ಆದಾಯ ತೆರಿಗೆ ತುಂಬುತ್ತಿರುವ ಹಾಗೂ ಮೃತ ಮಹಿಳೆಯರ ಅಕೌಂಟ್‌ಗಳಿಗೆ ಗೃಹಲಕ್ಷ್ಮೀ ಯೋಜನೆ ಹಣ ಹೋಗುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರ ಬಗ್ಗೆ ಪರಿಶೀಲಿಸಿ ಅಂತಹ ಅನರ್ಹ ಫಲಾನುಭವಿಗಳನ್ನು ಈಗಾಗಲೇ ಯೋಜನೆಯಿಂದ ಕೈ ಬಿಡಲಾಗಿದೆ.
ಧಾರವಾಡ:
ಸರ್ಕಾರದ ಸಾಕಷ್ಟು ಯೋಜನೆಗಳ ಫಲ ನೈಜ, ಬಡ ಫಲಾನುಭವಿಗಳ ಜತೆಗೆ ಉಳ್ಳವರ ಪಾಲಾಗುವುದು ಸಾಮಾನ್ಯ ಸಂಗತಿ. ಅದೆಷ್ಟೋ ಶ್ರೀಮಂತರು, ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದು ಈ ಬಗ್ಗೆ ನಿರಂತರ ಪರಿಶೀಲನೆ ನಡೆಯುತ್ತಿದೆ. ಇದು ಒಂದೆಡೆಯಾದರೆ, ಈಗ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಯಲ್ಲೂ ಇರುವ ಅನರ್ಹರ ಹುಡುಕಾಟ ಶುರು ಮಾಡಿದೆ.ಧಾರವಾಡ ಜಿಲ್ಲೆ ಸೇರಿ ರಾಜ್ಯದೆಲ್ಲೆಡೆ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯಲ್ಲಿ ಅನರ್ಹರಿರುವ ಫಲಾನುಭವಿಗಳನ್ನು ಹುಡುಕಿ ಯೋಜನೆಯ ಲಾಭದಿಂದ ಕೈ ಬಿಡಲಾಗುತ್ತಿದೆ. ಆದಾಯ ತೆರಿಗೆ ತುಂಬುತ್ತಿರುವ ಹಾಗೂ ಮೃತ ಮಹಿಳೆಯರ ಅಕೌಂಟ್‌ಗಳಿಗೆ ಗೃಹಲಕ್ಷ್ಮೀ ಯೋಜನೆ ಹಣ ಹೋಗುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರ ಬಗ್ಗೆ ಪರಿಶೀಲಿಸಿ ಅಂತಹ ಅನರ್ಹ ಫಲಾನುಭವಿಗಳನ್ನು ಈಗಾಗಲೇ ಯೋಜನೆಯಿಂದ ಕೈ ಬಿಡಲಾಗಿದೆ.
4,04,187 ಫಲಾನುಭವಿ:ಜಿಲ್ಲೆಯಲ್ಲಿ 4,04,187 ಫಲಾನುಭವಿಗಳಿದ್ದು ಇದರಲ್ಲಿ 6019 ಜನರು ಆದಾಯ ತೆರಿಗೆ ತುಂಬುತ್ತಿದ್ದಾರೆ. ಅಲ್ಲದೇ, 378 ಮಹಿಳೆಯರು ಸಾವನ್ನಪ್ಪಿದ್ದರೂ ಅವರ ಖಾತೆಗೆ ಹಣ ಹೋಗಿದೆ. ಈಗ ಇಂತಹ ಅನರ್ಹರ ಪಟ್ಟಿ ದೊರೆದಿದ್ದು, ಮೇ ತಿಂಗಳಿಂದ ಅವರ ಅಕೌಂಟ್‌ಗೆ ಮಾಸಿಕ ₹ 2 ಸಾವಿರ ಹಾಕುವುದನ್ನು ನಿಲ್ಲಿಸಲಾಗಿದೆ. ಜತೆಗೆ ಮೃತ ಫಲಾನುಭವಿಗಳ ಕುಟುಂಬದವರ ಮನವೊಲಿಸಿ ಮೃತರಾದ ನಂತರ ಎಷ್ಟು ಕಂತು ಹೋಗಿದೆ ಎಂಬುದನ್ನು ತಿಳಿದು ವಸೂಲಿಗೆ ಸರ್ಕಾರ ಮುಂದಾಗಿದೆ.
ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಧಾರವಾಡ ತಾಲೂಕು ಅಧ್ಯಕ್ಷ ಅರವಿಂದ ಏಗನಗೌಡರ, ಪ್ರತಿ ಕುಟುಂಬ ನಡೆಸಲು ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆಂದು ಅವರ ಖಾತೆಗೆ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಹೆಸರಿನಲ್ಲಿ ಪ್ರತಿ ತಿಂಗಳು ₹ 2 ಸಾವಿರ ಹಾಕುತ್ತಿದೆ. ಇಲ್ಲಿಯ ವರೆಗೆ ಜಿಲ್ಲೆಯಲ್ಲಿ 4 ಲಕ್ಷ ಫಲಾನುಭವಿಗಳಿಗೆ 31 ಕಂತು (ತಲಾ ₹ 2 ಸಾವಿರ) ಹಾಕಲಾಗಿದೆ. ಆದರೆ, ಆದಾಯ ತೆರಿಗೆ ತುಂಬುವ ಹಾಗೂ ಮೃತರ ಖಾತೆಗೂ ಹಣ ಹೋಗುತ್ತಿರುವ ಹಿನ್ನೆಲೆಯಲ್ಲಿ ಅಂತಹವರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಮಾಹಿತಿ ನೀಡಿದರು.ಮೃತ ಫಲಾನುಭವಿಗಳ ಮಾಹಿತಿಯನ್ನು ಸ್ಥಳೀಯ ಅಂಗನವಾಡಿ ಹಾಗೂ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಕಲೆ ಹಾಕಲಾಗಿದೆ. ಮರಣ ಪ್ರಮಾಣ ಪತ್ರ ಆಧರಿಸಿಯೇ ಅವರಿಗೆ ಮೇ ತಿಂಗಳಿಂದ ಹಣ ಹಾಕುತ್ತಿಲ್ಲ. ಆದರೆ, ಮೃತರಾದ ನಂತರವೂ ಈ ಹಿಂದೆ ಹಾಕಿದ್ದ ಹಣವನ್ನು ಕುಟುಂಬದವರ ಮನವೊಲಿಸಿ ವಸೂಲಿ ಮಾಡಲಾಗುವುದು ಎಂದು ಏಗನಗೌಡರ ತಿಳಿಸಿದರು.