ಕನ್ನಡಪ್ರಭ ವಾರ್ತೆ ಗುಬ್ಬಿ
ಬೆಂಗಳೂರು- ತುಮಕೂರು ಮಾರ್ಗದ ನಾಲ್ಕು ಪಥಗಳ ರೈಲ್ವೆ ಕಾಮಗಾರಿಗೆ 6000 ಕೋಟಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಇದು ಸಭೆಯಲ್ಲಿ ಅನುಮೋದನೆಗೊಂಡ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. ತಾಲೂಕಿನ ಕಳ್ಳಿಪಾಳ್ಯ ಗ್ರಾಮದಲ್ಲಿ 10.86 ಕೋಟಿ ರು. ವೆಚ್ಚದ ರೈಲ್ವೆ ಕೆಳಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಜನರು ತುಮಕೂರು ಕಡೆ ಮುಖ ಮಾಡುತ್ತಿದ್ದಾರೆ. ಇಲ್ಲಿನ ರೈತರು ಯಾವುದೇ ಕಾರಣಕ್ಕೂ ಜಮೀನುಗಳನ್ನು ಮಾರಾಟ ಮಾಡದೆ ಉಳಿಸಿಕೊಳ್ಳಲು ಹೇಳಿದರು. ತುಮಕೂರಿನ ರೈಲ್ವೆ ನಿಲ್ದಾಣಕ್ಕೆ 100 ಕೋಟಿ ಅನುದಾನ ಬಿಡುಗಡೆ ಆಗಿದ್ದು, ಹೈಟೆಕ್ ರೈಲ್ವೆ ನಿಲ್ದಾಣವಾಗಲಿದೆ. ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗಾ ಶ್ರೀ ಹೆಸರನ್ನು ಇಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕರ್ನಾಟಕದಲ್ಲಿ 2 ಕೋಟಿಗೂ ಹೆಚ್ಚು ಅನುದಾನ ತಂದು 61 ಕಡೆ ನವೀಕರಣ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ತುಮಕೂರು ಜಿಲ್ಲೆಯ ಎಲ್ಲಾ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಮುಗಿದ ನಂತರ ಪ್ರಧಾನಮಂತ್ರಿಯವರನ್ನು ಜಿಲ್ಲೆಗೆ ಆಹ್ವಾನಿಸಿ ಅಭಿವೃದ್ಧಿ ಕೆಲಸವನ್ನು ವೀಕ್ಷಣೆ ಮಾಡುವಂತೆ ಪ್ರಯತ್ನ ಮಾಡುತ್ತೇನೆ. ಅವರು ಜಿಲ್ಲೆಗೆ ಬಂದರೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ.ಕೆಳ ಸೇತುವೆಯ ನಿರ್ಮಾಣದಿಂದ ಕಳ್ಳಿಪಾಳ್ಯ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸುರಕ್ಷಿತ ಮತ್ತು ತಡೆರಹಿತ ರಸ್ತೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಸಂಸದರಾಗಿ ಏನೆಲ್ಲ ಮಾಡಬಹುದು ಎಂದು ತೋರಿಸಿದ ವ್ಯಕ್ತಿ ಸೋಮಣ್ಣ. ಇದುವರೆಗೆ ಸಂಸದರಾದವರು ಈ ಮಟ್ಟಿಗೆ ಕೆಲಸ ಮಾಡಿರಲಿಲ್ಲ. ತಾಲೂಕಿನಲ್ಲಿ ಬಹುತೇಕ ರೈಲ್ವೆ ಇಲಾಖೆ ವತಿಯಿಂದ ರೈಲ್ವೆ ಕಾಮಗಾರಿಗಳು ಅಭಿವೃದ್ಧಿ ಕಾರ್ಯವಾಗಿದೆ. ಅಭಿವೃದ್ಧಿ ವಿಚಾರಕ್ಕೆ ಬಂದರೆ ಸೋಮಣ್ಣ ಹಿಡಿದ ಕೆಲಸ ಮಾಡದೇ ಬಿಡದ ವ್ಯಕ್ತಿ. ಮುಂದಿನ ದಿನಗಳಲ್ಲಿ ಅವರ ಋಣವನ್ನು ತೀರಿಸುವ ಕೆಲಸ ಮಾಡಬೇಕಿದೆ. ತಾಲೂಕಿನಲ್ಲಿ 80 ರಿಂದ 90 ಕೋಟಿ ಅನುದಾನವನ್ನು ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ವಿ.ಸೊಮಣ್ಣ ಹಾಕಿದ್ದಾರೆ. ತಾಲೂಕಿನಲ್ಲಿ 135 ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಹಾಗಲವಾಡಿ, ನಿಟ್ಟೂರು, ಸಿ ಎಸ್ ಪುರ ಭಾಗದಲ್ಲಿ ನಿರ್ಮಾಣ ಮಾಡಿದ್ದು ಅಂತರ್ಜಲ ವೃದ್ಧಿ ಹೆಚ್ಚಾಗಲು ಸಹಕಾರಿಯಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಇನ್ನಷ್ಟು ಚೆಕ್ ಡ್ಯಾಮ್ ನಿರ್ಮಾಣ ಮಾಡಲು ಸಹಕಾರ ನೀಡಿದರೆ ತಾಲೂಕಿನಲ್ಲಿ ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರತಿ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ್, ಮುಖಂಡರಾದ ದಿಲೀಪ್ ಕುಮಾರ್, ಚಂದ್ರಶೇಖರ್, ಕಳ್ಳಿಪಾಳ್ಯ ಲೋಕೇಶ್ ಇತರರಿದ್ದರು.