ಜ.15ರಿಂದ ಎಂಜಿನಿಯರಿಂಗ್ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 6 ತಿಂಗಳ ಕಡ್ಡಾಯ ಇಂಟರ್ನ್ ಶಿಪ್ ಆರಂಭವಾಗಲಿದೆ. ಇದಕ್ಕಾಗಿ 1,500 ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿದ್ಯಾಶಂಕರ್ ಹೇಳಿದ್ದಾರೆ.
- 1500 ಕೈಗಾರಿಕೆ ಜತೆ ಒಪ್ಪಂದ: ಕಾರ್ಯಾಗಾರದಲ್ಲಿ ವಿಟಿಯು ಕುಲಪತಿ ಡಾ.ವಿದ್ಯಾಶಂಕರ್
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜ.15ರಿಂದ ಎಂಜಿನಿಯರಿಂಗ್ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 6 ತಿಂಗಳ ಕಡ್ಡಾಯ ಇಂಟರ್ನ್ ಶಿಪ್ ಆರಂಭವಾಗಲಿದೆ. ಇದಕ್ಕಾಗಿ 1,500 ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿದ್ಯಾಶಂಕರ್ ಹೇಳಿದರು.ವಿಶ್ವವಿದ್ಯಾಲಯ ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಅಮೃತ ಮಹೋತ್ಸವ ಸಂಭ್ರಮಾಚಾರಣೆ ಅಂಗವಾಗಿ ಮಾಹಿತಿ ವಿಜ್ಞಾನ ಸಂಶೋಧನೆ ಕುರಿತು ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತದಲ್ಲಿ ಶೇ.65ರಷ್ಟು ಯುವಜನರಿದ್ದಾರೆ. ಅವರನ್ನು ಜಾಗತಿಕ ಮಟ್ಟದ ಸಂಶೋಧಕರನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಕ್ವಾಂಟಮ್, ಎ.ಐ., ಸೆಮಿಕಂಡಕ್ಟರ್, ಸ್ಟೇಸ್ ಮತ್ತು ಬಯೊಟೇಕ್ನಾಲಾಜಿ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತದೆ. ಈಗಾಗಲೇ ಎಂ.ಟೆಕ್. ಕ್ವಾಂಟಮ್ ಕೋರ್ಸ್ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕೆ ಅಧಾರಿತ ಇನ್ನು 10 ಹೊಸ ಎಂ.ಟೆಕ್ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಪ್ರತಿವರ್ಷ ಪಠ್ಯಕ್ರಮ ಪರಿಷ್ಕರಿಸಲಾಗುವುದು ಎಂದು ತಿಳಿಸಿದರು.ಸಂಶೋಧನೆ ಮತ್ತು ಶೈಕ್ಷಣಿಕ ವಿನಿಮಯಕ್ಕೆ ಜಪಾನ್ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ವಿಟಿಯು ಉತ್ಸುಕವಾಗಿದೆ. ಜಪಾನಿನ ಪ್ರಾಧ್ಯಾಪಕರು ಬೆಳಗಾವಿಯ ವಿಟಿಯು ಮುಖ್ಯ ಕಚೇರಿಗೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಜಪಾನಿನ ಕಗೋಶಿಮಾ ಯಮಗುಚಿ ಯೂನಿವರ್ಸಿಟಿಯ ಪ್ರೊ.ತೊಶಿನೊಬು ಯಮಗುಚಿ ಮಾತನಾಡಿ, ಕಳೆದ ಮಾರ್ಚಿನಲ್ಲಿ ಜಪಾನ್‌ನಲ್ಲಿ ನಡೆದ ಮೊದಲ ಸಿಂಪೋಸಿಯಂನ ಮುಂದುವರಿದ ಭಾಗವಾಗಿ ಇಂದು ಭಾರತದಲ್ಲಿ ಈ ವೇದಿಕೆ ಸಿದ್ಧಗೊಂಡಿರುವುದು ಸಂತಸದ ವಿಷಯ. ಇದು ಸಂಶೋಧಕರಿಗೆ ಜಾಗತಿಕ ವೇದಿಕೆ ಒದಗಿಸಲಿದೆ ಎಂದರು.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅಧ್ಯಕ್ಷ ಪ್ರೊ. ಟಿ.ಜಿ.ಸೀತಾರಾಮ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಉದ್ಯೋಗ ಆಕಾಂಕ್ಷಿಗಳಾಗದೇ ಉದ್ಯೋಗ ಸೃಷ್ಠಿಕರ್ತರಾಗಿ ಬೆಳೆಯಬೇಕು ಎಂದು ಕರೆ ನೀಡಿದರು. ಕಾರ್ಯಾಗಾರ ಉದ್ಘಾಟನೆ ಸಮಾರಂಭದಲ್ಲಿ ವರ್ಚ್ಯುಯಲ್ ಮೂಲಕ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣವು ಪಠ್ಯಾಧಾರಿತ ಕಲಿಕೆಯಿಂದ ಸಾಮರ್ಥ್ಯ ಆಧಾರಿತ ಕಲಿಕೆಗೆ ಬದಲಾಗಬೇಕು. ತಂತ್ರಜ್ಞಾನ ಜೊತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಶ್ರಮಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಪಾನ್‌ನ ಕಗೋಶಿಮಾ ಮತ್ತು ಕುರುಮೆ ತಾಂತ್ರಿಕ ಸಂಸ್ಥೆಗಳ ಸಹಯೋಗದೊಂದಿಗೆ ಈ ವಿಚಾರಗೋಷ್ಠಿ ನಡೆಯುತ್ತಿರುವುದು ಸಂತಸದ ವಿಷಯ. ಆದರೆ, ಜಪಾನ್‌ನೊಂದಿಗೆ ಕೇವಲ ಸಮ್ಮೇಳನ ನಡೆಸದೆ "ಜಂಟಿ ಸಂಶೋಧನಾ ಕೇಂದ್ರ ದ್ವಿ-ಪದವಿ " ಕಾರ್ಯಕ್ರಮಗಳನ್ನು ಆರಂಭಿಸುವಂತೆಯೂ ತಿಳಿಸಿದರು.ಕಾಲೇಜಿನ ಇತಿಹಾಸ ಮೆಲುಕು ಹಾಕಿದ ಪ್ರೊ.ಸೀತಾರಾಮ್, 1951ರಲ್ಲಿ ಕಾಲೇಜು ಸ್ಥಾಪನೆಗೆ ಜಾಗ ನೀಡಿದ ಬ್ರಹಮ್ಮ ದೇವೇಂದ್ರಪ್ಪ ತವನಪ್ಪನವರ್ ಅವರ ದೂರದೃಷ್ಠಿಯೇ ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಕಾರಣ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿಜ್ಞಾನಿಗಳಾಗಿ, ಜನಪ್ರತಿನಿಧಿಗಳಾಗಿ ಮಿಂಚುತ್ತಿರುವುದು ಕಾಲೇಜಿನ ಸಾಧನೆಗೆ ಸಾಕ್ಷಿ ಎಂದು ಶ್ಲಾಘಿಸಿದರು.
ಆಪಾನ್‌ಕುರುಮೇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ.ಶುಹೈಚಿತೋರಿ, ಕಗೋಶಿಮಾ ವಿವಿಯ ಪ್ರೊ.ಸತೊಯುಕಿತನಾಕ, ಡಾ.ರವಿರಾಜ ಮೂಲಂಗಿ, ಡಾ.ಮಂಜನಾಯ್ಕ ಉಪಸ್ಥಿತರಿದ್ದರು. ಡಾ. ಸಿ.ಎಂ.ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ.ನಾಗರಾಜಪ್ಪ ಸ್ವಾಗತಿಸಿದರು. ಡಾ. ಎಂ.ಎಚ್. ದಿವಾಕರ್ ವಂದಿಸಿದರು.- - -
-18ಕೆಡಿವಿಜಿ37:ದಾವಣಗೆರೆಯ ಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅತಿಥಿಗಳನ್ನು ಗೌರವಿಸಲಾಯಿತು.