ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ 6 ಹಾಸ್ಟೆಲ್‌ ಮಂಜೂರು

| Published : Oct 31 2025, 02:45 AM IST

ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ 6 ಹಾಸ್ಟೆಲ್‌ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ ಎರಡರಂತೆ 62 ಮೆಟ್ರಿಕ್-ನಂತರದ ವಸತಿ ನಿಲಯ ಪ್ರಾರಂಭಿಸುವ ಆದೇಶ ಮಾಡಿತ್ತು.

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ತಾಲೂಕಿನ ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ ಬರೊಬ್ಬರಿ 6 ವಿದ್ಯಾರ್ಥಿ ನಿಲಯ ಮಂಜೂರಾಗಿವೆ. ಇದರಿಂದ ಬರೋಬ್ಬರಿ 600 ವಿದ್ಯಾರ್ಥಿಗಳಿಗೆ ವಸತಿ ಸಿಗಲಿದೆ.

ತಳಕಲ್ಲ ಇಂಜಿನಿಯರಿಂಗ್ ಕಾಲೇಜಿನಲ್ಲಿ 5 ಟ್ರೇಡ್ ಜರುಗುತ್ತಿದ್ದು, 1048 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಸದ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಸತಿ ನಿಲಯ ಖಾಸಗಿಯವರ ನೇತೃತ್ವದಲ್ಲಿ ಜರುಗುತ್ತಿದ್ದು. ಊಟಕ್ಕೆ ಹಣ ವಿದ್ಯಾರ್ಥಿಗಳು ಪಾವತಿಸಬೇಕಾಗಿದೆ. ವಿದ್ಯಾರ್ಥಿ ನಿಲಯಗಳಲ್ಲಿ ಊಟದ ಮೆಸ್ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದರಿಂದ ಪ್ರತಿ ವಿದ್ಯಾರ್ಥಿಗೂ ತಿಂಗಳಿಗೆ ₹ 4,500 ರಷ್ಟು ಭಾರವಾಗುತ್ತಿತ್ತು. ಆದರೆ ಈಗ ಈ ಹಾಸ್ಟೆಲ್‌ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೇರ ನಿರ್ವಹಣೆಗೆ ಸರ್ಕಾರ ನೀಡಿದೆ. ಇದರ ಫಲವಾಗಿ ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ ಸರಾಸರಿ ₹ 50,000 ರವರೆಗೆ ಆರ್ಥಿಕ ಹೊರೆ ಉಳಿತಾಯವಾಗಲಿದೆ.

ಸರ್ಕಾರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿ ಜಿಲ್ಲೆಗೆ ಎರಡರಂತೆ 62 ಮೆಟ್ರಿಕ್-ನಂತರದ ವಸತಿ ನಿಲಯ ಪ್ರಾರಂಭಿಸುವ ಆದೇಶ ಮಾಡಿತ್ತು. ಇವುಗಳ ಪೈಕಿ ಒಟ್ಟು 10 ಇಂಜಿನಿಯರಿಂಗ್ ವಸತಿ ನಿಲಯಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ 50: 50 ಅನುದಾನದ ಅನುಪಾತದಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಹ ಘೋಷಿಸಿತ್ತು.

ಸರ್ಕಾರದ ಭಾಷಣದ ಕಂಡಿಕೆ 204ರಲ್ಲಿ ಘೋಷಣೆ ಪ್ರಕಾರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗೆ ಎರಡರಂತೆ ಮೆಟ್ರಿಕ್-ನಂತರದ ವಸತಿ ನಿಲಯಗಳನ್ನು ಹುದ್ದೆಗಳ ಸೃಜನೆಯೊಂದಿಗೆ ಪ್ರಾರಂಭಿಸಲು ಮಂಜೂರಾತಿ ನೀಡಿ ಆದೇಶಿತ್ತು.

ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇಂಜಿನಿಯರ್ ಹಾಗೂ ಮೆಡಿಕಲ್ ಕಾಲೇಜು ಇಲ್ಲದ ಕಾರಣ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲೆ ತಳಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 300 ವಿದ್ಯಾರ್ಥಿ ಹಾಗೂ 300 ವಿದ್ಯಾರ್ಥಿನಿಯರಿಗೆ ಅವಶ್ಯಕವಿರುವ ವಸತಿ ಕಲ್ಪಿಸಲು ಮರು ಮಂಜೂರಾತಿ ನೀಡಿ ವಸತಿ ನಿಲಯ ಒದಗಿಸಿದ್ದಾರೆ.

ತಳಕಲ್ಲಿ ಇಂಜಿನಿಯರ್ ಕಾಲೇಜಿನಲ್ಲಿ ಸುಮಾರು 600 ಇಂಜಿನಿಯರ್ ವಿದ್ಯಾರ್ಥಿಗಳು ವಸತಿ ಇರಲು ಅವಕಾಶ ಇದ್ದು, ತಳಕಲ್ಲ ಇಂಜಿನಿಯರ್ ಕಾಲೇಜಿಗೆ ವಸತಿ ನಿಲಯ ಮಂಜೂರು ಮಾಡಲು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು, ಇದರಿಂದ ಇಲಾಖೆ ತಳಕಲ್ ಇಂಜಿನಿಯರಿಂಗ್ ಕಾಲೇಜು ಇಲ್ಲಿ 300 ವಿದ್ಯಾರ್ಥಿ ಹಾಗೂ 300 ವಿದ್ಯಾರ್ಥಿನಿಯರಿಗೆ ಅವಶ್ಯಕವಿರುವ ಕೊಠಡಿ, ಅಗತ್ಯ ಮೂಲಸೌಕರ್ಯ ಸಹ ಇದ್ದು ವಸತಿ ನಿಲಯ ಮಂಜೂರಾತಿ ನೀಡಿ ಆದೇಶಿಸಿದ್ದಾರೆ.

600 ವಿದ್ಯಾರ್ಥಿಗಳಿಗೆ ಅನುಕೂಲ: ಅನ್ಯ ಜಿಲ್ಲೆಗಳಲ್ಲಿ ಉಳಿಕೆಯಾಗುವ ವಿದ್ಯಾರ್ಥಿ ನಿಲಯ ಮರು ಹಂಚಿಕೆ ಮಾಡುವ ಮೂಲಕ ತಲಾ 100 ಸಂಖ್ಯಾಬಲದ 3 ಬಾಲಕರ ಮತ್ತು 3 ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ತಳಕಲ್ ಇಂಜಿನಿಯರಿಂಗ್ ಕಾಲೇಜಿಗೆ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ.

ತಳಕಲ್ಲ ಇಂಜಿನಿಯರಿಂಗ್ ಕಾಲೇಜಿಗೆ 3 ಬಾಲಕರ, 3 ಬಾಳಕಿಯರ ವಸತಿ ನಿಲಯ ಮಂಜೂರಾಗಿದೆ. ಇದರಿಂದ 600 ಬಡ ವಿದ್ಯಾರ್ಥಿಗಳಿಗೆ ವಸತಿ ಸಹಿತ ಇಂಜಿನಿಯರಿಂಗ್ ಅಭ್ಯಾಸ ಮಾಡುವ ಅವಕಾಶ ಸಿಗಲಿದೆ. ಶೈಕ್ಷಣೀಕರ ಅಭಿವೃದ್ಧಿಗೆ ವಸತಿ ನಿಲಯಗಳು ಭದ್ರ ಬುನಾದಿ ಆಗಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗು ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಇಂಜಿನಿಯರ್ ಕಾಲೇಜಿನಲ್ಲಿ ಖಾಸಗಿಯವರ ನೇತೃತ್ವದಲ್ಲಿ ವಸತಿ ನಿಲಯ ಜರುಗುತ್ತಿತ್ತು. ಇದಕ್ಕೆ ವಿದ್ಯಾರ್ಥಿಗಳು ಹಣ ನೀಡಬೇಕಿತ್ತು. ಸರ್ಕಾರದಿಂದ ವಸತಿ ನಿಲಯ ಮಂಜೂರಾಗಿರುವುದು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.

ಎಂದು ತಳಕಲ್ಲ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ವಿರೇಶ ಬಾಗೋಡಿ ತಿಳಿಸಿದ್ದಾರೆ.