ಕಸ್ತೂರಿ ರಂಗನ್‌ ವರದಿಗೆ 6 ಬಾರಿ ನೋಟಿಫಿಕೇಷನ್‌: ಡಾ.ಕೆ.ಪಿ.ಅಂಶುಮಂತ್ ಆತಂಕ

| Published : Nov 04 2024, 12:32 AM IST

ಸಾರಾಂಶ

ನರಸಿಂಹರಾಜಪುರ, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾದ ಕಸ್ತೂರಿ ರಂಗನ್ ವರದಿ 2014 ರಿಂದ ಇಲ್ಲಿಯವರೆಗೆ 6 ಬಾರಿ ನೋಟಿಫಿಕೇಶನ್‌ ಆಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಶಿವಮೊಗ್ಗದ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿದೆ । ಬಿಜೆಪಿ ಕೇಂದ್ರದ ಮೇಲೆ ಒತ್ತಡ ತಂದು ವರದಿ ಜಾರಿಯಾಗದಂತೆ ನೋಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾದ ಕಸ್ತೂರಿ ರಂಗನ್ ವರದಿ 2014 ರಿಂದ ಇಲ್ಲಿಯವರೆಗೆ 6 ಬಾರಿ ನೋಟಿಫಿಕೇಶನ್‌ ಆಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಶಿವಮೊಗ್ಗದ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜನರಿಗೆ ತೊಂದರೆ ಯಾಗಬಾರದು ಎಂಬ ದೃಷ್ಟಿಯಿಂದ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ಮಾಡಿ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕಾರ ಮಾಡಿದೆ. ಆದರೆ, ಬಿಜೆಪಿ ಯವರಿಗೆ ಬದುಕಿಗೆ ಸಂಬಂಧಪಟ್ಟ ವಿಚಾರ ಬೇಕಾಗಿಲ್ಲ. ಕೇಂದ್ರಕ್ಕೆ ಕಸ್ತೂರಿ ರಂಗನ್‌ ವರದಿ ಹೋದಾಗ ಬಿಜೆಪಿ ಸಂಸದರು, ಬಿಜೆಪಿ ಮುಖಂಡರು ಕೇಂದ್ರದ ಮೇಲೆ ಒತ್ತಡ ತಂದು ಕಸ್ತೂರಿ ರಂಗನ್‌ ವರದಿ ತಡೆ ಹಿಡಿಯಬಹುದಿತ್ತು. ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಮುಖಂಡ ಸಿ.ಟಿ.ರವಿ ಕಸ್ತೂರಿ ರಂಗನ್ ವರದಿ ಜಾರಿ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಕೇರಳ ಮಾದರಿಯಲ್ಲಿ ಕಸ್ತೂರಿ ರಂಗನ್ ವರದಿಯಲ್ಲಿ ಜನ ವಸತಿ ಜಾಗ ಬಿಡಬೇಕು ಎಂದು ಒತ್ತಾಯಿಸಿದರು.

ಬಿಎಸ್‌ಎನ್‌ಎಲ್ ಮಾರಾಟ: ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌ ಮಾರಾಟ ಮಾಡುತ್ತಿದ್ದಾರೆ ಎಂದು ಡಾ.ಕೆ.ಪಿ. ಅಂಶುಮಂತ್ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ಬಿಎಸ್‌ಎನ್‌ಎಲ್‌ ಟವರ್‌ ಕರೆಂಟು ಹೋದಕೂಡಲೇ ಆಫ್‌ ಆಗುತ್ತಿದೆ. ಜನರೇಟರ್‌ ಗೆ ಡೀಸೆಲ್‌ ನೀಡುತ್ತಿಲ್ಲ. ಕೇವಲ ಒಬ್ಬ ವ್ಯಕ್ತಿಗೆ ಕೇಂದ್ರ ಸರ್ಕಾರದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಎಲ್ಲಾ 5 ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಏರಿಸಿದೆ. ನೀಟ್‌ ಪರೀಕ್ಷೆಯಲ್ಲೂ ಅವ್ಯವಹಾರ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಜ್ವಲಂತ ಸಮಸ್ಯೆ ಇದೆ. ಅರಣ್ಯ ಒತ್ತುವರಿ ಸಮಸ್ಯೆ, 4- ನೋಟಿಫಿಕೇಷನ್ ಸಮಸ್ಯೆ ಇದೆ. ಶೋಭಾ ಕರಂದ್ಲಾಜೆ 10 ವರ್ಷ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಸಂಸದರಾಗಿದ್ದರೂ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಈಗಿನ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಜಿಲ್ಲೆ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಇ.ಸಿ.ಜೋಯಿ, ಬಿಳಾಲುಮನೆ ಉಪೇಂದ್ರ, ಬೆನ್ನಿ,ಕೆ.ಎ.ಅಬೂಬಕರ್‌, ಎಚ್‌.ಎಂ.ಶಿವಣ್ಣ, ಸುರೈಯಾಭಾನು ಮತ್ತಿತರರು ಇದ್ದರು.