ಸಾರಾಂಶ
ಬೆಂಗಳೂರು : ದೇವನಹಳ್ಳಿ ಬಳಿ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ನಿರ್ಮಿಸಲು ರೈತರಿಂದ ಕೆಐಎಡಿಬಿ 1,777 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಚಿಂತಕರು, ವಿಜ್ಞಾನಿಗಳು, ಬರಹಗಾರರು, ಕಲಾವಿದರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ ಬರೆದಿರುವ ಪತ್ರಕ್ಕೆ 65 ಜನ ಜನರ ಪರವಾಗಿ ಕರ್ನಾಟಕ ಕೃಷಿ ಉತ್ಪನ್ನಗಳ ದರಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ ಕಮ್ಮರಡಿ ಸಹಿ ಹಾಕಿದ್ದಾರೆ.
ಫಲವತ್ತಾದ ಕೃಷಿ ಜಮೀನು ಭೂಸ್ವಾಧೀನ ವಿರೋಧಿಸಿ 13 ಗ್ರಾಮಗಳ ರೈತರು ಕಳೆದ 3 ವರ್ಷಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇವರ ನೈಜ ಹೋರಾಟಕ್ಕೆ ರೈತ ಸಂಘಟನೆಗಳು, ದಲಿತ, ಮಹಿಳಾ, ಯುವ ಸಂಘಟನೆಗಳು ವ್ಯಾಪಕವಾಗಿ ಬೆಂಬಲಿಸಿವೆ. ರೈತರ ಜಮೀನು ಭೂಸ್ವಾಧೀನಪಡಿಸಿಕೊಳ್ಳುವುದರಿಂದ ಹಿಂದೆ ಸರಿಯುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಈಗ ತನ್ನ ನಿಲುವು ಬದಲಿಸಿದೆ. ಹೀಗಾಗಿ, ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.
ರೈತರ ಜಮೀನು ವಶಪಡಿಸಿಕೊಂಡರೆ ಭೂ ಸ್ವಾಧೀನ ಕಾಯ್ದೆ 2013ರಲ್ಲಿನ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ. 2022ರಲ್ಲಿ ಕೆಐಎಡಿಬಿ ನಡೆಸಿದ ಸರ್ವೇ ಪ್ರಕಾರ, ಶೇ.80ರಷ್ಟು ರೈತರು ಭೂಸ್ವಾಧೀನ ವಿರೋಧಿಸಿದ್ದಾರೆ. ಅಲ್ಲದೇ, ಜಮೀನು ಕಳೆದುಕೊಳ್ಳುವ ರೈತರಲ್ಲಿ 163 ಜನ ಎಸ್ಸಿ, ಎಸ್ಟಿ ಸಮುದಾಯದವರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ವಾಪಸ್ ಪಡೆಯುವುದರಿಂದ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
ರಾಜ್ಯದಲ್ಲಿ ಪರ್ಯಾಯ ಜಮೀನು ಸಾಕಷ್ಟು ಲಭ್ಯವಿದ್ದರೂ ಫಲವತ್ತಾದ ಜಮೀನು ಪಡೆಯುವುದು ಸರಿಯಲ್ಲ. ಇನ್ನು ಕೆಐಎಡಿಬಿಯ ಕಾರ್ಯ ನಿರ್ವಹಣೆ ಕುರಿತಾಗಿಯು ಸಿಎಜಿ ವರದಿಯಲ್ಲಿ ಆಕ್ಷೇಪಣೆಗಳು ವ್ಯಕ್ತವಾಗಿವೆ. ಭೂಸ್ವಾಧೀನ, ಸೈಟ್‌ಗಳ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು, ಪರಿಸರ ಸಂಬಂಧಿಸಿದ ನಿಯಮಗಳನ್ನು ಪಾಲಿಸದಿರುವುದು ಸೇರಿದಂತೆ ಅನೇಕ ನಿಯಮಗಳನ್ನು ಕೆಐಎಡಿಬಿ ಉಲ್ಲಂಘಿಸಿರುವ ಸಿಎಜಿ ವರದಿಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇತಿಹಾಸಕಾರ ರಾಮಚಂದ್ರ ಗುಹಾ, ಲೇಖಕ ದೇವನೂರು ಮಹಾದೇವ, ಪರಿಸರತಜ್ಞ ಡಾ.ಎ.ಎನ್. ಯಲ್ಲಪ್ಪರೆಡ್ಡಿ, ನಟ ಕಿಶೋರ್ ಸೇರಿದಂತೆ 65 ಜನರು ಭೂಸ್ವಾಧೀನಕ್ಕೆ ಆಕ್ಷೇಪಿಸಿರುವುದನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರದ ಮೂಲಕ ತಿಳಿಸಲಾಗಿದೆ.