ಡಿ.2ಕ್ಕೆ ತಾಲೂಕು ಮಟ್ಟದ 5ನೇ ಜಾನಪದ ಸಮ್ಮೇಳನ

| Published : Nov 11 2025, 01:30 AM IST

ಸಾರಾಂಶ

ಕಡೂರು, ಜಾನಪದದಿಂದ ಸುಸಂಸ್ಕೃತಿ, ಭಾರತೀಯತೆ, ಐಕ್ಯತೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಕೆ. ಎಸ್. ಆನಂದ್ ಅಭಿಪ್ರಾಯ ಪಟ್ಟರು.

ಆಹ್ವಾನ ಪತ್ರಿಕೆ ಕಡೂರಿನ ಶಾಸಕರ ಕಚೇರಿಯಲ್ಲಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಕಡೂರು

ಜಾನಪದದಿಂದ ಸುಸಂಸ್ಕೃತಿ, ಭಾರತೀಯತೆ, ಐಕ್ಯತೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಕೆ. ಎಸ್. ಆನಂದ್ ಅಭಿಪ್ರಾಯ ಪಟ್ಟರು.

ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದಿಂದ ಡಿಸೆಂಬರ್ 2ರಂದು ಗರ್ಜೆ ಗ್ರಾಮದಲ್ಲಿ ಹಮ್ಮಿಕೊಂಡಿರುವ ತಾಲೂಕು ಮಟ್ಟದ 5ನೇ ಜಾನಪದ ಸಮ್ಮೇಳನದ ಆಹ್ವಾನ ಪತ್ರಿಕೆ ಕಡೂರಿನ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಪರಿಷತ್ತಿನ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ನುರಿತ ಅನುಭವಿ ಕಲಾವಿದರಿಂದ ಇಂದಿನ ಯುವ ಜನತೆಗೆ ತರಬೇತಿ ಕಾರ್ಯಾಗಾರ ನಡೆಸಬೇಕೆಂದು ಸಲಹೆ ನೀಡಿದರು. ತಾಲೂಕು ಜಾನಪದ ಸಮ್ಮೇಳನವನ್ನು ಗರ್ಜೆ ಗ್ರಾಮದಲ್ಲಿ ಕಜಾಪದಿಂದ ಡಿಸೆಂಬರ್ 2ರಂದು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಈ ಸಮ್ಮೇಳನದಲ್ಲಿ ತಾಲೂಕಿನ ಎಲ್ಲಾ ಕಲಾವಿದರು, ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ನಡೆಸಿ ಕೊಡಬೇಕೆಂದು ತಿಳಿಸಿದರು.

ಜಾನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಯುವಕ ಯುವತಿಯರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಜಾನಪದ ಕಲೆ, ಸಂಗೀತ ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿ ವಹಿಸಬೇಕು ಮತ್ತು ಜಾನಪದ ಎಲ್ಲಾ ರೀತಿ ಸಾಹಿತ್ಯ, ಸಂಗೀತ, ಕಲೆಗಳ ತಾಯಿ ಬೇರಾಗಿದೆ ಹಾಗೂ ಅಡಿಗಲ್ಲಾಗಿದೆ. ಹಾಗೆಯೇ ನ್ಯಾಯ, ನೀತಿ, ಧರ್ಮ ಎಂಬ ತತ್ವದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತದೆ ಎಂದು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ ಬಿ ಸುರೇಶ್ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲೆ, ಸಾಹಿತ್ಯ, ಸಂಗೀತ ಉಳಿಸುವಲ್ಲಿ ಇಂದಿನ ಯುವಕ ಯುವತಿಯರಿಗೆ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರ್ಕಾರ ಹೆಚ್ಚು ಹೆಚ್ಚು ಆರ್ಥಿಕ ಸಹಕಾರ ಪ್ರೋತ್ಸಾಹ ಕೊಡುತ್ತಾ ಅವರಲ್ಲಿ ಹುದುಗಿರುವ ಜಾನಪದ ಕಲೆಗೆ ಅತ್ಯುತ್ತಮ ವೇದಿಕೆ ನೀಡಬೇಕಾಗಿದೆ. ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಜಾನಪದದ ಅರಿವು ಮೂಡಿಸಬೇಕಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆ ಗಳು ಹಮ್ಮಿಕೊಳ್ಳುವ ಮನರಂಜನೆ ಕಾರ್ಯಕ್ರಮಗಳಲ್ಲಿ ಜಾನಪದ ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು.

ಕಡೂರು ತಾಲೂಕು ಕಜಾಪ ಅಧ್ಯಕ್ಷ ಜಗದೀಶ್ವರ್ ಆಚಾರ್ ಮಾತನಾಡಿ, ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲಾ ಕಲಾತಂಡಗಳು ವೇದಿಕೆ ಮತ್ತು ಮೆರವಣಿಗೆಯಲ್ಲಿ ಪ್ರದರ್ಶನ ನೀಡಲಿವೆ. ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತ ದೊಂದಿಗೆ ಕರೆತರಲಾಗುವುದು. ಜಾನಪದ ಗೋಷ್ಠಿಗೆ ಜಿಲ್ಲೆಯ ಪ್ರಮುಖ ಜಾನಪದ ಸಾಹಿತಿಗಳನ್ನು ಆಹ್ವಾನಿಸಲಾಗುವುದು. ಹಿರಿಯ ಕಲಾವಿದರನ್ನು ಗೌರವಿಸಲಾಗುವುದು. ಹೆಚ್ಚು ಕಲಾವಿದರು ಆಗಮಿಸಿ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿಕೊಂಡರು.

ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಸಮ್ಮೇಳನದ ಅಧ್ಯಕ್ಷ ಗಿರೀಶ್, ದೇವಾಂಗ ಸಮಾಜದ ಅಧ್ಯಕ್ಷ ಧನಂಜಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದಪ್ಪ ಚನ್ನಪಿಳ್ಳೆ, ಗ್ರಾಪಂ ಸದಸ್ಯರಾದ ಜ್ಯೋತಿ ರಾಜಪ್ಪ, ಮಲ್ಲಿಕಾರ್ಜುನ, ಗುರು ಮೂರ್ತಿ, ಪರಿಷತ್ತು ಉಪಾಧ್ಯಕ್ಷ ಚಿಕ್ಕನಲ್ಲೂರು ಜಯಣ್ಣ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜಪ್ಪ, ತಿಪ್ಪೇಶ, ಮಲಿಯಪ್ಪ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. 10ಕೆಕೆಡಿಯು1

ಕಡೂರು ತಾಲೂಕಿನ ಗರ್ಜೆ ಗ್ರಾಮದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಜಾನಪದ ಸಮ್ಮೇಳನದ ಪ್ರತಿಯನ್ನು ಶಾಸಕ ಕೆ.ಎಸ್ ಆನಂದ್ ಬಿಡುಗಡೆ ಮಾಡಿದರು.