ಸಾರಾಂಶ
ತಿಪಟೂರು: ಪದವಿ ಮುಗಿದ ತಕ್ಷಣ ಕೆಲಸ ಸಿಕ್ಕೇ ಬಿಟ್ಟಿತು ಎಂಬ ಭಾವನೆ ವಿದ್ಯಾರ್ಥಿಗಳಿಂದ ದೂರವಾಗಬೇಕಿದ್ದು, ಭಾರತದಲ್ಲಿ ಪ್ರತಿ ವರ್ಷ ಪದವಿ ಮುಗಿಸಿ ಹೊರ ಬರುತ್ತಿರುವ ಪದವೀಧದರರಲ್ಲಿ ಶೇ.60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ನಡೆದ ೩ನೇ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ ಉದ್ಯಮದ ಅವಶ್ಯಕತೆಗಳಿಗೂ ವಿದ್ಯಾಸಂಸ್ಥೆಗಳಿಂದ ಪಡೆಯುತ್ತಿರುವ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಆದ್ದರಿಂದ ನೂರಕ್ಕೆ ತೊಂಬತ್ತೊಂಬತ್ತು ಅಂಕ ಪಡೆದರೆ ಕೆಲಸ ಸಿಕ್ಕೇ ಬಿಡುತ್ತದೆ ಎಂದುಕೊಳ್ಳುವುದು ತಪ್ಪು. ಇಂದಿನ ಉದ್ಯಮಕ್ಕೆ ಅವಶ್ಯಕತೆಯಿರುವ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಉದ್ಯೋಗ ಲಭಿಸಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವ ತಯಾರಿಯಾಗುವ ಜೊತೆಗೆ ಅನುಭವವೂ ಮುಖ್ಯವಾಗಿರುತ್ತದೆ. ಶಿಕ್ಷಣದ ಜೊತೆಗೆ ತಾಂತ್ರಿಕತೆಯ ಕೌಶಲ್ಯ ಮುಖ್ಯವಾಗಿದ್ದು, ಉದ್ಯೋಗವಕಾಶಕ್ಕೆ ದಾರಿದೀಪವಾಗಲಿದೆ ಎಂದು ಸಲಹೆ ನೀಡಿದರು.೨೧ನೇ ಶತಮಾನ ನಾವಿನ್ಯತೆಯ ಕಾಲ. ಯಾರ ಯೋಚನೆ ನವೀನವಾಗಿರುತ್ತದೆ ಅದಕ್ಕೆ ಮನ್ನಣೆ ಸಿಗುತ್ತದೆ. ನಮ್ಮ ನಾವಿನ್ಯತೆ ದೇಶದ ಅಗತ್ಯಗಳನ್ನು ಪೂರೈಸುವಂತಿರಬೇಕು. ದೇಶದ ಜನರಿಗೆ ಅದರಿಂದ ಅನುಕೂಲಗಳು ಸಿಗಬೇಕು. ಆಗ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ ಸಿಗುತ್ತದೆ ಎಂದ ಅವರು, ಯಾವುದೇ ದೇಶಕ್ಕೆ ಹೋದರೂ ಭಾರತದ ಪ್ರಗತಿಯನ್ನು, ತಮಗೆ ವಿದ್ಯೆ ನೀಡಿದ ಕಾಲೇಜು ಹಾಗೂ ಕಷ್ಟಪಟ್ಟು ತಮ್ಮನ್ನು ಓದಿಸಿದ ತಮ್ಮ ತಂದೆ, ತಾಯಿಯನ್ನು ಮರೆಯಬಾರದು ಎಂದದರು.
ಕಲ್ಪತರು ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಇದು ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಯುಗವಾಗಿದ್ದು, ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಕಲಿಕೆಗೆ ಹೆಚ್ಚು ಒತ್ತು ನೀಡಬೇಕೆಂಬ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಮ್ಮಲ್ಲಿ ಆಯೋಜಿಸಿಕೊಂಡು ಬರುತ್ತಿದ್ದೇವೆ. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.ಇದೇ ವೇಳೆ ಕಾಲೇಜಿನ ಟಾಪರ್‌ಗಳಾದ ಕಂಪ್ಯೂಟರ್ ಸೈನ್ಸ್‌ನ ಪ್ರಜ್ವಲ್, ಇನ್‌ಫರ್‌ಮೇಷನ್ ಸೈನ್ಸ್ ವಿಭಾಗದ ಸುಷ್ಮ, ಎಲೆಕ್ಟ್ರಾನಿಕ್ಸ್‌ನ ಆಕರ್ಷ್ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರವೀಣ್‌ರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ನಂತರ ಸಂಸ್ಥೆಯಿಂದ ಪದವಿ ಪಡೆದು ಹೊರಬರುತ್ತಿರುವ ಎಲ್ಲ ವಿಭಾಗದ ೨೩೯ ವಿದ್ಯಾರ್ಥಿಗಳಿಗೂ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದಶಿಗಳಾದ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶ್‌ಮೂರ್ತಿ, ಖಜಾಂಚಿ ಟಿ.ಎಸ್.ಶಿವಪ್ರಸಾದ್, ಪ್ರಾಂಶುಪಾಲ ಜಿ.ಡಿ.ಗುರುಮೂರ್ತಿ, ದಾವಣಗೆರೆ ಯುಬಿಡಿಟಿ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಧರ್ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಉಪಸ್ಥಿತರಿದ್ದರು.