ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ಮುಜರಾಯಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಜರುಗಿತು.ಕಾರ್ತಿಕ ಮಾಸದ ತರುವಾಯ ಒಂದು ತಿಂಗಳ ನಂತರ ಭಕ್ತರು ಹರಕೆ ಕಾಣಿಕೆ ರೂಪದಲ್ಲಿ ಹುಂಡಿಗಳಿಗೆ ಹಾಕಲಾಗಿದ್ದ ಕಾಣಿಕೆಯನ್ನು ಎಣಿಕೆ ಮಾಡಲಾಯಿತು.
ಮುಜರಾಯಿ ಇಲಾಖೆ ಅಧಿಕಾರಿಯಾದ ತಹಸೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ಕಿಕ್ಕೇರಿನಾಡ ಕಚೇರಿ ಉಪ ತಹಸೀಲ್ದಾರ್ ವೀಣಾ ನೇತೃತ್ವದಲ್ಲಿ ಎಣಿಕೆ ನಡೆಯಿತು. ದೇಗುಲ ನವೀಕರಣ ಕಾಮಗಾರಿ ನಡೆಯಲಾಗುತ್ತಿದೆ.ದೇಗುಲ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಮೂಲ ದೇವರಿಗೆ ಬಾಲಾಲಯವನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಹುಂಡಿ ರಕ್ಷಣೆದೃಷ್ಟಿಯಲ್ಲಿ ಪ್ರತಿ ತಿಂಗಳಿಗೊಮ್ಮೆ ಆಗಿಂದಾಗ್ಗೆ ಎಣಿಕೆ ಮಾಡಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದು ವೀಣಾ ತಿಳಿಸಿದರು.
ಮುಜರಾಯಿ ಇಲಾಖೆ ಸ್ವಾಮ್ಯದ ದೇಗುಲದ ಹುಂಡಿ ಎಣಿಕೆ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಲಾಯಿತು. ಭಕ್ತರು ಒಪ್ಪಿಸಿದ ಕಾಣಿಕೆಯಾಗಿ ಒಟ್ಟು 6,10,275 ರು ಹುಂಡಿ ಸಂಗ್ರಹಣೆಯಲ್ಲಿತ್ತು. ಕಾಣಿಕೆ ಹಣವನ್ನು ಕೆ.ಆರ್.ಪೇಟೆಯ ಬ್ಯಾಂಕ್‌ಆಫ್ ಬರೋಡಾದ ದೇಗುಲದ ಮುಜರಾಯಿ ಅಕೌಂಟ್‌ಗೆ ಜಮಾ ಮಾಡಲಾಯಿತು.ಉಪ ತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಆಡಳಿತಾಧಿಕಾರಿಗಳಾದ ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನಿಲ್ ಗಾಣಿಗೇರ, ಹರ್ಷಿತ, ವನಜಾಕ್ಷಿ, ಬ್ಯಾಂಕ್‌ಆಫ್ ಭರೋಡ ಪ್ರಕಾಶ್, ಗ್ರಾಮ ಸಹಾಯಕರು, ಗ್ರಾಮ ಮುಖಂಡರು ಇದ್ದರು.
ಜ.8 ರಂದು ಸಾರ್ವಜನಿಕ ಕುಂದು ಕೊರತೆ ಸಭೆಶ್ರೀರಂಗಪಟ್ಟಣ: ಮಂಡ್ಯ ಲೋಕಾಯುಕ್ತ ವಿಭಾಗದ ಪೊಲೀಸ್ ಅಧಿಕಾರಿಗಳು ಜ.8ರಂದು ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕರಿಸಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸಲಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಂದ ಮಧ್ಯಾಹ್ನ 1.30 ಗಂಟೆವರೆಗೆ ಕರ್ನಾಟಕ ಲೋಕಾಯುಕ್ತ ಡಿವೈಎಸ್‌ಪಿ ಸುನಿಲ್ ಕುಮಾರ್ ಎಚ್.ಟಿ, ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್‌ರೆಡ್ಡಿ ಆರ್, ಎಂ.ಎಂ.ಜಯರತ್ನ, ಬ್ಯಾಟರಾಯಗೌಡ ಬಿ.ಪಿ. ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ತಾಲೂಕಿನ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳನ್ನು ಖುದ್ದಾಗಿ ಭೇಟಿ ಮಾಡಿ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರುಗಳು ಸರ್ಕಾರಿ ಕೆಲಸ ಮಾಡಿಕೊಡಲು ಅನಗತ್ಯ ವಿಳಂಬ ಮಾಡಿದ ಬಗ್ಗೆ ಹಾಗೂ ಭ್ರಷ್ಟಾಚಾರದ ಬಗ್ಗೆ ದೂರು, ಅಹವಾಲು ಸಲ್ಲಿಸಬಹುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.