ಸಾರಾಂಶ
ಮೂಡುಬಿದಿರೆ ಸಮಾಜ ಮಂದಿರದಲ್ಲಿ 5 ದಿನಗಳ ಕಾಲ ನಡೆದ 62ನೇ ವರ್ಷದ ಗಣೇಶೋತ್ಸವ ಭಾನುವಾರ ಸಂಜೆ ವಿವಿಧ ಟ್ಯಾಬ್ಲೊಗಳೊಂದಿಗೆ ನಡೆದ ಶೋಭಾಯಾತ್ರೆಯೊಂದಿಗೆ ತೆರೆ ಕಂಡಿತು.
ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಸಮಾಜ ಮಂದಿರದಲ್ಲಿ 5 ದಿನಗಳ ಕಾಲ ನಡೆದ 62ನೇ ವರ್ಷದ ಗಣೇಶೋತ್ಸವ ಭಾನುವಾರ ಸಂಜೆ ವಿವಿಧ ಟ್ಯಾಬ್ಲೊಗಳೊಂದಿಗೆ ನಡೆದ ಶೋಭಾಯಾತ್ರೆಯೊಂದಿಗೆ ತೆರೆ ಕಂಡಿತು. ಇದೇ ಮೊದಲ ಬಾರಿಗೆ ಗಣಪತಿ ವಿಗ್ರಹ ಟ್ಯಾಬ್ಲೊಗಳ ಮಧ್ಯದಲ್ಲಿ ಸಾಗುವ ಮೂಲಕ ಗಮನ ಸೆಳೆಯಿತು.
ಕಳೆದ 61 ವರ್ಷಗಳಲ್ಲಿ ನಡೆದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯಲ್ಲಿ ಮೊದಲಿಗೆ ವಿವಿಧ ಸಾಂಸ್ಕೃತಿಕ ತಂಡಗಳು, ಹುಲಿ ವೇಷಗಳ ತಂಡಗಳು, ಚೆಂಡೆ ಕುಣಿತ, ಭಜನೆ ಕುಣಿತದ ತಂಡಗಳು ಮತ್ತು ಟ್ಯಾಬ್ಲೊಗಳ ತಂಡಗಳು ಸಾಗಿದ ನಂತರವೇ ಕೊನೆಯದಾಗಿ ಗಣಪತಿಯ ಸಾಗುತ್ತಿತ್ತು. ಆದರೆ ಈ ಬಾರಿ ವಿವಿಧ ರೀತಿಯ ಐದಾರು ಟ್ಯಾಬ್ಲೊಗಳು ಸಾಗಿದ ತಕ್ಷಣ ಮಧ್ಯದಲ್ಲಿಯೇ ಗಣಪತಿ ಸಾಗುವ ವ್ಯವಸ್ಥೆ ಮಾಡಲಾಗಿತ್ತು.ಮೆರವಣಿಗೆಯಲ್ಲಿ ಕೊರಗಪ್ಪ ಟೈಗರ್ಸ್, ಸರ್ವೋದಯ ಫ್ರೆಂಡ್ಸ್ ಬೆದ್ರ, ಪವರ್ ಫ್ರೆಂಡ್ಸ್ ಹಾಗೂ ಬೆದ್ರ ಫ್ರೆಂಡ್ಸ್ ನ ಹುಲಿವೇಷದ ತಂಡಗಳು ಗಮನ ಸೆಳೆದವು. ಸುಪ್ರಭಾತ ವಾಹನದೊಂದಿಗೆ ಆರಂಭಗೊಂಡ ಮೆರವಣಿಗೆಯಲ್ಲಿ ತಾಲೀಮ್, ನೇತಾಜಿ ಬ್ರಿಗೇಡ್ ತಂಡ, ಜೈ ಭೀಮ್, ತ್ರಿಶೂಲ್ ಫ್ರೆಂಡ್ಸ್ ಮೂಡುಬಿದಿರೆ ಇಲೆವೆನ್ ಕ್ರಿಕೆಟರ್ಸ್, ನಮನ ಫ್ರೆಂಡ್ಸ್ ಪುತ್ತಿಗೆ, ಫ್ರೆಂಡ್ಸ್ ಪುತ್ತಿಗೆ, ಲಾಡಿ ಬಾಯ್ಸ್, ದೊಡ್ಕನೆ ಫ್ರೆಂಡ್ಸ್ ಬೆದ್ರ, ಮಾರಿಗುಡಿ ಫ್ರೆಂಡ್ಸ್ ಮೂಡುಬಿದಿರೆ, ಕೋಟೆ ಬಾಗಿಲು ಫ್ರೆಂಡ್ಸ್, ಪೃಥ್ವಿ ಡೆವಲಪರ್ಸ್ ಹಾಗೂ ನ್ಯೂ ರವಿ ಇಂಡಸ್ಟ್ರೀಸ್ ಮೂಡುಬಿದಿರೆ ತಂಡಗಳ ಟ್ಯಾಬ್ಲೊಗಳು ಸಾರ್ವಜನಿಕರ ಗಮನ ಸೆಳೆದವು. ಈ ಬಾರಿ ಗಣೇಶನಿಗೆ ಅಧ್ಯಕ್ಷರೇ ಚಾಲಕ!: ಕಳೆದ ಹಲವು ವರ್ಷಗಳಿಂದ ಸಮಿತಿ ಕಾರ್ಯದರ್ಶಿಯಾಗಿದ್ದ ನಾರಾಯಣ ಪಿ.ಎಂ. ಗಣಪತಿಯನ್ನು ವಿಸರ್ಜಿಸಲು ಸಾಗಿಸುವ ವಾಹನಕ್ಕೆ ಚಾಲಕರಾಗಿದ್ದರು ಈ ವರ್ಷವೂ ಅವರೆ ವಾಹನ ಚಲಾಯಿಸಿದ್ದರೂ ಅವರು ಈ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಚಾಲಕರಾಗಿದ್ದರು.ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಹಾಗೂ ಸಿಬ್ಬಂದಿ ಸಂಚಾರ ದಟ್ಟಣೆ ನಿರ್ವಹಿಸಿದರು.ತ್ಯಾಜ್ಯವನ್ನು ರಾತ್ರಿಯೇ ಗುಡಿಸಿದ ಪೌರಕಾರ್ಮಿಕರುಭಾನುವಾರ ರಾತ್ರಿ ನಡೆದ ಮೂಡುಬಿದಿರೆ ಗಣಪತಿಯ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಪೇಟೆಯ ರಸ್ತೆಯಲ್ಲಿ ಬಿದ್ದಿರುವ ಕಸ, ತ್ಯಾಜ್ಯಗಳನ್ನು ಪೌರಕಾರ್ಮಿಕರು ರಾತ್ರಿಯೇ ಗುಡಿಸಿ ಸ್ವಚ್ಛಗೊಳಿಸುವ ಮೂಲಕ ಮೂಡುಬಿದಿರೆಯ ನಿಜವಾದ ಹೀರೋಗಳಾಗಿದ್ದಾರೆ.ಪೌರಕಾರ್ಮಿಕರು ಶೋಭಾಯಾತ್ರೆ ಸಾಗಿದ ನಂತರ ರಾತ್ರಿ ಎರಡು ಗಂಟೆವರೆಗೆ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೋಮವಾರ ಬೆಳಿಳಗ್ಗೆ ಸ್ವಚ್ಛ ಮೂಡುಬಿದಿರೆಯಾಗಿ ಕಾಣುವಂತೆ ಮಾಡಿ ಗಮನ ಸೆಳೆದಿದ್ದಾರೆ.ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ ಮತ್ತು ಮುಖ್ಯಾಧಿಕಾರಿ ಇಂದು ಎಂ. ಅವರು ಸ್ವಚ್ಛತೆಗೆ ಆದ್ಯತೆ ನೀಡುವಂತೆ ವ್ಯಾಪಾರಸ್ಥರಲ್ಲಿ ಮತ್ತು ಸಾರ್ವಜನಿಕರಲ್ಲಿ ಮನವಿ ಕೂಡಾ ಮಾಡಿದ್ದರು. ಇದು ಕೂಡಾ ಪೌರಕಾರ್ಮಿಕರಿಗೆ ಸ್ವಲ್ಪ ಮಟ್ಟಿಗೆ ಉಪಯೋಗವಾಗಿದೆ.