ಕನ್ನಡಪ್ರಭ ವಾರ್ತೆ ರಾಮದುರ್ಗ

ರಾತ್ರಿ ಸಮಯದಲ್ಲಿ ರೈತರ ಜಮೀನುಗಳಲ್ಲಿನ ಕುರಿ, ಆಡುಗಳನ್ನು ಕಳ್ಳತನ ಮಾಡುತ್ತಿದ್ದ 6 ಜನ ಅಂತರ ಜಿಲ್ಲಾ ಕಳ್ಳರನ್ನು ಕಟಕೋಳ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ ₹1 ಲಕ್ಷಕ್ಕಿಂತ ಅಧಿಕ ನಗದು, 2 ಕಾರು ಮತ್ತು 2 ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಸ್ವಿಯಾಗಿದ್ದಾರೆ.

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಚುಂಚನೂರ (ಕೊರಕೊಪ್ಪ) ಗ್ರಾಮದ ಅಜ್ಜಪ್ಪ ಗುಡೆನ್ನವರ, ಕಟಕೋಳದ ಫುರ್ಖಾನ ರಂಜಾನ ಮುಲ್ಲಾ, ಯರಗಟ್ಟಿಯ ಹಣಮಂತ ದುರ್ಗಪ್ಪ ಭಜಂತ್ರಿ, ರಘು ಜಯವಂತ ಕಾರೆಪ್ಪನವರ, ವಿಶಾಲ ಅಶೋಕ ಯಡೂರ ಮತ್ತು ಯರಗಟ್ಟಿ ತಾಲೂಕಿನ ರೈನಾಪೂರದ ಅಲ್ತಾಪ ಮಾಬುಸಾಬ ನಧಾಪ ಎಂಬವರು ಬಂಧಿತರಾಗಿದ್ದಾರೆ.

ಬಂಧಿತರ ವಿರುದ್ಧ ಕಟಕೋಳ ಠಾಣೆಯಲ್ಲಿ 2 ಪ್ರಕರಣ, ಮುರಗೋಡ ಠಾಣೆಯಲ್ಲಿ 2 ಪ್ರಕರಣ, ಕುಲಗೋಡ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು, ಬೈಲಹೊಂಗಲ ಪೊಲೀಸ್ ರಾಣೆಯಲ್ಲಿ 1 ಪ್ರಕರಣ ಹಾಗೂ ಬಾಗಲಕೋಟ ಜಿಲ್ಲೆಯ ಬೀಳಗಿ ಠಾಣೆಯಲ್ಲಿ 2 ಪ್ರಕರಣ ಮತ್ತು ಕೆರೂರ ಠಾಣೆಯಲ್ಲಿ 1 ಪ್ರಕರಣ ಹೀಗೆ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಕಟಕೋಳ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳತನಕ್ಕೆ ಉಪಯೋಗಿಸಿದ ₹ 4 ಲಕ್ಷ ಮೌಲ್ಯದ ಕಾರ್‌, ₹2 ಲಕ್ಷ ಮೌಲ್ಯದ ಮತ್ತೊಂದು ಮತ್ತು ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾ.2 ರಂದು ರಾತ್ರಿ ತಾಲೂಕಿನ ತೋರಣಗಟ್ಟಿ ಗ್ರಾಮದ ಮಂಜುಳಾ ಚಂದ್ರಪ್ಪ ಗಣೇಲ್ಪಗೆ ಸಂಬಂಧಿಸಿದ ಕಟಕೋಳ-ಯರಗಟ್ಟಿ ರಸ್ತೆಯಲ್ಲಿರುವ ಜಮೀನಿನ ಶೆಡ್‌ದಲ್ಲಿನ 3 ಆಡುಗಳನ್ನು ಮತ್ತು ಚುಂಚನೂರ ಗ್ರಾಮದ ಮಲ್ಲಿಕಾರ್ಜುನ ಮಾರುತಿ ವಡೇಕನವರ ಇವರ ಚುಂಚನೂರ ಗ್ರಾಮದ ಹದ್ದಿಯಲ್ಲಿ ಕಟಕೋಳ-ಮುನವಳ್ಳಿ ರಸ್ತೆಯಲ್ಲಿನಲ್ಲಿರುವ ಜಮೀನದ ಶೆಡ್‌ದಲ್ಲಿ ಕಟ್ಟಿದ 2 ಮೇಕೆಗಳನ್ನು ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.