ಕ.ಕರ್ನಾಟಕದಲ್ಲಿ ₹650 ಕೋಟಿ ಕಾಮಗಾರಿಗೆ ಚಾಲನೆ

| Published : Sep 18 2025, 01:10 AM IST

ಕ.ಕರ್ನಾಟಕದಲ್ಲಿ ₹650 ಕೋಟಿ ಕಾಮಗಾರಿಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಮಾರಂಭದಲ್ಲಿ ಮಹತ್ವಾಕಾಂಕ್ಷಿಯಾದ ಕೆಕೆಆರ್‌ಡಿಬಿ ಹಾರ್ಟ್ ಲೈನ್ ಯೋಜನೆ ಸೇರಿದಂತೆ ವಿಭಾಗದ ಕೆ.ಕೆ.ಆರ್.ಡಿ.ಬಿ ಮತ್ತು ಇತರೆ ಇಲಾಖೆಯ ₹570.05 ಕೋಟಿ ಮೊತ್ತದ 133 ಕಾಮಗಾರಿಗಳಿಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಮಾರಂಭದಲ್ಲಿ ಮಹತ್ವಾಕಾಂಕ್ಷಿಯಾದ ಕೆಕೆಆರ್‌ಡಿಬಿ ಹಾರ್ಟ್ ಲೈನ್ ಯೋಜನೆ ಸೇರಿದಂತೆ ವಿಭಾಗದ ಕೆ.ಕೆ.ಆರ್.ಡಿ.ಬಿ ಮತ್ತು ಇತರೆ ಇಲಾಖೆಯ ₹570.05 ಕೋಟಿ ಮೊತ್ತದ 133 ಕಾಮಗಾರಿಗಳಿಗೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ, ಅಡಿಗಲ್ಲು ಮತ್ತು ₹79.41 ಕೋಟಿ ಮೊತ್ತದ 26 ಕಾಮಗಾರಿಗಳ ಲೋಕಾರ್ಪಣೆ ಸೇರಿ ಒಟ್ಟಾರೆ ₹649.47 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಕಲಬುರಗಿಯ ಪರೇಡ್‌ ಮೈದಾನದಲ್ಲಿನ ಕಲ್ಯಾಣ ಕರ್ನಾಟಕ ಉತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿಗಳು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೆ.ಕೆ.ಆರ್.ಡಿ.ಬಿ. ಅನುದಾನದಡಿಯಲ್ಲಿ ₹350.05 ಕೋಟಿ ಮೊತ್ತದ 112 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರೆ ₹3.35 ಕೋಟಿ ಮೊತ್ತದ 4 ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು. ಅದೇ ರೀತಿ ವಿವಿಧ ಇಲಾಖೆಯ ₹220 ಕೋಟಿ ಮೊತ್ತದ 21 ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ₹76.06 ಕೋಟಿ ಮೊತ್ತದ 22 ಕಾಮಗಾರಿಗಳನ್ನು ಉದ್ಘಾಟಿಸಿ ಪ್ರದೇಶಕ್ಕೆ ಸಮರ್ಪಿಸಿದರು.

ಹಾರ್ಟ್ ಲೈನ್ ಯೋಜನೆಗೆ ಚಾಲನೆ:

ಹೃದ್ರೋಗದಿಂದ ಸಾವನಪ್ಪುವರ ಸಂಖ್ಯೆ ತಗ್ಗಿಸಲು ಮತ್ತು ಹೃದಯಾಘಾತಕ್ಕೆ ಒಳಗಾದವರಿಗೆ ಗೋಲ್ಡನ್ ಅವರ್‌ನಲ್ಲಿ ತ್ವರಿತವಾಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ ₹9.60 ಕೋಟಿ ಮೊತ್ತದಲ್ಲಿ ಕೆ.ಕೆ.ಆರ್.ಡಿ.ಬಿ. ಹಾರ್ಟ್ ಲೈನ್ ಯೋಜನೆಗೆ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಯೋಜನೆಯಡಿ ಕಲಬುರಗಿ ಜಿಲ್ಲೆಗೆ 9, ಬೀದರ್‌-4, ಯಾದಗಿರಿ-2, ರಾಯಚೂರು-5, ಬಳ್ಳಾರಿ-4, ಕೊಪ್ಪಳ-5, ವಿಜಯನಗರ-3 ಸೇರಿದಂತೆ ಒಟ್ಟು ಅತ್ಯಾಧುನಿಕ 32 ಆ್ಯಂಬುಲೆನ್ಸ್‌ ವಾಹನಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ವೇಳೆ ಮಾತನಾಡಿದ ಸಿಎಂ, 371 (ಜೆ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ 41,103 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 32,985 ಕಾಮಗಾರಿಗಳು ಪೂರ್ಣಗೊಂಡಿವೆ. ಈ ಉದ್ದೇಶಕ್ಕಾಗಿ ₹24,780 ಕೋಟಿ ಅನುದಾನ ಒದಗಿಸಲಾಗಿದ್ದು, ಈ ಪೈಕಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ಇದರ ಜೊತೆಗೆ, 84,620 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.

ಕೆಕೆಆರ್‌ಡಿಬಿ ಕಾರ್ಯಕ್ರಮಗಳ ಕುರಿತು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಶಿಕ್ಷಣ ಕ್ಷೇತ್ರದಲ್ಲಿ ‘ಅಕ್ಷರ ಆವಿಷ್ಕಾರ’ ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ 5,267 ಶಿಕ್ಷಕರನ್ನು ಒದಗಿಸುವುದರ ಜೊತೆಗೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸದಾಗಿ 350 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ನಿರ್ಮಿಲಾಗುವುದು ಎಂದರು.ಆರೋಗ್ಯ ವಲಯದಲ್ಲಿ ಕ್ರಾಂತಿ ಮಾಡಲಾಗಿದ್ದು, ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ, ತಾಯಿ-ಮಕ್ಕಳ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ, ನಿಮ್ಹಾನ್ಸ್ ಮಾದರಿಯ ಕೇಂದ್ರ, ಜಯದೇವ ಹೃದ್ರೋಗಗಳ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯನ್ನು ಆರಂಭಿಸಲಾಗಿದ್ದು, ಕಲಬುರಗಿ ನಗರವನ್ನು ರೀಜನಲ್ ಹೆಲ್ತ್ ಹಬ್ ಹಾಗೂ ಕ್ರೀಡಾ ನಗರಿಯನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡಲು, ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕಳೆದ ಎರಡು ವರ್ಷದಿಂದ ‘ಅಕ್ಷರ ಆವಿಷ್ಕಾರ’ ಕಾರ್ಯಕ್ರಮ ರೂಪಿಸಿ, ಇದುವರೆಗೆ ₹6,000 ಕೋಟಿ ರು.ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಒಟ್ಟು 5,267 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ಭರ್ತಿ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಈ ವರ್ಷದಿಂದ 10ನೇ ತರಗತಿಯ ಮಕ್ಕಳಿಗೆ ವಿಶೇಷ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಒಟ್ಟು 350 ಕೆ.ಪಿ.ಎಸ್. ಶಾಲೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ನಿರ್ಮಿಸುವ ಗುರಿ ಹೊಂದಿದ್ದೇವೆ. ಇದಲ್ಲದೆ ಉನ್ನತ ಶಿಕ್ಷಣಕ್ಕೂ ಕಳೆದ ಎರಡು ವರ್ಷಗಳಲ್ಲಿ ₹250 ಕೋಟಿಗಳನ್ನು ಒದಗಿಸಿದ್ದೇವೆ ಎಂದು ತಿಳಿಸಿದರು.

ಸಚಿವ ಭೈರತಿ ಸುರೇಶ್, ಡಿ.ಎಸ್.ಸುಧಾಕರ, ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕ ಅಲ್ಲಮಪ್ರಭು ಪಾಟೀಲ್, ಕನಿಜ್ ಫಾತಿಮಾ, ಎಂ.ವೈ.ಪಾಟೀಲ್, ಬಿ.ಆರ್.ಪಾಟೀಲ್, ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಶಿಲ್ ನಮೋಶಿ, ಜಗದೇವ ಗುತ್ತೇದಾರ್ ಇದ್ದರು.