ಹೊಳೆಇಟಗಿಯಲ್ಲಿ ವಿಷಪೂರಿತ ಆಹಾರ ಸೇವಿಸಿ ೫೪ ಕುರಿಗಳ ಸಾವು

| Published : Oct 07 2025, 01:03 AM IST

ಹೊಳೆಇಟಗಿಯಲ್ಲಿ ವಿಷಪೂರಿತ ಆಹಾರ ಸೇವಿಸಿ ೫೪ ಕುರಿಗಳ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದ ಮಣಿಗಿನಿ ಪೂಜಾರಿ ಹಾಗೂ ಯಲ್ಲವ್ವ ಭೀರಸಿದ್ದ ಪೂಜಾರಿ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.

ಶಿರಹಟ್ಟಿ: ವಿಷಪೂರಿತ ಆಹಾರ ಸೇವಿಸಿ ೫೪ ಕುರಿಗಳು ಮೃತಪಟ್ಟಿರುವ ಘಟನೆ ಸೋಮವಾರ ತಾಲೂಕಿನ ಹೊಳೆ-ಇಟಗಿ ಗ್ರಾಮದ ಬಳಿ ನಡೆದಿದೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದ ಮಣಿಗಿನಿ ಪೂಜಾರಿ ಹಾಗೂ ಯಲ್ಲವ್ವ ಭೀರಸಿದ್ದ ಪೂಜಾರಿ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ.

ಘಟನಾ ಸ್ಥಳಕ್ಕೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೊನ್ನಪ್ಪ ಪೋಟಿ, ಸಮಾಜದ ಮುಖಂಡ ಮಂಜುನಾಥ ಘಂಟಿ ಭೇಟಿ ನೀಡಿ ಪರಿಶೀಲಿಸಿದ್ದು, ಚಿಕ್ಕೋಡಿ ತಾಲೂಕಿನಿಂದ ಕುರಿ ಮೇಯಿಸಲು ಆಗಮಿಸಿದ್ದು, ಶಿರಹಟ್ಟಿ ತಾಲೂಕು ಪ್ರವೇಶಿಸುತ್ತಿದ್ದಂತೆ ಕುರಿಗಳು ವಿಷಪೂರಿತ ಆಹಾರ ಸೇವಿಸಿ ಮೃತಪಟ್ಟಿರುವ ಶಂಕೆಯಿದೆ ಎಂದರು.ಸಧ್ಯ ೫೪ ಕುರಿಗಳು ಸಾವಿಗೀಡಾಗಿದ್ದು, ಇನ್ನೂ ಕೆಲ ಕುರಿಗಳು ಸಾವು- ಬದುಕಿನ ಮಧ್ಯ ಹೋರಾಟ ಮಾಡುತ್ತಿವೆ. ಸಾವಿಗೀಡಾದ ಕುರಿಗಳ ಮಾಲೀಕರಿಗೆ ಸರ್ಕಾರ ಪಶು ವೈದ್ಯಾಧಿಕಾರಿಗಳಿಂದ ವರದಿ ಪಡೆದು ತುರ್ತು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.ಸ್ಥಳಕ್ಕೆ ಅಧಿಕಾರಿಗಳ ಭೇಟಿ:ತಾಲೂಕು ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಿಂಗಪ್ಪ ಓಲೇಕಾರ ಮಾತನಾಡಿ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಿಂದ ಸಂಚಾರಿ ಕುರಿಗಾಹಿಗಳು ಕುರಿಗಳನ್ನು ಮೇಯಿಸುತ್ತಾ ಬಂದಿದ್ದು, ತಾಲೂಕಿನ ಹೊಳೆ- ಇಟಗಿ ಬಳಿ ವಿಷಪೂರಿತ ಆಹಾರ ಸೇವಿಸಿ ೫೪ ಕುರಿಗಳು ಸಾವಿಗೀಡಾಗಿವೆ ಎಂದು ತಿಳಿಸಿದರು.ತಹಸೀಲ್ದಾರ್ ಕೆ. ರಾಘವೇಂದ್ರರಾವ್ ಹಾಗೂ ಜಿಲ್ಲಾ ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕ ಡಾ. ಉಮೇಶ ತಿರ್ಲಾಪೂರ, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುರಿಗಳು ಸಾವಿಗೀಡಾಗಿರುವ ಕುರಿತು ಆಹಾರ ಮಾದರಿಯನ್ನು ಗದುಗಿನ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಳಿಸಲಾಗುವುದು ಎಂದರು.ವರದಿ ಬಂದ ನಂತರ ತಾಲೂಕು ಆಡಳಿತ, ಕುರಿ ಮತ್ತು ಉಣ್ಣೆ ನಿಗಮದ ಸಹಾಯಕ ನಿರ್ದೇಶಕರ ಗಮನಕ್ಕೆ ತಂದು ಸರ್ಕಾರದ ಅನುಗ್ರಹ ಯೋಜನೆ ಅಡಿಯಲ್ಲಿ ಒಂದು ಕುರಿಗೆ ₹೭೫೦೦ ಪರಿಹಾರ ದೊರೆಯಲಿದ್ದು, ಪರಿಹಾರದ ಹಣವನ್ನು ಆರ್ಥಿಕ ನಷ್ಟ ಅನುಭವಿಸಿರುವ ಕುರಿಗಾಯಿಗಳಿಗೆ ಮುಟ್ಟಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.ಸಧ್ಯ ಸಂಚಾರಿ ಕುರಿಗಾಹಿಗಳೆ ಹೆಚ್ಚಾಗಿದ್ದು, ಈಗಾಗಲೇ ಕಾಯಿಲೆಗಳಿಗೆ ತುತ್ತಾದ ಕುರಿಗಳಿಗೆ ಚಿಕಿತ್ಸೆ ನೀಡಲಾಯಿತು.

ಈಗಾಗಲೇ ಅಲ್ಲಲ್ಲಿ ಮೆಕ್ಕೆಜೋಳ ಬೆಳೆಯ ಒಕ್ಕಲು ಆಗಿದ್ದು, ಆ ಹೊಲಕ್ಕೆ ಕುರಿ ಹಿಂಡು ಬಿಟ್ಟು ಮೇಯಿಸುವುದರಿಂದ ಫುಡ್ ಪಾಯಿಜನ್ ಆಗಲಿದೆ. ಅಲ್ಲದೇ ಮೆಕ್ಕೆಜೋಳಕ್ಕೆ ಬೂಸ್ಟು ಬಂದ ಹಿನ್ನೆಲೆಯಲ್ಲಿ ಕುರಿಗಳಿಗೆ ಕಾಳು ತಿನ್ನಿಸದಂತೆ ಸಲಹೆ ನೀಡಲಾಗಿದೆ ಎಂದು ತಹಸೀಲ್ದಾರ್ ಕೆ. ರಾಘವೇದ್ರರಾವ್ ತಿಳಿಸಿದ್ದಾರೆ.