ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು 16 ವರ್ಷಗಳೇ ಉರುಳಿವೆ. ಸಮರ್ಪಕ ಅನುದಾನ ಬಿಡುಗಡೆ ಸೇರಿದಂತೆ ಕನ್ನಡದ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸಾಹಿತಿಗಳು, ಚಿಂತಕರನ್ನೊಳಗೊಂಡ ನಿಯೋಗವನ್ನು ದೆಹಲಿಗೆ ಕೊಂಡೊಯ್ಯುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ ನಂತರ ಈವರೆಗೆ ಕೇವಲ 6 ಕೋಟಿ ರು. ಅನುದಾನ ಮಾತ್ರ ಬಿಡುಗಡೆಯಾಗಿದೆ. ಸಂಸ್ಕೃತ ಭಾಷೆಗೆ 540 ಕೋಟಿ, ತಮಿಳು ಭಾಷೆಗೆ 250 ಕೋಟಿ ರು. ಬಿಡುಗಡೆಯಾಗಿದೆ. ಕನ್ನಡಕ್ಕೆ ಸತತ ಅನ್ಯಾಯವಾಗುತ್ತಲೇ ಇದೆ ಎಂದರು.
ಕನ್ನಡ, ತಮಿಳು, ಸಂಸ್ಕೃತ ಸೇರಿದಂತೆ 10 ಭಾಷೆಗಳ ಒಳಗೊಂಡ ಕೇಂದ್ರ ಸರ್ಕಾರ ಭಾರತೀಯ ಭಾಷಾ ವಿಶ್ವವಿದ್ಯಾಲಯ ಮಾಡಲು ನಿರ್ಧಾರ ಕೈಗೊಂಡಿದೆ. ಆದರೆ, ಅದು ಅನುಷ್ಠಾನವಾದಲ್ಲಿ ಕೆಲವೊಂದು ನಿಯಮಗಳನ್ನು ರಾಜ್ಯ ಸರ್ಕಾರ ಪಾಲನೆ ಮಾಡಬೇಕು. ಈ 10 ಭಾಷೆಗಳ ಬೆಳವಣಿಗೆಗೆ ಜವಾಬ್ದಾರಿಯನ್ನು ಕೇಂದ್ರವೇ ವಹಿಸಲಿದೆ. ಹೀಗಾಗಿ ಈ ಎಲ್ಲ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಡಿ16,17,18 ರಂದು ತಮ್ಮ ನೇತೃತ್ವದಲ್ಲಿ ನಿಯೋಗ ತೆರಳುವುದಾಗಿ ತಿಳಿಸಿದರು.ನಿಯೋಗದಲ್ಲಿ ಕನ್ನಡ ಪ್ರಾಧಿಕಾರದ ಸದಸ್ಯರು, ಮಾಜಿ ಅಧ್ಯಕ್ಷ ಎಲ್.ಹನುಮಂತಯ್ಯ, ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್, ವಿ.ಆರ್.ಸುದರ್ಶನ್, ಬಿ.ಎಲ್. ಶಂಕರ್ ಇತರರು ದೆಹಲಿಗೆ ತೆರಳಿ ಕೇಂದ್ರ ಸಚಿವರು, ರಾಜ್ಯವನ್ನು ಪ್ರತಿನಿಧಿಸುವ ಸಂಸದರು, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು, ಪ್ರಧಾನ ಕಾರ್‍ಯದರ್ಶಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿವೆ ಎಂದರು.
ರಾಜ್ಯದಲ್ಲಿ ಕೆಲಸ ಮಾಡುವ ಇತರೆ ಭಾಷಿಕರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಕಲಿಕಾ ಕೇಂದ್ರ ತೆರೆದು ಮೂರು ತಿಂಗಳಲ್ಲಿ ಕನ್ನಡ ಕಲಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಪ್ರತ್ಯೇಕ ಪಠ್ಯಕ್ರಮ ಸಿದ್ಧಗೊಳಿಸಿದೆ. 75 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಈಗಾಗಲೇ ರಾಜ್ಯಾದ್ಯಂತ 34 ಕೇಂದ್ರ ತೆರೆಯಲಾಗಿದೆ. ಮುಂದಿನ ವರ್ಷದಿಂದ ಹೆಚ್ಚುವರಿಯಾಗಿ ಕೇಂದ್ರ ತೆರೆಯುವ ಕೆಲಸ ಮಾಡುತ್ತೇವೆ ಎಂದರು.ಕನ್ನಡ ಅಧ್ಯಾಪಕರ ನೇಮಕಕ್ಕೆ ಒತ್ತಾಯ:
ವಿಶ್ವ ವಿದ್ಯಾಲಯಗಳಲ್ಲಿ ಶೇ.80ರಷ್ಟು ಕನ್ನಡ ಅಧ್ಯಾಪಕರ ಕೊರತೆ ಇದೆ. ಸರ್ಕಾರ ತುರ್ತಾಗಿ ಕನ್ನಡ ಅಧ್ಯಾಪಕರ ಹುದ್ದೆ ಭರ್ತಿ ಮಾಡಬೇಕು. ಎನ್‌ಇಪಿ ಮಾದರಿಯಲ್ಲಿ ಕನಿಷ್ಠ ನಿತ್ಯ 6 ತಾಸು ಕನ್ನಡ ಕಲಿಸುವ ಕೆಲಸ ಮಾಡಬೇಕು ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಆದೇಶ ಮಾಡಿದ್ದಾರೆ. ಆದರೆ, ಖಾಸಗಿ ಸಂಸ್ಥೆಗಳಲ್ಲಿ ಇನ್ನೂ ಅನುಷ್ಠಾನ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಿಕ್ಷಣಕ್ಕೆ ಶೇ. 6ರಷ್ಟು ಅನುದಾನ ಮೀಸಲಿಡಬೇಕು:
ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಶೇ.3ರಷ್ಟು ಅನುದಾನವನ್ನು ಶಿಕ್ಷಣಕ್ಕೆ ನೀಡುತ್ತಿದೆ. ಇದರಲ್ಲಿ ಶೇ.2ಕ್ಕಿಂತಲೂ ಕಡಿಮೆ ವ್ಯಯಿಸಲಾಗುತ್ತಿದೆ. ಆದರೆ, ಇದರಲ್ಲಿ ಕಟ್ಟಡ ನಿರ್ವಹಣೆ, ಮೂಲ ಸೌಲಭ್ಯ ನಿರ್ವಹಿಸುತ್ತಿಲ್ಲ. ಎನ್‌ಇಪಿ ಮಾದರಿಯಲ್ಲಿ ಶೇ. 6 ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಸರ್ಕಾರ ಮೀಸಲಿಡಬೇಕು. ಇದರಿಂದ ಎಲ್ಲ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದರು.ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಇನ್ನೂ ಅನುಷ್ಠಾನವಾಗಿಲ್ಲ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು ಕಾಯಿದೆಯಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕನ್ನಡಿಗರಿಗೆ ಉದ್ಯೋಗ ಕಡ್ಡಾಯ:ಬಹುರಾಷ್ಟ್ರೀಯ ಕಂಪನಿಗಳಲ್ಲಿ ಎಲ್ಲ ಹುದ್ದೆಗಳಲ್ಲೂ ಕನ್ನಡಿಗರಿಗೆ ಉದ್ಯೋಗ ಕಡ್ಡಾಯ. ಈ ಬಗ್ಗೆ ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳು, ಕನ್ನಡ ಸಂಘಟನೆಗಳು, ಚಿಂತಕರು, ಸಾಹಿತಿಗಳ ಸಭೆ ಕರೆದು ಬಹುರಾಷ್ಟೀಯ ಕಂಪನಿಗಳ ಆಡಳಿತ ಮಂಡಳಿಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ಇದಕ್ಕೆ ಒಪ್ಪದಿದ್ದಲ್ಲಿ ನಿರ್ಧಾಕ್ಷಿಣ್ಯವಾಗಿ ಅಂತಹ ಕಂಪನಿಗಳನ್ನು ರಾಜ್ಯದಿಂದ ಹೊರ ಹಾಕಬೇಕು. ರಾಜ್ಯ ಸರ್ಕಾರಕ್ಕೆ ಇದೊಂದು ಅಸ್ತ್ರವಾಗಿ ಬಳಕೆಯಾದಾಗಾ ಮಾತ್ರ ಪ್ರಾದೇಶಿಕ ಭಾಷೆ ಉಳಿಯಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಕನ್ನಡ ಆಡಳಿತ ಭಾಷೆಯಾದರೂ ಇನ್ನೂ ಕೆಲವು ಕಡೆಗಳಲ್ಲಿ ಅನುಷ್ಠಾನವಾಗಿಲ್ಲ. ಮಿಮ್ಸ್‌ನಲ್ಲಿ ಎಲ್ಲವೂ ಕನ್ನಡವಾಗಬೇಕು. ನಾಮಫಲಕಗಳನ್ನು ಸಾಹಿತ್ಯ ಸಮ್ಮೇಳನದೊಳಗೆ ಅಳವಡಿಸಬೇಕು ಎಂದು ಸೂಚಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲೂ ನಾಮಫಲಕಗಳನ್ನು ಕನ್ನಡದಲ್ಲಿ ಅಳವಡಿಸುವುದರ ಜೊತೆಗೆ ಸಂಕ್ಷಿಪ್ತವಾಗಿ ಗ್ರಾಮದ ವಿವರವನ್ನು ಪ್ರಕಟಿಸುವಂತೆ ಸೂಚಿಸಲಾಗಿದೆ ಎಂದರು.ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 25 ಕೋಟಿ ಅನುದಾನ ನೀಡಿದೆ. ಇದರಲ್ಲಿ ಉಳಿದ ಹಣದಿಂದ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕು. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ಬೆಂಬಲ ನೀಡಲಿದೆ. ಇದು ಮಂಡ್ಯ ಜಿಲ್ಲೆಯಿಂದಲೇ ಆರಂಭವಾಗಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್‍ಯದರ್ಶಿ ಡಾ.ಸಂತೋಷ್ ಹಾನಗಲ್, ಸದಸ್ಯ ಟಿ. ತಿಮ್ಮೇಶ್ ಇತರರು ಇದ್ದರು.