ಶಕ್ತಿ ದೇವತೆ ಶ್ರೀಮಹಾಂಕಾಳೇಶ್ವರಿ ಅಮ್ಮನವರ 62ನೇ ವರ್ಷದ ಹೂವಿನ ಪಲ್ಲಕ್ಕಿ ಉತ್ಸವ

| Published : Nov 27 2024, 01:05 AM IST

ಶಕ್ತಿ ದೇವತೆ ಶ್ರೀಮಹಾಂಕಾಳೇಶ್ವರಿ ಅಮ್ಮನವರ 62ನೇ ವರ್ಷದ ಹೂವಿನ ಪಲ್ಲಕ್ಕಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದೇವಿ ಮಹಾ ಮಂಗಳಾರತಿ ಬಳಿಕ ಸೋಮವಾರ ರಾತ್ರಿ 10ಕ್ಕೆ ಶ್ರೀಮಹಾಂಕಾಳೇಶ್ವರಿ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಆವರಣದಿಂದ ಹೊರಟಿತು. ಉತ್ಸವ ಆರಂಭಕ್ಕೂ ಮೊದಲು ಸಿಡಿ ಮದ್ದುಗುಂಡುಗಳನ್ನು ಸಿಡಿಸಲಾಯಿತು. ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಿ.ವೈ.ಬಾಬು ಹಾಗೂ ಸದಸ್ಯರು ಉತ್ಸವ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ಪಟ್ಟಣದ ಶಾಂತಿನಗರದ ಶಕ್ತಿ ದೇವತೆ ಶ್ರೀಮಹಾಂಕಾಳೇಶ್ವರಿ ಅಮ್ಮನವರ 62ನೇ ವರ್ಷದ ಹೂವಿನ ಪಲ್ಲಕ್ಕಿ ಉತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.

ದೇವಿ ಮಹಾ ಮಂಗಳಾರತಿ ಬಳಿಕ ಸೋಮವಾರ ರಾತ್ರಿ 10ಕ್ಕೆ ಶ್ರೀಮಹಾಂಕಾಳೇಶ್ವರಿ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಆವರಣದಿಂದ ಹೊರಟಿತು. ಉತ್ಸವ ಆರಂಭಕ್ಕೂ ಮೊದಲು ಸಿಡಿ ಮದ್ದುಗುಂಡುಗಳನ್ನು ಸಿಡಿಸಲಾಯಿತು. ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಿ.ವೈ.ಬಾಬು ಹಾಗೂ ಸದಸ್ಯರು ಉತ್ಸವ ಚಾಲನೆ ನೀಡಿದರು.

ನಾಸಿಕ್ ಬ್ಯಾಂಡ್, ಕತ್ತಿ ವರಸೆ, ತಮಟೆ, ಸಾಕ್ಷೋಫೋನ್ ವಾದನ, ಕೀಲು ಕುದುರೆ ಸೇರಿದಂತೆ ಇತರೆ ಕಲಾ ತಂಡಗಳು ಉತ್ಸವಕ್ಕೆ ಮತ್ತಷ್ಟು ಮೆರಗನ್ನು ನೀಡಿದವು. ರಾತ್ರಿಯೀಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಹೂವಿನ ಪಲ್ಲಕ್ಕಿ ಉತ್ಸವವು ಮಾರನೇ ದಿನ ಮಂಗಳವಾರ ಮಧ್ಯಾಹ್ನ 2ಕ್ಕೆ ದೇವಸ್ಥಾನದ ಆವರಣಕ್ಕೆ ಬಂದು ತಲುಪುವ ಮೂಲಕ ಅದ್ಧೂರಿಯಾಗಿ ಮುಕ್ತಾಯಗೊಂಡಿತು.

ಈ ವೇಳೆ ಪಟ್ಟಣದ ವಿವಿಧ ಬೀದಿಗಳಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ ಉತ್ಸವವನ್ನು ಸಂಭ್ರಮದಿಂದ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಿದರು. ಜತೆಗೆ ದೇವರಿಗೆ ಭಕ್ತಿ ಭಾವವನ್ನು ಸಮರ್ಪಿಸಿದರು.

ದೇವಾಲಯದ ಆವರಣದಲ್ಲಿ ಮಹಾ ಮಂಗಳಾರತಿ, ತೀರ್ಥ ಪ್ರೋಕ್ಷಣೆ ಬಳಿಕ ಮಧ್ಯಾಹ್ನ 2.15ಕ್ಕೆ ಅನ್ನಸಂತರ್ಪಣೆ ಆರಂಭಗೊಂಡಿತು. ಸಾವಿರಾರು ಭಕ್ತರು ಭಾಗವಹಿಸಿ ದೇವರ ಪ್ರಸಾದ ಸ್ವೀಕಾರ ಮಾಡಿದರು. ವಿಜಯ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು ಶಿಬಿರಾಧಿಕಾರಿ ಎನ್.ಚಲುವೇಗೌಡ, ಎಂ.ಎಸ್.ಗುರುಸ್ವಾಮಿ ನೇತೃತ್ವದಲ್ಲಿ ದೇವಸ್ಥಾನದ ಅನ್ನ ಸಂತರ್ಪಣೆ ನಡೆಸಿದರು.