ಹೊಸಪೇಟೆ: ವಿದ್ಯಾರ್ಥಿಗಳ ಜೀವನದ ಪ್ರಮುಖ ಕಾಲಘಟವೆಂದೇ ಹೇಳಲಾಗುವ ದ್ವಿತೀಯ ಪಿಯುಸಿ ಪಕ್ಷೆಗಳು ವಿಜಯನಗರ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ದ್ವಿತೀಯ ಪಿಯುಸಿ ಪರೀಕ್ಷೆ ಮೊದಲ ದಿನ ಸುಸೂತ್ರವಾಗಿ ನಡೆದಿವೆ.

ಪರೀಕ್ಷೆಯ ಮೊದಲ ದಿನ ಕನ್ನಡ ಭಾಷೆ ಪರೀಕ್ಷೆ ಬರೆಯಲು 11914 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 576 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಿಯಾಗಿದ್ದರು. ಉಳಿದ 11338 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಈ ವರ್ಷ ವಿಜಯನಗರ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ ಹೊಸಪಪೇಟೆ ತಾಲೂಕಿನಲ್ಲಿ 7 ಕೇಂದ್ರ, ಹರಪನಹಳ್ಳಿ ತಾಲೂಕಿನಲ್ಲಿ 5, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 3, ಹೂವಿನಹಡಗಲಿ ತಾಲೂಕಿನಲ್ಲಿ 3, ಕೊಟ್ಟೂರು ತಾಲೂಕಿನಲ್ಲಿ 3 ಮತ್ತು ಕೂಡ್ಲಿಗಿ ತಾಲೂಕಿನಲ್ಲಿ 2 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆದಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದರು. ಶನಿವಾರ ಜಿಲ್ಲೆಯ ಕೆಲ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಎಸ್‌ಪಿ ಎಸ್. ಜಾಹ್ನವಿ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷೆ ಕೇಂದ್ರದ ಬಳಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಹೊಸಪೇಟೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.