂಲಕ ಉಳಿದೆಲ್ಲ ವಿಭಾಗಕ್ಕಿಂತ ಬಜೆಟ್‌ನಲ್ಲಿ ಹೆಚ್ಚಿನ ಒತ್ತನ್ನು ಬ್ರ್ಯಾಂಡ್‌ ಬೆಂಗಳೂರು ಯೋಜನೆಗಳಿಗೆ ನೀಡಲಾಗಿದೆ. ಅದರಲ್ಲಿ ಸುಗಮ ಸಂಚಾರ ವ್ಯವಸ್ಥೆ ಅಡಿಯಲ್ಲಿ ಘೋಷಿಸಲಾದ ಯೋಜನೆಗಳಿಗೆ ₹880 ಕೋಟಿ, ವೈಬ್ರೆಂಟ್‌ ಬೆಂಗಳೂರು ಅಡಿಯ ಯೋಜನೆಗಳಿಗೆ ₹225 ಕೋಟಿ ಮೀಸಲಿಡುವುದಾಗಿ ಹೇಳಲಾಗಿದೆ. ಅಲ್ಲದೆ, ವಿವಿಧ ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನಕ್ಕಾಗಿ ₹50 ಕೋಟಿ ಖರ್ಚು ಮಾಡುವುದಾಗಿ ಘೋಷಿಸಲಾಗಿದೆ.

ವಾರ್ಡ್‌ಗಳಿಗೆ ₹481 ಕೋಟಿ

ಈ ಬಾರಿಯ ಬಜೆಟ್‌ನಲ್ಲಿ ವಾರ್ಡ್‌ಗಳ ಅಭಿವೃದ್ಧಿಗೂ ಹೆಚ್ಚಿನ ಗಮನಹರಿಸಲಾಗಿದೆ. ಮಾಮೂಲಿಯಂತೆ ಎಲ್ಲ 225 ವಾರ್ಡ್‌ಗಳಲ್ಲಿ ರಸ್ತೆ ದುರಸ್ತಿ, ಚರಂಡಿ ನಿರ್ವಹಣೆ, ಪಾದಚಾರಿ ಮಾರ್ಗ ನಿರ್ವಹಣೆಯಂತಹ ಕಾಮಗಾರಿಗಳಿಗಾಗಿ ₹181 ಕೋಟಿ ವ್ಯಯಿಸುವುದಾಗಿ ತಿಳಿಸಲಾಗಿದೆ. ಅದರ ಜತೆಗೆ ವಾರ್ಡ್‌ ಮಟ್ಟದ ಕಾಮಗಾರಿಗಳ ಅನುಷ್ಠಾನಕ್ಕಾಗಿ ₹299 ಕೋಟಿ ಮೀಸಲಿಟ್ಟು, ಒಟ್ಟು ವಾರ್ಡ್‌ಗಳ ಅಭಿವೃದ್ಧಿಗಾಗಿಯೇ ₹481 ಕೋಟಿ ಖರ್ಚು ಮಾಡುವುದಾಗಿ ಹೇಳಲಾಗಿದೆ.ಕುಡಿಯುವ ನೀರಿನ ಸಮಸ್ಯೆ ಚಿಂತಿಸಿಲ್ಲ

ನಗರದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ಆದರೆ, ಬಿಬಿಎಂಪಿ ಬಜೆಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳನ್ನೂ ಘೋಷಿಸಿಲ್ಲ. ಕರೆಗಳಿಗೆ ಒಳಚರಂಡಿ ನೀರು ಸೇರದಂತೆ ತಡೆಯಲು ₹49.20 ಕೋಟಿ ಮೀಸಲಿಡುವುದಾಗಿ ಘೋಷಿಸಿರುವುದು ಬಿಟ್ಟರೆ, ಕೆರೆಗಳ ನೀರು ಶುದ್ಧೀಕರಣ, ಹೂಳು ತೆಗೆಯುವಂತಹ ಕಾಮಗಾರಿಗಳ ಬಗ್ಗೆ ಗಮನವನ್ನೇ ಹರಿಸಿಲ್ಲ.ಸರ್ಕಾರದ ಹಣ ಸಂಪೂರ್ಣ

ಸಾರ್ವಜನಿಕ ಕಾಮಗಾರಿಗೆ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬರುವ ಅನುದಾನವನ್ನು ಸಂಪೂರ್ಣವಾಗಿ ಸಾರ್ವಜನಿಕ ಕಾಮಗಾರಿ ವಿಭಾಗ ವ್ಯಾಪ್ತಿಯ ಕೆಲಸಗಳಿಗೆ ಬಳಸಿಕೊಳ್ಳುವುದಾಗಿ ಬಜೆಟ್‌ನಲ್ಲಿ ಹೇಳಲಾಗಿದೆ. ರಾಜ್ಯ ಸರ್ಕಾರದ ವಿಶೇಷ ಮೂಲಭೂತ ಸೌಕರ್ಯ ಯೋಜನೆ ಅನುದಾನ 3 ಸಾವಿರ ಕೋಟಿ ರು., 15ನೇ ಹಣಕಾಸು ಆಯೋಗದಿಂದ ಬರುವ 488 ಕೋಟಿ ರು. ಹಾಗೂ ಎಸ್‌ಎಫ್‌ಸಿ ಅನುದಾನ 268.08 ಕೋಟಿ ರು.ಗಳನ್ನು ಸಂಪೂರ್ಣವಾಗಿ ಸಾರ್ವಜನಿಕ ಕಾಮಗಾರಿ ವಿಭಾಗದಲ್ಲಿ ಕೈಗೊಳ್ಳುವ ಯೋಜನೆಗೆ ವ್ಯಯಿಸಲಾಗುತ್ತದೆ ಎಂದು ಘೋಷಿಸಲಾಗಿದೆ.