ಕುಡಿವ ನೀರಿನ ಸಮಸ್ಯೆ ಆಗಬಹುದಾದ 62 ಗ್ರಾಮ ಗುರುತು

| Published : Mar 20 2024, 01:18 AM IST

ಕುಡಿವ ನೀರಿನ ಸಮಸ್ಯೆ ಆಗಬಹುದಾದ 62 ಗ್ರಾಮ ಗುರುತು
Share this Article
  • FB
  • TW
  • Linkdin
  • Email

ಸಾರಾಂಶ

ಸುರಪುರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ತಹಸೀಲ್ದಾರ್ ಕೆ. ವಿಜಯಕುಮಾರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನಲ್ಲಿ ಬೇಸಿಗೆ ಆರಂಭವಾಗಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಇತರೆ ಸೌಕರ್ಯಗಳ ತೊಂದರೆಗೆ ಪರಿಹಾರ ಒದಗಿಸಲು ತಾಲೂಕಾಡಳಿತ ಸಿದ್ಧವಿದೆ ಎಂದು ತಹಸೀಲ್ದಾರ್ ಕೆ. ವಿಜಯಕುಮಾರ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕುಡಿಯುವ ನೀರು ಮತ್ತು ಮೌಲಸೌಲಭ್ಯಗಳಿಗೆ ಪರಿಹಾರ ಒದಗಿಸುವ ತಾಲೂಕುಮಟ್ಟದ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುರಪುರ ತಾಲೂಕು ಸಾಧಾರಣ ಬರಗಾಲಕ್ಕೆ ಒಳಪಟ್ಟಿದೆ. ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದಾದ 62 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.

ತಾಲೂಕಿನಲ್ಲಿ ಕೊಳವೆಬಾವಿಗಳನ್ನು ಅವಶ್ಯಕತೆ ಅನುಗುಣವಾಗಿ ಕೊರೆಸಲಾಗುವುದು. ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಇಲಾಖೆಯ ಅಧಿಕಾರಿಗಳ ಮೇಲಿದೆ. ಆದ್ದರಿಂದ ಕುಡಿಯುವ ನೀರಿನ ಟೆಂಡರ್ ಸಭೆಯಲ್ಲಿ ರಚಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ ಯಕ್ತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 12 ಗ್ರಾಮಗಳಲ್ಲಿ ನೀರಿನ ತೊಂದರೆಯಿದೆ. ಸೂಗೂರು-6, ದೇವತ್ಕಲ್-3, ತಿಂಥಣಿ-3, ಹೇಮನೂರು-2, ದೇವಿಕೇರಾ-2, ಅರೆಕೇರಾ ಜೆ-2, ಖಾನಾಪುರ ಎಸ್.ಎಚ್.-1, ದೇವರಗೋನಾ-3, ಪೇಠಾ ಅಮ್ಮಾಪುರ-3, ತಿಂಥಣಿ-3, ಆಲ್ದಾಳ-4, ಕಿರದಳ್ಳಿ-2, ಹೆಗ್ಗಣದೊಡ್ಡಿ-1, ಮಲ್ಲಾ ಬಿ-1, ವಾಗಣಗೇರಾ-3, ಕಚಕನೂರು-3, ಮಾಲಗತ್ತಿ-4, ಬಾದ್ಯಾಪುರ-3, ಏವೂರ-2, ಯಾಳಗಿ-2 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಅಭಾವ ಉಂಟಾಗಬಹುದು. ಆದ್ದರಿಂದ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಸೂಗೂರು ಗ್ರಾಪಂ ವ್ಯಾಪ್ತಿಯ ಚಂದ್ಲಾಪುರ ಹಾಗೂ ಕಿರದಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಿರದಳ್ಳಿ ತಾಂಡಾಕ್ಕೆ ಟ್ಯಾಂಕರ್ ಮೂಲಕ ಬಾಡಿಗೆ ನೀರು ಪೂರೈಸಲಾಗುತ್ತಿದೆ ಎಂದರು.

ನಗರಸಭೆ: ಸುರಪುರ ನಗರಸಭೆ ವ್ಯಾಪ್ತಿಯಲ್ಲಿ 53 ಲಕ್ಷ ಲೀಟರ್ ನೀರಿನ ಟೆಂಡರ್ ಮಾಡಲಾಗಿದೆ. 7070 ಟ್ರಿಪ್ ಟ್ಯಾಂಕರ್ ನೀರು ಪೂರೈಸಲಾಗುವುದು. ಒಬ್ಬ ವ್ಯಕ್ತಿಗೆ 15 ಲೀಟರ್ ನೀರಿನಂತೆ ದಿನಕ್ಕೆ 71 ಟ್ಯಾಂಕರ್ ನೀರು ಪೂರೈಸಲಾಗುತ್ತದೆ. ನಗರಸಭೆಯ ವಾರ್ಡ್-2, 5, 10, 12, 13, 16, 20, 21, 27, 28, 31 ಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಕಕ್ಕೇರಾ: ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ 19, 20, 23 ವಾರ್ಡ್‌ಳಲ್ಲಿ ನೀರಿನ ಅಭಾವ ತಲೆದೋರಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. 10 ವಾರ್ಡ್ಗಳಲ್ಲಿ ನೀರಿನ ಅಭಾವ ಉಂಟಾಗುವುದನ್ನು ಗುರುತಿಸಲಾಗಿದೆ. ಈ ಭಾಗದಲ್ಲಿ ದೊಡ್ಡಿಗಳು ಹೆಚ್ಚಾಗಿರುವುದರಿಂದ ಪೈಪ್‌ಗಳ ಅಗತ್ಯವಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಅಧಿಕಾರಿಗಳಾದ ನಗರ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಹನುಮಂತ ಪಾಟೀಲ್, ನಗರಸಭೆ ಪೌರಾಯುಕ್ತ ಶಾಂತಪ್ಪ, ಜೆಇಇ ಮಹೇಶ ಚವ್ಹಾಣ, ಕಕ್ಕೇರಾ ಪುರಸಭೆಯ ಪ್ರವೀಣಕುಮಾರ ಸೇರಿದಂತೆ ಇತರರಿದ್ದರು. ಕೆಂಭಾವಿಗೆ ಸಂಬಂಧಿಸಿದಂತೆ ಎಸ್ಕೇಪ್ ಗೇಟ್‌ಗಳಿಗೆ ಆರ್‌ಡಬ್ಲ್ಯಎಸ್, ಇಒ ಮತ್ತು ತಹಸೀಲ್ದಾರ್ ಭೇಟಿ ಪರಿಶೀಲಿಸಲಾಗಿದೆ. ಎಸ್ಕೇಪ್ ಗೇಟ್ ದುರಸ್ತಿಯಲ್ಲಿದ್ದು, ನೀರು ಪೋಲಾಗುತ್ತದೆ. ಇದನ್ನು ತಡೆಯಲು ಸಿಮೆಂಟ್ ಗೋಡೆ ನಿರ್ಮಿಸಲಾಗಿದೆ. ಇದನ್ನು ಸರಿಪಡಿಸಿದರೆ 12 ಹಳ್ಳಿಗಳಿಗೆ ನೀರು ದೊರೆಯಲಿದೆ.

- ವಿಜಯಕುಮಾರ, ತಹಸೀಲ್ದಾರ್.