ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್/ ತುಮಕೂರು
ಜಲಾಶಯದ ಹಿನ್ನೀರಿನಲ್ಲಿ ಆಡುವ ವೇಳೆ ರಭಸವಾಗಿ ನೀರು ಹರಿದ ಪರಿಣಾಮ 6 ಮಂದಿ ಕೊಚ್ಚಿ ಹೋಗಿದ್ದು ಈ ಪೈಕಿ ಇಬ್ಬರ ಶವ ಪತ್ತೆಯಾಗಿರುವ ಘಟನೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಮಂಗಳವಾರ ನಡೆದಿದೆ.ತುಮಕೂರಿನ ಬಿ.ಜಿ.ಪಾಳ್ಯದ ಅರ್ಬಿನ್ (20) ಹಾಗೂ ಸಾದಿಯಾ (25) ಅವರ ಮೃತದೇಹ ಸಿಕ್ಕಿದ್ದು ತಬಸುಮ್ (45), ಶಬಾನಾ (44), ನಿಫ್ರಾ (4), ಮಹಿಬ್ (1) ಅವರಿಗಾಗಿ ಶೋಧ ಮುಂದುವರಿದಿದೆ. ಘಟನೆಯಲ್ಲಿ ಬಷೀರ್ (18), ನವಾಜ್ (32) ಹಾಗೂ ಮೋಸಿನ್ (35) ಅವರು ಪ್ರಾಣಾಪಾಯದಿಂದ ಪಾರಾಗಿದ್ದು ನಾಗಮಂಗಲದ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಹಿನ್ನೆಲೆ:ನತದೃಷ್ಟರೆಲ್ಲರೂ ಕುಣಿಗಲ್ ತಾಲೂಕು ಯಡಿಯೂರು ಹೋಬಳಿ ಮಾಗಡಿಪಾಳ್ಯದ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಯಲ್ಲಿ ಊಟ ಮಾಡಿಕೊಂಡು ಜಲಾಶಯಕ್ಕೆ ಹೋಗಿ ಆಟವಾಡುವಾಗ ಕಾಲುವೆಗಳಿಗೆ ನೀರು ಹರಿಸುವ ಗೇಟ್ ತೆರೆದ ಕಾರಣ ರಭಸವಾಗಿ ನೀರು ಹರಿದಿದೆ. ಈ ಪರಿಣಾಮ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಎರಡು ಶವಗಳನ್ನು ಮಾತ್ರ ಹೊರ ತೆಗೆಯಲಾಗಿದ್ದು ಕತ್ತಲಾದರಿಂದ ಬುಧವಾರ ಮತ್ತೆ ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗಡಿ ವಿವಾದದ ಗೊಂದಲ:
ಘಟನೆ ನಡೆದ ಸ್ಥಳ ನಾಗಮಂಗಲ ಹಾಗೂ ಕುಣಿಗಲ್ ಗಡಿ ಭಾಗಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶವಾಗಿದ್ದು ಘಟನೆ ಕಾರ್ಯಾಚರಣೆ ಸಂದರ್ಭದಲ್ಲಿ ತುಮಕೂರು ಮತ್ತು ಮಂಡ್ಯ ಪೊಲೀಸ್ ಅಧಿಕಾರಿಗಳ ನಡುವೆ ಕೆಲಕಾಲ ಸಮನ್ವಯದ ಕೊರತೆ ಉಂಟಾಗಿತ್ತು. ಕೇಸ್ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರ:ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ 8 ಮಂದಿ ನೀರಿನಲ್ಲಿ ಕೊಚ್ಚಿಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳ ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪ್ರಕರಣ ಹಸ್ತಾಂತರಗೊಂಡ ಬಳಿಕ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಜಿ.ಆದರ್ಶ, ಡಿವೈಎಸ್ ಪಿ ಬಿ.ಚಲುವರಾಜು, ಸಿಪಿಐ ನಿರಂಜನ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.