ಸಾರಾಂಶ
ಮತಿಘಟ್ಟ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ಕನ್ನಡಪ್ರಭ ವಾರ್ತೆ, ಕಡೂರುಕಡೂರು ವಿಧಾನಸಬಾ ಕ್ಷೇತ್ರದ ವ್ಯಾಪ್ತಿಯ 121 ಕಿಲೋ ಮೀಟರ್ ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು 63 ಕೋಟಿ ರು. ಅನುದಾನ ಬಿಡುಗಡೆಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಆನಂದ್ ಕೆ.ಎಸ್. ಹೇಳಿದರು.
ಕಡೂರು ಕ್ಷೇತ್ರದ ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಅಪೆಂಡಿಕ್ಸ್-ಇ ಶೀರ್ಷಿಕೆಯಡಿ ಮಂಜೂರಾಗಿರುವ 2 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಕಡೂರು ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸುಮಾರು 15 ಕೋಟಿ ರು. ಮಂಜೂರಾಗಿದ್ದು, ಈ ಅನುದಾನದಲ್ಲಿ ಕಡೂರು ಕ್ಷೇತ್ರದ ಜೋಡಿಲಿಂಗದಹಳ್ಳಿಯಿಂದ ಬಂಜೇನಹಳ್ಳಿ, ಚೀಲನಹಳ್ಳಿ, ಮತಿಘಟ್ಟ, ಮಾಡಾಳು ಮಾರ್ಗವಾಗಿ ರಾಜ್ಯ ಹೆದ್ದಾರಿ 152 ಕ್ಕೆ ಸೇರುವ 3.5 ಕಿ.ಮೀ ರಸ್ತೆಯನ್ನು 2 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಬರುವ ದಿನಗಳಲ್ಲಿ ಮುಂದುವರಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಹೆದ್ದಾರಿ 152 ರಿಂದ ವೈಮಲ್ಲಾಪುರ, ವಿ.ಯರದಕೆರೆ, ಕೆರೆಸಂತೆ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಸೇರುವ ರಸ್ತೆ ಕಾಮಗಾರಿ 3.50 ಕೋಟಿ ವೆಚ್ಚದಲ್ಲಿ 2.50 ಕಿ,ಮೀ ರಸ್ತೆ ಕಾಮಗಾರಿ ನಡೆಯಲಿದೆ. ರಾಜ್ಯ ಹೆದ್ದಾರಿ 152 ರಿಂದ ಚಟ್ಟನಹಳ್ಳಿ, ಮಲ್ಲಾಘಟ್ಟ ಸೋಮನಹಳ್ಳಿ ಮಾರ್ಗವಾಗಿ ಬಿವೈಎಸ್‍ಎಸ್ ರಸ್ತೆಗೆ ಸೇರುವ ಆಯ್ದ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ 4.95 ಕೋಟಿ ರು. ಮಂಜೂರಾಗಿದೆ ಇದರಲ್ಲಿ 7 ಕಿ.ಮೀ. ರಸ್ತೆ ಕಾಮಗಾರಿ ನಡೆಯಲಿದೆ. ಅಲ್ಲದೆ ಪಂಚನಹಳ್ಳಿ, ತಿಮ್ಲಾಪುರ ಮಾರ್ಗವಾಗಿ ಗರುಗದಹಳ್ಳಿ, ವನಭೋಗಿಹಳ್ಳಿ, ಸಣ್ಣೇನಹಳ್ಳಿಗೆ ಸೇರುವ ರಸ್ತೆ ಕಾಮಗಾರಿಗೆ 3.80 ಕೋಟಿ ಮಂಜೂರಾಗಿದ್ದು, ಇದರಲ್ಲಿ 3. ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.ಬೀರೂರಿನಿಂದ ಯಗಟಿ ಮಾರ್ಗವಾಗಿ ಸಿಂಗಟಗೆರೆ, ಬಾಣಾವಾರ ರಸ್ತೆ ಕಾಮಗಾರಿಗೆ 20 ಕೋಟಿ ರು. ಮಂಜೂರಾತಿಗಾಗಿ ಸಲ್ಲಿಸಿರುವ ಪ್ರಸ್ತಾವನೆ ಬಿಡುಗಡೆ ಹಂತದಲ್ಲಿದೆ. ಕಡೂರಿನ 9 ನೇ ಮೈಲಿಕಲ್ಲಿನಿಂದ ಮರವಂಜಿವರೆಗೆ ರಸ್ತೆ ಡಾಂಬರೀಕರಣವಾಗಲಿದೆ. ಕಡೂರಿನಿಂದ ಮಲ್ಲೇಶ್ವರದವರೆಗೆ ರಸ್ತೆ ಅಗಲೀಕರಣ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಲ್ಲೇಶ್ವರ-ಪುರ ರಸ್ತೆ, ಎಮ್ಮೆದೊಡ್ಡಿ ರಸ್ತೆಗಳು ಸೇರಿದಂತೆ ಜಿಲ್ಲಾ ಮುಖ್ಯರಸ್ತೆಗಳನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗಿದ್ದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಹಿಂದಿನ ಸರ್ಕಾರದ ಕಾಮಗಾರಿಗಳಿಗೆ ನೀಡಬೇಕಾದ ಅನುದಾನದ ಜೊತೆಗೆ ಹೊಸ ಕಾಮಗಾರಿಗಳಿಗೂ ಆದ್ಯತೆ ನೀಡುವ ಮೂಲಕ ರಾಜ್ಯ ಸರಕಾರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಹಲವು ರಸ್ತೆಗಳು ಸುಧಾರಣೆಯಾಗಬೇಕೆಂಬ ಉದ್ದೇಶದಿಂದ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವ ಮೂಲಕ ಆದ್ಯತೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಮತಿಘಟ್ಟ ಗ್ರಾಪಂ ಅಧ್ಯಕ್ಷ ರೇವಣ್ಣ, ಸದಸ್ಯ ಶ್ರೀಕಂಠ ಒಡೆಯರ್, ಮುಖಂಡರಾದ ಕರಿಬಡ್ಡೆ ಶ್ರೀನಿವಾಸ್, ಕುಬೇರಪ್ಪ, ಎಲ್.ಎಂ.ಪರಮೇಶ್ವರಪ್ಪ, ಎಂ.ಆರ್.ಟಿ. ಸುರೇಶ್, ಡಿ.ಉಮೇಶ್, ಹೋಚಿಹಳ್ಳಿ ಭೋಗಪ್ಪ, ಯರದಕೆರೆ ಓಂಕಾರ್, ವಸಂತಕುಮಾರ್, ರಾಕೇಶ್, ವಿನಯ್, ಶಶಿಕುಮಾರ್, ಸತೀಶ್‍ನಾಯ್ಕ, ಕುಮಾರ್, ಕೃಷ್ಣಮೂರ್ತಿ, ಪಿಡ್ಲ್ಯೂಡಿ ಎಇಇ ಬಸವರಾಜ ನಾಯ್ಕ, ಅಭಿಯಂತರರಾದ ಗಿರೀಶ್, ರಾಕೇಶ್, ಗುತ್ತಿಗೆದಾರ ಹಾಲಪ್ಪ ಗ್ರಾಮಸ್ಥರು ಮತ್ತಿತರಿದ್ದರು.--- ಬಾಕ್ಸ್ ---
ಇಂದು ಶಾಸಕನಾಗಿ ನಿಮ್ಮ ಮುಂದೆ ನಿಲ್ಲುವ ಅವಕಾಶವನ್ನು ಕಡೂರು ಕ್ಷೇತ್ರದ ಮತಿಘಟ್ಟ ಗ್ರಾಮದ ಮತ್ತು ಸುತ್ತ ಮುತ್ತಲಿನ ಗ್ರಾಮದ ಜನರು ಮಾಡಿಕೊಟ್ಟಿದ್ದಾರೆ. ಈ ಋಣವನ್ನು ನಾನು ಎಂದು ಮರೆಯಲಾರೆ ನನಗೆ ರಾಜಕೀಯ ನೀಡಿದ ಈ ಭಾಗದ ಜನರು, ರೈತರು, ಮುಖಂಡರಿಗೆ ಸದಾ ಚಿರಋಣಿಯಾಗಿರುತ್ತೇನೆ. ಹಾಗಾಗಿ ನನ್ನ ಜೀವನದಲ್ಲಿ ಮತಿಘಟ್ಟ ಹೋಬಳಿಯನ್ನು ಮರೆಯಲಾರೆ ಎಂದು ಶಾಸಕ ಕೆ.ಎಸ್.ಆನಂದ್ ಭಾವುಕರಾದರು. ನನ್ನ ತಾಯಿ ಕೂಡ ಈ ಭಾಗದ ಜಿಪಂ ಸದಸ್ಯರಾಗಿ ಆಯ್ಕೆಯಾಗಲು ಪಕ್ಷಾತೀತವಾಗಿ ಎಲ್ಲ ವರ್ಗಗಳ ಜನರು ಮತ ನೀಡಿ ನನಗೂ ಹೆಚ್ಚಿನ ಮತ ನೀಡಿ ಗ್ರಾಮದ ಮಗನಂತೆ ಹರಸಿದ್ದೀರಿ. ಸದಾ ನಿಮ್ಮ ಸೇವಕನಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಹೇಳಿದರು. 11ಕೆಕೆಡಿಯು1.(ಕಡೂರು ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ಅಪೆಂಡಿಕ್ಸ್-ಇ ಶೀರ್ಷಿಕೆಯಡಿ ಮಂಜೂರಾಗಿರುವ 2 ಕೋಟಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿಪೂಜೆ ನೆರವೇರಿಸಿದರು. ರೇವಣ್ಣ, ಶ್ರೀಕಂಠಒಡೆಯರ್, ಕರಿಬಡ್ಡೆಶ್ರೀನಿವಾಸ್, ಕುಬೇರಪ್ಪ, ರಾಕೇಶ್ ಮತ್ತಿತರಿದ್ದರು.)