55 ಸಾವಿರ ಜನರಿಂದ 55 ಕಿಮೀ ಉದ್ದದ ಮಾನವ ಸರಪಳಿ

| Published : Sep 11 2024, 01:03 AM IST

ಸಾರಾಂಶ

ಧಾರವಾಡದ ತೇಗೂರ ಗ್ರಾಮದಿಂದ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಮಾವಿನಕೊಪ್ಪ ಗ್ರಾಮದ ವರೆಗೆ 55 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಿಸಲಾಗುತ್ತದೆ.

ಹುಬ್ಬಳ್ಳಿ:

ಜನ ಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಮಹತ್ವ ಹಾಗೂ ಜವಾಬ್ದಾರಿ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸೆ. 15ರಂದು ವಿಶ್ವ ಪ್ರಜಾಪ್ರಭುತ್ವ ದಿನದಂಗವಾಗಿ 55 ಕಿಮೀ ಉದ್ದದ 55 ಸಾವಿರ ಜನರು ಪಾಲ್ಗೊಳ್ಳುವ ಮಾನವ ಸರಪಳಿಯನ್ನು ಧಾರವಾಡದಲ್ಲಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ವಿಶ್ವ ಪ್ರಜಾಪ್ರಭುತ್ವ ದಿನದಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಾಣ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ಜಗತ್ತಿಗೆ ಮಾದರಿಯಾಗಿದೆ. ಅಂಬೇಡ್ಕರ್ ಕೊಡುಗೆಯನ್ನು ಎಲ್ಲರೂ ದಿನನಿತ್ಯ ನೆನಪಿಸಿಕೊಳ್ಳಬೇಕಿದೆ. ನಾವಿರುವ ಸ್ಥಿತಿಗೆ ಅಂಬೇಡ್ಕರ್‌ ಅವರ ವಿಚಾರಧಾರೆ, ಸಮಾನತೆ, ಶಿಕ್ಷಣ, ಅಭಿವೃದ್ಧಿ ಪರಿಕಲ್ಪನೆಯ ಸಂವಿಧಾನ ನೀಡಿದ್ದು ಮಹತ್ವದ ಕೊಡುಗೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಪ್ರತಿವರ್ಷ ಸೆ.15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಸಂವಿಧಾನದ ಪೀಠಿಕೆ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅತ್ಯಂತ ಪರಿಣಾಮಕಾರಿಯಾಗಿ ಆಚರಿಸಲು ಬೀದರ್‌ನಿಂದ ಚಾಮರಾಜ ನಗರದ ವರೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ತೇಗೂರ ಗ್ರಾಮದಿಂದ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಮಾವಿನಕೊಪ್ಪ ಗ್ರಾಮದ ವರೆಗೆ 55 ಸಾವಿರ ಜನರಿಂದ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ಅಂದು ಬೆಳಗ್ಗೆ 8 ಗಂಟೆಗೆ ಮಾನವ ಸರಪಳಿ ಆರಂಭವಾಗುತ್ತದೆ. 9 ಗ್ರಾಪಂಗಳ 18 ಗ್ರಾಮಗಳಲ್ಲಿ ಮತ್ತು ಧಾರವಾಡ ನಗರದಲ್ಲಿ ಮಾನವ ಸರಪಳಿ ಮಾಡಲಾಗುತ್ತಿದೆ.

ಅಧಿಕಾರಿಗಳ ನೇಮಕ:

55 ಸಾವಿರ ಜನರ ಶಿಸ್ತುಬದ್ದ ಭಾಗವಹಿಸುವಿಕೆಗೆ ಮೇಲುಸ್ತುವಾರಿಗಾಗಿ ಪ್ರತಿ 100 ಮೀಟರ್‌ಗೆ ಒಬ್ಬ ವಿಭಾಗ ಅಧಿಕಾರಿಯಂತೆ ಒಟ್ಟು 510 ಅಧಿಕಾರಿಗಳು, ಪ್ರತಿ ಕಿಮೀಗೆ ಒಬ್ಬ ಪ್ರದೇಶ ಅಧಿಕಾರಿಯಂತೆ ಒಟ್ಟು 51 ಅಧಿಕಾರಿಗಳು, ಪ್ರತಿ 2 ಕಿಮೀಗೆ ಒಬ್ಬ ತಾಲೂಕು ಮಟ್ಟದ ಅಧಿಕಾರಿಯಂತೆ ಒಟ್ಟು 26 ಅಧಿಕಾರಿಗಳು ಮತ್ತು ಪ್ರತಿ 5 ಕಿಮೀಗೆ ಒಬ್ಬ ಜಿಲ್ಲಾಮಟ್ಟದ ಅಧಿಕಾರಿಯಂತೆ ಒಟ್ಟು 12 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಮಾನವ ಸರಪಳಿ ಸಂಚಾರ ಮಾರ್ಗ:

ಕಿತ್ತೂರ ತಾಲೂಕಿನ ಮೂಲಕ, ಜಿಲ್ಲೆಯ ತೇಗೂರ ಗ್ರಾಮದ ಮೂಲಕ ಮಾನವ ಸರಪಳಿ ಆರಂಭವಾಗುತ್ತದೆ. ಗುಳೇದಕೊಪ್ಪ, ವೆಂಕಟಾಪುರ, ಶಿಂಗನಹಳ್ಳಿ, ಕೋಟೂರ, ಬೇಲೂರ, ಮಮ್ಮಿಗಟ್ಟಿ, ಕೆ.ಎಂ. ನರೇಂದ್ರ, ಜುಬ್ಲಿ ಸರ್ಕಲ್, ಸಲಕಿನಕೊಪ್ಪ, ಬಾಡ, ಬೆನಕನಕಟ್ಟಿ, ನಿಗದಿ, ಬೋಮ್ಮರಸಿಕೊಪ್ಪ, ಮುರಕಟ್ಟಿ, ಹಳ್ಳಿಗೇರಿ, ಹೊಲ್ತಿಕೋಟಿ ಗ್ರಾಮದಿಂದ ಮಾವಿನಕೊಪ್ಪ ಗ್ರಾಮದಿಂದ ಹಳಿಯಾಳ ತಾಲೂಕು ಮೂಲಕ ಮಾನವ ಸರಪಳಿಯು ಉತ್ತರ ಕನ್ನಡ ಜಿಲ್ಲೆಯನ್ನು ಸೇರುತ್ತದೆ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.