ಇಂದಿನಿಂದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ 5ನೇ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ

| Published : May 31 2024, 02:15 AM IST

ಇಂದಿನಿಂದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ 5ನೇ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಶುಕ್ರವಾರ ಬೆಳಗ್ಗೆಯೇ ಸ್ಪರ್ಧೆ ಆರಂಭಗೊಳ್ಳಲಿದ್ದು ಈಗಾಗಲೇ ವಿವಿಧ ರಾಜ್ಯಗಳಿಂದ ಎಪ್ಪತ್ತಕ್ಕೂ ಅಧಿಕ ಸರ್ಫರ್‌ಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿ ಸಮೀಪದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಮೇ 31 ಶುಕ್ರವಾರದಿಂದ ಜೂನ್‌ 2ರ ವರೆಗೆ ಮೂರು ದಿನಗಳ ಕಾಲ 5ನೇ ರಾಷ್ಟ್ರೀಯ ಸರ್ಫಿಗ್ ಸ್ಪರ್ಧೆ ಜರುಗಲಿದೆ.

ಶುಕ್ರವಾರ ಬೆಳಗ್ಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ನವ ಮಂಗಳೂರು ಬಂದರು ಪ್ರಾಧಿಕಾರದ ಕಾರ್ಯದರ್ಶಿ ಜಿಜೋ ಥೋಮಸ್‌, ಡೆಪ್ಯುಟಿ ಚೇರ್ಮನ್ಚೆ ಕೆ. ನಾಥ್‌, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಿಲ್ಲೆಯ ಉಪ ನಿರ್ದೇಶಕ ಮಾಣಿಕ್ಯ ಮತ್ತಿತರ ಗಣ್ಯರು ಉಪಸ್ಥಿತರಿರುವರು. ಶುಕ್ರವಾರ ಬೆಳಗ್ಗೆಯೇ ಸ್ಪರ್ಧೆ ಆರಂಭಗೊಳ್ಳಲಿದ್ದು ಈಗಾಗಲೇ ವಿವಿಧ ರಾಜ್ಯಗಳಿಂದ ಎಪ್ಪತ್ತಕ್ಕೂ ಅಧಿಕ ಸರ್ಫರ್‌ಗಳು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.

ಮೇ 31ರಿಂದ ಜೂನ್‌ 2ರ ವರೆಗೆ ನಡೆಯಲಿರುವ ಈ ರಾಷ್ಟ್ರೀಯ ಸ್ಪರ್ದೆಯ ಸಂದರ್ಭ ಮಾನ್ಸೂನ್ ಮಳೆಯ ಪೂರ್ವಭಾವಿ ಬಿರುಗಾಳಿಯ ಆರಂಭವಾಗಿರುವುದು ಸಂಘಟಕರ ಉತ್ಸಾಹ ಇಮ್ಮುಡಿಗೊಳಿಸಿದೆ. ಮೂಲ್ಕಿಯ ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌ನ ಮಂತ್ರ ಸರ್ಫ್‌ ಕ್ಲಬ್ ಆಶ್ರಯದಲ್ಲಿ ಸರ್ಫಿಂಗ್‌ ಫೆಡರೇಶನ್ ಆಫ್ ಇಂಡಿಯಾ ಸ್ಪರ್ಧೆಗಳನ್ನು ನಡೆಸಲಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆ, ನವ ಮಂಗಳೂರು ಬಂದರು ಪ್ರಾಧಿಕಾರ, ದ..ಕ. ಜಿಲ್ಲಾಡಳಿತ ಸಹಕಾರ ನೀಡಲಿದೆ.

ರಾಷ್ಟ್ರೀಯ ಸರ್ಫಿಂಗ್‌ ಪಟುಗಳಾದ ಶ್ರೀಕಾಂತ್ ಡಿ, ಸೂರ್ಯ ಪಿ, ಆಜೀಶ್ ಆಲಿ, ಶಿವರಾಜ್ ಬಾಬು, ಕಮಲೀ ಮೂರ್ತಿ ಭಾಗವಹಿಸುವಿಕೆ ಸ್ಪರ್ಧೆಯನ್ನು ಉನ್ನತ ಮಟ್ಟಕ್ಕೇರಿಸಲಿದೆ. ನವ ಮಂಗಳೂರು ಬಂದರು ಪ್ರಾಧಿಕಾರ ಪ್ರಥಮ ಬಾರಿಗೆ ಟೈಟಲ್ ಸ್ಪಾನ್ಸರ್‌ ಆಗಿದ್ದು ಸ್ಪರ್ಧೆಯು ಪುರುಷರ ಮತ್ತು ಮಹಿಳೆಯರ ಮುಕ್ತ ವಿಭಾಗಗಳು ಮತ್ತು ಬಾಲಕ ಬಾಲಕಿಯರ ವಿಭಾಗವನ್ನು ಒಳಗೊಂಡಿದೆ.